ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಚಾಂಪಿಯನ್ ಚೆನ್ನೈಗೆ ಸನ್‌ ಸವಾಲು

ಮುಸ್ತಫಿಜುರ್ ಗೈರು; ಮತ್ತೊಂದು ರನ್‌ ಹೊಳೆಯ ನಿರೀಕ್ಷೆಯಲ್ಲಿ ಹೈದರಾಬಾದ್
Published 5 ಏಪ್ರಿಲ್ 2024, 0:30 IST
Last Updated 5 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಹೈದರಾಬಾದ್: ವೇಗಿ ಮುಸ್ತಫಿಜುರ್ ರೆಹಮಾನ್ ಅವರಿಲ್ಲದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ‘ಸ್ಫೋಟಕ ಶೈಲಿ‘ ಬ್ಯಾಟರ್‌ಗಳಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಶುಕ್ರವಾರ ಕಣಕ್ಕಿಳಿಯಲಿದೆ. 

ಯುವ ನಾಯಕ ಋತುರಾಜ್ ಗಾಯಕವಾಡ್ ಅವರ ಬಳಗವು ಮೂರು ಪಂದ್ಯಗಳನ್ನಾಡಿದ್ದು ಎರಡರಲ್ಲಿ ಜಯಿಸಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋತಿತ್ತು. ‘ಚಾಂಪಿಯನ್‘ ಮಹೇಂದ್ರಸಿಂಗ್ ಧೋನಿಯ ಮಾರ್ಗದರ್ಶನ ಮತ್ತು ಅಬ್ಬರದ ಬ್ಯಾಟಿಂಗ್ ಬಲ ಚೆನ್ನೈ ತಂಡಕ್ಕೆ ಇದೆ. 

ಆದರೆ ಸನ್‌ರೈಸರ್ಸ್ ತಂಡದ ರನ್‌ ಗಳಿಕೆಯ ವೇಗಕ್ಕೆ ಕಡಿವಾಣ ಹಾಕುವುದೇ ಚೆನ್ನೈ ಮುಂದಿರುವ ಪ್ರಮುಖ ಸವಾಲು. ಹೋದ ವಾರ ಇದೇ ಉಪ್ಪಳದ ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿದ್ದ ತಂಡವು ಐಪಿಎಲ್‌ನ ಗರಿಷ್ಠ ಮೊತ್ತ (277 ರನ್) ಗಳಿಸಿತ್ತು. ಆ ಪಂದ್ಯದಲ್ಲಿ ಗೆದ್ದಿತ್ತು. ಆದರೆ ನಂತರದ ಪಂದ್ಯದಲ್ಲಿ (ಅಹಮದಾಬಾದ್‌ನಲ್ಲಿ ನಡೆದಿತ್ತು)  ಗುಜರಾತ್ ಎದುರು ಸೋತಿತ್ತು. ಸನ್‌ರೈಸರ್ಸ್ ತಂಡವು 162 ರನ್‌ಗಳ ಗುರಿಯೊಡ್ಡಿತ್ತು. ಈ ರೀತಿ ಅನಿರೀಕ್ಷಿತ ಪ್ರದರ್ಶನಗಳನ್ನು ನೀಡುತ್ತಿರುವುದರಿಂದ ಋತುರಾಜ್ ಬಳಗವು ಹೆಚ್ಚು ಜಾಗರೂಕತೆಯಿಂದ ಯೋಜನೆ ಹೆಣೆಯುವ ಸವಾಲು ಇದೆ. 

ಚೆನ್ನೈ ತಂಡದ ಬೌಲರ್ ದೀಪಕ್ ಚಾಹರ್, ಮಥೀಷ ಪಥಿರಾಣ, ಮಹೀಷ ತೀಕ್ಷಣ, ತುಷಾರ್ ದೇಶಪಾಂಡೆ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ ಅವರ ಮೇಲೆ ಹೆಚ್ಚಿನ ಹೊಣೆ ಇದೆ. ಸನ್‌ ತಂಡದ ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಟ್ರಾವಿಸ್ ಹೆಡ್ ಹಾಗೂ ಏಡನ್ ಮರ್ಕರಂ ಅವರು ಅಬ್ಬರಿಸದಂತೆ ತಡೆಯಬೇಕಿದೆ. 

ಚೆನ್ನೈ ತಂಡದ ಋತುರಾಜ್, ಅಜಿಂಕ್ಯ, ಶಿವಂ ದುಬೆ, ರಚಿನ್ ರವೀಂದ್ರ ಹಾಗೂ ಧೋನಿ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಧೋನಿ 16 ಎಸೆತಗಳಲ್ಲಿ 37 ರನ್‌ ಸೂರೆ ಮಾಡಿದ್ದರು. ಅವರು ಹೊಡೆದಿದ್ದ ಮೂರು ಸಿಕ್ಸರ್‌ಗಳು ಪ್ರೇಕ್ಷಕರ ಸಂಭ್ರಮಕ್ಕೆ ಕಿಚ್ಚು ಹಚ್ಚಿದ್ದವು. 42 ವರ್ಷದ ಮಹಿ ವಿಕೆಟ್‌ ಕೀಪಿಂಗ್‌ನಲ್ಲಿಯೂ ಚುರುಕಾಗಿ ಆಡುತ್ತಿದ್ದಾರೆ. 

ಪಿಚ್‌ ಹೇಗಿದೆ?

ಈ ಆವೃತ್ತಿಯಲ್ಲಿ ಹೈದರಾಬಾದ್ ಕ್ರೀಡಾಂಗಣದ ಪಿಚ್‌ನಲ್ಲಿ ಒಂದೇ ಪಂದ್ಯ ನಡೆದಿದೆ. ಅದರಲ್ಲಿ ರನ್ ಹೊಳೆ ಹರಿದಿತ್ತು. ಇದೀಗ ಎರಡನೇ ಪಂದ್ಯದಲ್ಲಿಯೂ ಸಪಾಟಾದ ವಿಕೆಟ್‌ನಲ್ಲಿ ಬ್ಯಾಟರ್‌ಗಳು ಮಿಂಚಿದರೆ ಅಚ್ಚರಿಯೇನಿಲ್ಲ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೊ ಸಿನಿಮಾ ಆ್ಯಪ್ 

ಪ್ಯಾಟ್‌ ಕಮಿನ್ಸ್ ಮತ್ತು ಸಹ ಆಟಗಾರರು  –ಪಿಟಿಐ ಚಿತ್ರ
ಪ್ಯಾಟ್‌ ಕಮಿನ್ಸ್ ಮತ್ತು ಸಹ ಆಟಗಾರರು  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT