ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | CSK vs MI- ರೋಹಿತ್ ಶರ್ಮಾ ಸೆಂಚುರಿ ಹೊರತಾಗಿಯೂ ಸೋತ ಮುಂಬೈ

ಇಂದು ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್‌ಗಳಿಂ ಗೆದ್ದು ಬೀಗಿತು.
Published 14 ಏಪ್ರಿಲ್ 2024, 14:01 IST
Last Updated 14 ಏಪ್ರಿಲ್ 2024, 18:26 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಥೀಷ ಪಥಿರಾಣ (4–0–28–4) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಮುಂದೆ ರೋಹಿತ್‌ ಶರ್ಮಾ (ಔಟಾಗದೆ 105; 63ಎ, 4x11, 6x5) ಅವರ ಶತಕದ ಆಟ ಮಸುಕಾಯಿತು. ಭಾನುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಋತುರಾಜ್‌ ಗಾಯಕವಾಡ ಮತ್ತು ಶಿವಂ ದುಬೆ ಅವರ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 20 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿತು.


207 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡಕ್ಕೆ ರೋಹಿತ್‌ ಶರ್ಮಾ ಮತ್ತು ಇಶಾನ್‌ ಕಿಶನ್‌ ಉತ್ತಮ ಆರಂಭ ಒದಗಿಸಿದರು. ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 7 ಓವರ್‌ಗಳಲ್ಲಿ 70 ರನ್‌ ಸೇರಿಸಿದ್ದರು. ಈ ಹಂತದಲ್ಲಿ ಪಥಿರಾಣ ಆತಿಥೇಯ ತಂಡಕ್ಕೆ ಮೊದಲ ಆಘಾತ ನೀಡಿದರು. ಹಿಂದಿನ ಪಂದ್ಯದಲ್ಲಿ ಅರ್ಧಶತಕಗಳ ಮೂಲಕ ಮಿಂಚಿದ್ದ ಇಶಾನ್‌ (23) ಮತ್ತು ಸೂರ್ಯಕುಮಾರ್‌ ಯಾದವ್‌ (0) ಅವರ ವಿಕೆಟ್‌ ಪಡೆದರು.

ಮೂರನೇ ವಿಕೆಟ್‌ ಜೊತೆಯಾಟದಲ್ಲಿ ರೋಹಿತ್‌ ಅವರು ತಿಲಕ್‌ ವರ್ಮಾ (31) ಅವರೊಂದಿಗೆ 60 ರನ್‌ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ, ಮತ್ತೆ ಪಥಿರಾಣ ದಾಳಿಗಿಳಿದು ತಿಲಕ್‌ ವರ್ಮಾ ಅವರನ್ನು ಔಟ್‌ ಮಾಡಿದರು. ನಂತರ ಬಂದ ನಾಯಕ ಹಾರ್ದಿಕ್‌ ಪಾಂಡ್ಯ (2), ಟಿಮ್‌ ಡೇವಿಡ್‌ (13), ರೊಮಾರಿಯೋ ಶೆಫರ್ಡ್ (1) ಮತ್ತೆ ವೈಫಲ್ಯ ಅನುಭವಿಸಿದರು. ಒಂದೆಡೆ ರೋಹಿತ್‌ ಏಕಾಂಗಿಯಾಗಿ ಹೋರಾಟ ನಡೆಸಿದರೂ ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಅವರು ಕೊನೆಯ ಓವರ್‌ನಲ್ಲಿ ಬೌಂಡರಿ ಬಾರಿಸಿ ಶತಕವನ್ನು ಪೂರೈಸಿದರು. ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್‌ ಗಳಿಸಲಷ್ಟೇ ಶಕ್ತವಾಯಿತು. ತುಷಾರ್‌ ದೇಶಪಾಂಡೆ ಮತ್ತು ಮುಸ್ತಫಿಜುರ್ ರೆಹಮಾನ್ ತಲಾ ಒಂದು ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 206 ರನ್ ಗಳಿಸಿತು. ನಾಯಕ ಋತುರಾಜ್ ಗಾಯಕವಾಡ (69; 40ಎ) ಮತ್ತು ಶಿವಂ ದುಬೆ (ಅಜೇಯ 66; 38ಎ) ಅವರು ಕಟ್ಟಿದ ರನ್‌ಸೌಧದ ಮಹೇಂದ್ರಸಿಂಗ್ ಧೋನಿ ಕಳಸವಿಟ್ಟರು. 500ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು. 

ಮಹೇಂದ್ರಸಿಂಗ್ ಧೋನಿ ಅವರು ವಾಂಖೆಡೆ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಇನಿಂಗ್ಸ್‌ನಲ್ಲಿ ಕೊನೆಯ ನಾಲ್ಕು ಎಸೆತಗಳು ಬಾಕಿಯಿದ್ದಾಗ ಧೋನಿ ಕ್ರೀಸ್‌ಗೆ ಬಂದರು. ಅವರ ಅಭಿಮಾನಿಗಳ ಹರ್ಷೋದ್ಘಾರಗಳಿಗೆ ಇಡೀ ಕ್ರೀಡಾಂಗಣವೇ ಕಂಪಿಸಿತು. ಹಾರ್ದಿಕ್ ಪಾಂಡ್ಯ ಹಾಕಿದ ಓವರ್‌ನಲ್ಲಿ ತಾವೆದುರಿಸಿದ ಮೊದಲ ಮೂರು ಎಸೆತಗಳನ್ನೂ ಸಿಕ್ಸರ್‌ಗೆತ್ತಿದರು. ಕೊನೆಯ ಎಸೆತದಲ್ಲಿ ಎರಡು ರನ್ ಓಡಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಾಲಿವುಡ್ ನಟ, ನಟಿಯರೂ ಸಂತಸದಿಂದ ಕುಣಿದಾಡಿದರು. ಧೋನಿ ಅವರು ಈ ಕ್ರೀಡಾಂಗಣದಲ್ಲಿ ಆಡುತ್ತಿರುವ ಕೊನೆಯ ಪಂದ್ಯ ಇದಾಗಲಿದೆ ಎಂದೂ ಹೇಳಲಾಗುತ್ತಿದೆ.

ಎರಡನೇ ಓವರ್‌ನಲ್ಲಿ ಗೆರಾಲ್ಡ್‌ ಕೋಝಿ ಎಸೆತದಲ್ಲಿ ಅಜಿಂಕ್ಯ ರಹಾನೆ ಔಟಾದರು. ರಚಿನ್ ರವೀಂದ್ರ (21; 16ಎ, 4X2, 6X1) ಅವರೊಂದಿಗೆ ಸೇರಿದ ನಾಯಕ ಋತುರಾಜ್ ಪವರ್‌ಪ್ಲೇನಲ್ಲಿ ರನ್‌ಗಳು ತಂಡದ ಖಾತೆ ಸೇರುವಂತೆ ನೋಡಿಕೊಂಡರು.

ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 206 (ರಚಿನ್ ರವೀಂದ್ರ 21, ಋತುರಾಜ್ ಗಾಯಕವಾಡ 69, ಶಿವಂ ದುಬೆ ಔಟಾಗದೆ 66, ಡ್ಯಾರಿಲ್ ಮಿಚೆಲ್ 17, ಮಹೇಂದ್ರಸಿಂಗ್ ಧೋನಿ ಔಟಾಗದೆ 20, ಹಾರ್ದಿಕ್ ಪಾಂಡ್ಯ 43ಕ್ಕೆ2, ಶ್ರೇಯಸ್ ಗೋಪಾಲ್ 9ಕ್ಕೆ1, ಗೆರಾಲ್ಡ್ ಕೋಝಿ 35ಕ್ಕೆ1)

ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ ಔಟಾಗದೆ 105, ಇಶಾನ್‌ ಕಿಶನ್‌ 23, ತಿಲಕ್‌ ವರ್ಮಾ 31; ಮಥೀಷ ಪಥಿರಾಣ 28ಕ್ಕೆ 4, ತುಷಾರ್‌ ದೇಶಪಾಂಡೆ 29ಕ್ಕೆ 1.

ಪಂದ್ಯದ ಆಟಗಾರ: ಮಥೀಷ ಪಥಿರಾಣ

ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 20 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT