ಬುಧವಾರ, ಆಗಸ್ಟ್ 17, 2022
25 °C
ಮೊದಲ ಟ್ವೆಂಟಿ–20 ಪಂದ್ಯ

NZ vs PAK: ಡಫ್ಫಿ ದಾಳಿಗೆ ತಬ್ಬಿಬ್ಬಾದ ಪಾಕ್‌; ನ್ಯೂಜಿಲೆಂಡ್‌ಗೆ 5 ವಿಕೆಟ್ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಆಕ್ಲೆಂಡ್‌: ಪದಾರ್ಪಣೆ ಪಂದ್ಯದಲ್ಲೇ ಬೆಳಗಿದ ವೇಗಿ ಜಾಕೊಬ್ ಡಫ್ಫಿ (33ಕ್ಕೆ 4) ನ್ಯೂಜಿಲೆಂಡ್ ತಂಡದ ಗೆಲುವಿಗೆ ಕಾರಣರಾದರು. ಪಾಕಿಸ್ತಾನ ತಂಡದ ವಿರುದ್ಧ ಇಲ್ಲಿ ನಡೆದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಆತಿಥೇಯ ತಂಡವು 5 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 9 ವಿಕೆಟ್‌ಗೆ 153 ರನ್ ಗಳಿಸಿತು. ಬಲಗೈ ವೇಗಿ ಡಫ್ಫಿ ಸ್ವಿಂಗ್ ಹಾಗೂ ಬೌನ್ಸರ್‌ಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದರು. ಪಂದ್ಯದಲ್ಲಿ ತಾನೆಸೆದ ನಾಲ್ಕನೇ ಎಸೆತದಲ್ಲಿ ಮೊದಲ ವಿಕೆಟ್ ಗಳಿಸಿದ ಡಫಿ, ಎರಡನೇ ಓವರ್‌ನ ಐದು ಹಾಗೂ ಆರನೇ ಎಸೆತಗಳಲ್ಲಿ ಬಲಿ ಪಡೆದರು. ಹೀಗಾಗಿ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಅವರಿಗೆ ಹ್ಯಾಟ್ರಿಕ್ ಅವಕಾಶ ಇತ್ತು. ಆದರೆ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಇನಿಂಗ್ಸ್‌ 18ನೇ ಓವರ್ ಬೌಲ್ ಮಾಡಿದ ಡಫಿ, ಪ್ರವಾಸಿ ತಂಡದ ನಾಯಕ ಶಾದಾಬ್‌ ಖಾನ್ (42) ಮೂಲಕ ನಾಲ್ಕನೇ ವಿಕೆಟ್‌ ತಮ್ಮದಾಗಿಸಿಕೊಂಡರು.

ಪಾಕಿಸ್ತಾನ ತಂಡದ ಪರ ಶಾದಾಬ್ ಹೊರತುಪಡಿಸಿ ಹೆಚ್ಚು ರನ್ ಗಳಿಸಿದ್ದು ಫಹೀಮ್‌ ಅಶ್ರಫ್‌ (31). ಮೂರು ವಿಕೆಟ್ ಗಳಿಸಿದ ಸ್ಕಾಟ್ ಕುಗ್ಲೆಜಿನ್, ಪಾಕ್ ತಂಡವು ಅಲ್ಪಮೊತ್ತಕ್ಕೆ ಕುಸಿಯಲು ಕಾರಣವಾದರು.

154 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಕಿವೀಸ್‌ ಪರ ಟಿಮ್ ಸೀಫರ್ಟ್‌ ಅರ್ಧಶತಕ (57) ಸಿಡಿಸಿದರು. ಮಾರ್ಕ್ ಚಾಪ್‌ಮನ್‌ (34) ಹಾಗೂ ಗ್ಲೆನ್ ಫಿಲಿಪ್ಸ್ (23) ಕಾಣಿಕೆ ನೀಡಿದರು. ಇನ್ನೂ ಏಳು ಎಸೆತ ಬಾಕಿ ಇರುವಾಗಲೇ ತಂಡವು ಜಯದ ದಡ ತಲುಪಿತು.

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 (
ಶಾದಾಬ್ ಖಾನ್‌ 42, ಫಹೀಮ್ ಅಶ್ರಫ್‌ 31, ಇಮದ್ ವಾಸೀಂ 19, ಮೊಹಮ್ಮದ್ ರಿಜ್ವಾನ್ 17, ಖುಷ್‌ದಿಲ್‌ ಶಾ 16; ಜಾಕೊಬ್ ಡಫ್ಫಿ 33ಕ್ಕೆ 4, ಸ್ಕಾಟ್ ಕುಗ್ಲೆಜಿನ್‌ 27ಕ್ಕೆ 3, ಇಶ್ ಸೋಧಿ 37ಕ್ಕೆ 1, ಬ್ಲೇರ್ ಟಿಕ್ನರ್‌ 35ಕ್ಕೆ 1)

ನ್ಯೂಜಿಲೆಂಡ್‌: 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 156 (ಟಿಮ್ ಸೀಫರ್ಟ್‌ 57, ಮಾರ್ಕ್ ಚಾಪ್‌ಮನ್‌ 34, ಗ್ಲೆನ್ ಫಿಲಿಪ್ಸ್ 23; ಶಾಹೀನ್ ಆಫ್ರಿದಿ 27ಕ್ಕೆ 2, ಹ್ಯಾರಿಸ್ ರವೂಫ್‌ 29ಕ್ಕೆ 3).

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 5 ವಿಕೆಟ್‌ಗಳ ಗೆಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು