ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಕ್ರಿಕೆಟ್ ವೀಕ್ಷಕ ವಿವರಣೆಗಾರನ ಪುತ್ರಿಗೆ ಅಸ್ಥಿಮಜ್ಜೆ ಕಸಿ

200 ಅಸ್ಥಿಮಜ್ಜೆ ಕಸಿ ನಡೆಸಿದ ನಾರಾಯಣ ಹೆಲ್ತ್ ಸಿಟಿ
Last Updated 19 ಅಕ್ಟೋಬರ್ 2022, 20:58 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್‌ನ ವೀಕ್ಷಕ ವಿವರಣೆಗಾರ ಸಿಕಂದರ್ ಬಖ್ತ್ ಅವರ ಎರಡು ವರ್ಷದ ಪುತ್ರಿಗೆ ಇಲ್ಲಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ.

ಇದರೊಂದಿಗೆ 2 ಸಾವಿರ ಅಸ್ಥಿಮಜ್ಜೆ ಕಸಿ ನಡೆಸಿದ ಸಾಧನೆಯನ್ನು ನಾರಾಯಣ ಹೆಲ್ತ್ ಸಿಟಿ ಮಾಡಿದೆ.ಪಾಕಿಸ್ತಾನದ ಕರಾಚಿಯಮೈರಾ ಸಿಕಂದರ್ ಖಾನ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕಿಯಾಗಿದ್ದಾಳೆ. ಮೈರಾ, ‘ಮ್ಯೂಕೋಪೊಲಿಸ್ಯಾಕರೈಡೋಸಿಸ್’ (ಎಂಪಿಎಸ್ 1) ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಳು.

ಎಂಪಿಎಸ್ 1 ಅಪರೂಪದ ಕಾಯಿಲೆಯಾಗಿದ್ದು, ಕಣ್ಣುಗಳು, ಮಿದುಳು ಸೇರಿ ವಿವಿಧ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ರೋಗವನ್ನು ಗುರುತಿಸಿದ ವೈದ್ಯರು, ತಂದೆಯ ಅಸ್ಥಿಮಜ್ಜೆಯನ್ನು ಬಳಸಿ ಕಸಿ ಮಾಡಿದ್ದಾರೆ.

ಬುಧವಾರ ಇಲ್ಲಿ ಆಸ್ಪತ್ರೆ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದನಾರಾಯಣ ಹೆಲ್ತ್ ಸಿಟಿ ಅಧ್ಯಕ್ಷ ಡಾ.ದೇವಿ ಶೆಟ್ಟಿ, ‘ಇಬ್ಬರು ವೈದ್ಯರೊಂದಿಗೆ 2004ರಲ್ಲಿ ಅಸ್ಥಿಮಜ್ಜೆ ಕಸಿ ಘಟಕವನ್ನು ಪ್ರಾರಂಭಿಸಲಾಯಿತು. ರಾಜ್ಯದ ಜನರಿಗೆ ಅಸ್ಥಿಮಜ್ಜೆ ಕಸಿ ಸೌಲಭ್ಯ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು.ಇಂದು ನಮ್ಮಲ್ಲಿ 25 ವೈದ್ಯರು ಹಾಗೂ 300 ಶುಶ್ರೂಷಕರಿದ್ದಾರೆ. ಪ್ರತಿ ತಿಂಗಳು 25-30 ರೋಗಿಗಳಿಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಡಾ. ಇಮ್ಯಾನುಯೆಲ್ ರೂಪರ್ಟ್,‘ಇಲ್ಲಿನ ಅಸ್ಥಿಮಜ್ಜೆ ಕಸಿ ಘಟಕಕ್ಕೆ 20 ಹಾಸಿಗೆಗಳನ್ನು ಹೊಸದಾಗಿ ಸೇರಿಸಲಾಗುವುದು. ಅಹಮದಾಬಾದ್, ರಾಯಪುರ, ಮೈಸೂರು ಮತ್ತು ಗುರುಗ್ರಾಮದಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿಲಾಗುತ್ತಿದೆ’ ಎಂದು ತಿಳಿಸಿದರು.

ಅಸ್ಥಿಮಜ್ಜೆ ಕಸಿ ಘಟಕದ ಮುಖ್ಯಸ್ಥ ಡಾ. ಶರತ್ ದಾಮೋದರ್, ‘ಅಸ್ಥಿಮಜ್ಜೆ ಕಸಿಯ ಮೂಲಕ 20ಕ್ಕೂ ಹೆಚ್ಚು‌ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ. ಕಸಿಯು ಶೇ 70ರಿಂದ ಶೇ 80ರಷ್ಟು ಯಶಸ್ಸಿನ ಪ್ರಮಾಣ ಹೊಂದಿದೆ. ಈ ಚಿಕಿತ್ಸಾ ವಿಧಾನದ ಬಗ್ಗೆ ರೋಗಿಗಳಿಗೆ ಜಾಗೃತಿ ಮೂಡಿಸಬೇಕು’ ಎಂದರು.

ಇದೇ ವೇಳೆ ಅಸ್ಥಿಮಜ್ಜೆ ಕಸಿಯಿಂದ ಚೇತರಿಸಿಕೊಂಡವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT