ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

New Zealand vs Bangladesh| ಟೇಲರ್‌ ವಿದಾಯಕ್ಕೆ ಗೆಲುವಿನ ಕಾಣಿಕೆ

ಜೆಮಿಸನ್, ನೀಲ್ ಉತ್ತಮ ಬೌಲಿಂಗ್; ಲಿಟನ್ ದಾಸ್ ಶತಕ: ಸರಣಿ ಡ್ರಾ
Last Updated 11 ಜನವರಿ 2022, 12:29 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ತಾರಾ ಆಟಗಾರ ರಾಸ್ ಟೇಲರ್ ಅವರಿಗೆ ಸಹ ಆಟಗಾರರು ಗೆಲುವಿನ ಕಾಣಿಕೆ ನೀಡಿದರು.

ಮಂಗಳವಾರ ಇಲ್ಲಿ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಟೆಸ್ಟ್‌ನಲ್ಲಿ ಕಿವೀಸ್ ಬಳಗವು ಇನಿಂಗ್ಸ್ ಮತ್ತು 117 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ ಸರಣಿಯನ್ನು 1–1ರಿಂದ ಡ್ರಾ ಮಾಡಿಕೊಂಡಿತು.

ತಮ್ಮ ಅಬ್ಬರದ ಸುಂದರ ಬ್ಯಾಟಿಂಗ್ ಮೂಲಕ ರಂಜಿಸಿದ್ದ ಟೇಲರ್ ಮಂಗಳವಾರ ಬೌಲಿಂಗ್‌ನಲ್ಲಿ ಗಮನ ಸೆಳೆದರು. ಇಬಾದತ್ ಹುಸೇನ್ ವಿಕೆಟ್ ಗಳಿಸಿ, ಪಂದ್ಯಕ್ಕೆ ತೆರೆಯೆಳೆದರು.

ಲಿಟನ್ ದಾಸ್ ಸುಂದರ ಶತಕ ಗಳಿಸಿದರೂ ಬಾಂಗ್ಲಾದೇಶ ತಂಡದ ಸೋಲು ತಪ್ಪಲಿಲ್ಲ. ನ್ಯೂಜಿಲೆಂಡ್ ತಂಡದ ಕೈಲ್ ಜಿಮಿಸನ್ ಮತ್ತು ನೀಲ್ ವಾಗ್ನರ್ (77ಕ್ಕೆ3) ಅವರ ಬೌಲಿಂಗ್ ಮುಂದೆ ಬಾಂಗ್ಲಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 79.3 ಓವರ್‌ಗಳಲ್ಲಿ 278 ರನ್ ಗಳಿಸಿ ಆಲೌಟ್ ಆಯಿತು.

ಕಿವೀಸ್ ತಂಡವು ಟಾಮ್ ಲಥಾಮ್ ದ್ವಿಶತಕ ಮತ್ತು ಡೆವೊನ್ ಕಾನ್ವೆ ಶತಕದ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳಿಗೆ 521 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಅದಕ್ಕುತ್ತರವಾಗಿ ಬಾಂಗ್ಲಾದೇಶ ತಂಡವು 126 ರನ್‌ಗಳಿಗೆ ಕುಸಿದಿತ್ತು. ಆತಿಥೇಯ ತಂಡವು ಬಾಂಗ್ಲಾ ಮೇಲೆ ಫಾಲೋ ಆನ್ ಹೇರಿತ್ತು.

ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾ ತಂಡವು ಭರ್ಜರಿ ಜಯ ಸಾಧಿಸಿ ದಾಖಲೆ ಮಾಡಿತ್ತು. ಆದರೆ, ಕೊನೆಯ ಪಂದ್ಯದಲ್ಲಿ ಕಿವೀಸ್ ಬಳಗವು ಪಾರಮ್ಯ ಮೆರೆಯಿತು. ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾ ತಂಡದ ಲಿಟನ್ ದಾಸ್ (102; 114ಎ,4X14, 6X1) ಶತಕ ಹೊಡೆದಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಆಟ ಹೊರಹೊಮ್ಮಲಿಲ್ಲ. ಇದರಿಂದಾಗಿ ಮೂರನೇ ದಿನವೇ ಪಂದ್ಯಕ್ಕೆ ತೆರೆಬಿತ್ತು. ಟಾಮ್ ಲಥಾಮ್ ಪಂದ್ಯ ಶ್ರೇಷ್ಠ ಮತ್ತು ಡೆವೊನ್ ಕಾನ್ವೆ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

37 ವರ್ಷದ ಟೇಲರ್ 112 ಟೆಸ್ಟ್‌ಗಳನ್ನು ಆಡಿ 7684 ರನ್‌ಗಳನ್ನು ಗಳಿಸಿದ್ದಾರೆ. ಪಂದ್ಯದ ನಂತರ ಟೇಲರ್ ಮತ್ತು ಅವರ ಕುಟುಂಬವನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಅಭಿನಂದಿಸಿ, ಬೀಳ್ಕೊಟ್ಟಿತು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ನ್ಯೂಜಿಲೆಂಡ್: 128.5 ಓವರ್‌ಗಳಲ್ಲಿ 6ಕ್ಕೆ521, ಬಾಂಗ್ಲಾದೇಶ: 41.2 ಓವರ್‌ಗಳಲ್ಲಿ 126. ಎರಡನೇ ಇನಿಂಗ್ಸ್: ಬಾಂಗ್ಲಾದೇಶ ಫಾಲೋ ಆನ್: 79.3 ಓವರ್‌ಗಳಲ್ಲಿ 278 (ಶಾದ್ಮನ್ ಇಸ್ಲಾಂ 21, ಮೊಹಮ್ಮದ್ ನೈಮ್ 24, ನಜ್ಮುಲ್ ಹುಸೇನ್ ಶಾಂತೊ 29, ಮೊಮಿನುಲ್ ಹಕ್ 37, ಲಿಟನ್ ದಾಸ್ 102, ನೂರುಲ್ ಹಸನ್ 36, ಕೈಲ್ ಜೆಮಿಸ್ 82ಕ್ಕೆ4, ನೀಲ್ ವಾಗ್ನರ್ 77ಕ್ಕೆ3) ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ ಇನಿಂಗ್ಸ್ ಮತ್ತು 117 ರನ್‌ಗಳ ಜಯ. 1–1ರಿಂದ ಸರಣಿ ಸಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT