ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಲಯನ್ಸ್‌’ ಸೆರೆಹಿಡಿದ ಮಿಸ್ಟಿಕ್ಸ್‌

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌: ಮಿಂಚಿದ ಲವನೀತ್‌, ಅಭಿಷೇಕ್ ಪ್ರಭಾಕರ್
Published : 21 ಆಗಸ್ಟ್ 2024, 15:56 IST
Last Updated : 21 ಆಗಸ್ಟ್ 2024, 15:56 IST
ಫಾಲೋ ಮಾಡಿ
Comments

ಬೆಂಗಳೂರು: ಗುಲ್ಬರ್ಗ ಮಿಸ್ಟಿಕ್ಸ್ ತಂಡ, ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಬುಧವಾರ ಶಿವಮೊಗ್ಗ ಲಯನ್ಸ್ ತಂಡವನ್ನು 9 ವಿಕೆಟ್‌ಗಳಿಂದ ನಿರಾಯಾಸವಾಗಿ ಸೋಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಲಯನ್ಸ್ ತಂಡ, ಗುಲ್ಬರ್ಗದ ವೇಗದ ದಾಳಿಗೆ ಸಿಲುಕಿ 18.1 ಓವರುಗಳಲ್ಲಿ 126 ರನ್‌ಗಳಿಗೆ ಕುಸಿಯಿತು. ಆರಂಭ ಆಟಗಾರ ಹಾಗೂ ವಿಕೆಟ್‌ ಕೀಪರ್‌ ಲವನೀತ್ ಸಿಸೋಡಿಯಾ ಆಕ್ರಮಣಕಾರಿಯಾಗಿ ಆಡಿ ಅಜೇಯ 62 ರನ್ (35ಎ, 4x5, 6x5) ಗಳಿಸುವ ಮೂಲಕ ಮಿಸ್ಟಿಕ್ಸ್ ತಂಡ 11.4 ಓವರುಗಳಲ್ಲಿ 1 ವಿಕೆಟ್‌ಗೆ 127 ರನ್ ಗಳಿಸಿ ಸುಲಭ ಗೆಲುವು ದಾಖಲಿಸಿತು.

ವೇಗದ ಬೌಲಿಂಗ್‌ನಲ್ಲಿ 22 ರನ್ನಿಗೆ 3 ವಿಕೆಟ್‌ ಪಡೆದ ಗುಲ್ಬರ್ಗ ತಂಡದ ಅಭಿಷೇಕ್ ಪ್ರಭಾಕರ್ ನಂತರ 14 ಎಸೆತಗಳಲ್ಲಿ ಅಜೇಯ 31 ರನ್ ಸಿಡಿಸಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ಇದು ಗುಲ್ಬರ್ಗ ಮಿಸ್ಟಿಕ್ಸ್‌ಗೆ ಎರಡನೇ ಗೆಲುವಾಗಿದ್ದು ಅದು ಐದು ಪಾಯಿಂಟ್ಸ್ ಸಂಗ್ರಹಿಸಿದೆ. ಶಿವಮೊಗ್ಗ ಆಡಿದ ಐದರಲ್ಲೂ ಸೋತಿದೆ.

ಲವನೀತ್ ಮತ್ತು ನಾಯಕ ದೇವದತ್ತ ಪಡಿಕ್ಕಲ್ (27, 24ಎ) ಅವರು ಮೊದಲ ವಿಕೆಟ್‌ಗೆ ಕೇವಲ 7.1 ಓವರುಗಳಲ್ಲಿ 77 ರನ್‌ ಸೇರಿಸಿ ಗುಲ್ಬರ್ಗ ತಂಡದ ವಿಜಯಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ವೇಗದ ಬೌಲರ್ ವಿ.ಕೌಶಿಕ್‌ ಮಾಡಿದ ಇನಿಂಗ್ಸ್‌ನ ಮೊದಲ ಓವರಿನಲ್ಲೇ ಲಾಂಗ್‌ ಆನ್‌ಗೆ ಬೌಂಡರಿ ಹೊಡೆದ ಲವನೀತ್ ನಂತರ ಡೀಪ್‌ ಮಿಡ್‌ವಿಕೆಟ್‌ಗೆ ಪುಲ್ ಮಾಡಿ ಸಿಕ್ಸರ್ ಎತ್ತಿ ಆಕ್ರಮಣದ ಇರಾದೆಯನ್ನು ಸ್ಪಷ್ಟಪಡಿಸಿದರು.

ಪಡಿಕ್ಕಲ್‌ ನಿರ್ಗಮಿಸಿದ ನಂತರ ಅಭಿಷೇಕ್ ಪ್ರಭಾಕರ್‌ ಅಜೇಯ 31 (14ಎ, 4x5, 6x1) ರನ್ ಹೊಡೆದರು. ಮುರಿಯದ ಎರಡನೇ ವಿಕೆಟ್‌ಗೆ ಲವನೀತ್ ಮತ್ತು ಅಭಿಷೇಕ್ ಕೇವಲ 21 ಎಸೆತಗಳಲ್ಲಿ 55 ರನ್‌ಗಳ  ಜೊತೆಯಾಟವಾಡಿದರು.

ಇದಕ್ಕೆ ಮೊದಲು ಅಭಿಷೇಕ್ ಪ್ರಭಾಕರ್ ಮತ್ತು ಯಶೋವರ್ಧನ್ ಪರಂತಾಪ್  ಅವರ ವೇಗದ ದಾಳಿಗೆ ಸಿಲುಕಿದ ಶಿವಮೊಗ್ಗ ಲಯನ್ಸ್ ತಂಡ 126 ರನ್‌ಗಳಿಗೆ ಕುಸಿಯಿತು. ಇಬ್ಬರೂ ಬೌಲರ್‌ಗಳು ತಲಾ 3 ವಿಕೆಟ್ ಪಡೆದರು. ಅನುಭವಿ ಆಟಗಾರ ಅಭಿನವ್ ಮನೋಹರ್‌ 36 ಎಸೆತಗಳಲ್ಲಿ 55 ರನ್ ಗಳಿಸಿದ್ದರಿಂದ ತಂಡ ನೂರರ ಗಡಿದಾಟಲು ಸಾಧ್ಯವಾಯಿತು. ಕೊನೆಯವರಾಗಿ ನಿರ್ಗಮಿಸಿದ ಅವರ ಆಟದಲ್ಲಿ ಒಂದು ಬೌಂಡರಿ, ಐದು ಸಿಕ್ಸರ್‌ಗಳಿದ್ದವು. ಕೊನೆಯ ಕೆಲವು ಬ್ಯಾಟರ್‌ಗಳ ನೆರವಿನಿಂದ ಅವರು ತಂಡದ ಮೊತ್ತಕ್ಕೆ ಗೌರವದ ಲೇಪ ನೀಡಿದರು.

ಸ್ಕೋರುಗಳು:

ಶಿವಮೊಗ್ಗ ಲಯನ್ಸ್‌: 18.1 ಓವರುಗಳಲ್ಲಿ 126 (ಮೋಹಿತ್‌ ಬಿ.ಎ. 13, ಧ್ರುವ್ ಪ್ರಭಾಕರ್‌ 15, ಅಭಿನವ್ ಮನೋಹರ್ 55; ಮೋನಿಶ್ ರೆಡ್ಡಿ 21ಕ್ಕೆ1, ರಿತೇಶ್‌ ಭಟ್ಕಳ್ 20ಕ್ಕೆ1, ಪೃಥ್ವಿರಾಜ್ ಶೇಖಾವತ್ 7ಕ್ಕೆ1, ಯಶೋವರ್ಧನ್ ಪರಂತಾಪ್ 24ಕ್ಕೆ3, ಅಭಿಷೇಕ್ ಪ್ರಭಾಕರ್ 22ಕ್ಕೆ3);

ಗುಲ್ಬರ್ಗ ಮಿಸ್ಟಿಕ್ಸ್‌: 11.4 ಓವರುಗಳಲ್ಲಿ 1 ವಿಕೆಟ್‌ಗೆ 127 (ಲವನೀತ್ ಸಿಸೋಡಿಯಾ ಔಟಾಗದೇ 62, ದೇವದತ್ತ ಪಡಿಕ್ಕಲ್ 27, ಕೆ.ವಿ.ಅನೀಶ್ ಔಟಾಗದೇ 31).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT