ಸೋಮವಾರ, ಮಾರ್ಚ್ 8, 2021
27 °C

ನ್ಯೂಜಿಲೆಂಡ್‌ಗೆ ಶರಣಾದ ಪಾಕ್

ಎಪಿ Updated:

ಅಕ್ಷರ ಗಾತ್ರ : | |

Prajavani

ಮೌಂಟ್ ಮಾಂಗನೆ: ಶತಕ ಬಾರಿಸಿದ  ಫವಾದ್  ಆಲಂ ಮತ್ತು ಅರ್ಧಶತಕ ಗಳಿಸಿದ ಮೊಹಮ್ಮದ್ ರಿಜ್ವಾನ್ ಅವರ ದಿಟ್ಟ ಹೋರಾಟಕ್ಕೆ ಯಶಸ್ಸು ಒಲಿಯಲಿಲ್ಲ. ಆದರೆ   ಬೌಲರ್‌ಗಳ ಸಂಘಟಿತ ದಾಳಿಯಿಂದಾಗಿ ನ್ಯೂಜಿಲೆಂಡ್ ತಂಡವು ಜಯಿಸಿತು.

ಬುಧವಾರ ಮುಕ್ತಾಯವಾದ ಮೊದಲ ಟೆಸ್ಟ್‌ನಲ್ಲಿ ಕೇನ್ ವಿಲಿಯಮ್ಸನ್ ಬಳಗವು 101 ರನ್‌ಗಳಿಂದ ಪಾಕಿಸ್ತಾನ ತಂಡದ ಎದುರು ಜಯಿಸಿತು. ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಗೆಲುವಿಗಾಗಿ 373 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಪಾಕಿಸ್ತಾನ ತಂಡವು 123.3 ಓವರ್‌ಗಳಲ್ಲಿ 271 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಲ್ಕನೇ ದಿನವಾದ ಮಂಗಳವಾರ ದಿನದಾಟದ ಅಂತ್ಯಕ್ಕೆ ಪಾಕ್ ತಂಡವು ಮೂರು ವಿಕೆಟ್‌ಗಳ ನಷ್ಟಕ್ಕೆ 73 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಅಜರ್ ಅಲಿ ಮತ್ತು ಫವಾದ  ಆಲಂ ಕೊನೆಯ ದಿನದಂದು  ಆಟ ಮುಂದುವರಿಸಿದರು.

ಆದರೆ ಅಜರ್ ಬೇಗನೆ ಔಟಾದರು. ಆಗ ಕ್ರೀಸ್‌ಗೆ ಬಂದ ನಾಯಕ ರಿಜ್ವಾನ್ ಫವಾದ್ ಜೊತೆಗೆ ತಾಳ್ಮೆಯ ಜೊತೆಯಾಟವಾಡಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 165 ರನ್‌ಗಳನ್ನು ಸೇರಿಸಿದರು. ಫವಾದ್ 236 ಎಸೆತಗಳಲ್ಲಿ ಶತಕ ಪೂರೈಸಿದರು. ರಿಜ್ವಾನ್ 156 ಎಸೆತಗಳಲ್ಲಿ ಅರ್ಧಶತಕ ಹೊಡೆದರು.

ಪಂದ್ಯವನ್ನು ಕನಿಷ್ಠ ಪಕ್ಷ ಡ್ರಾ ಮಾಡಿಕೊಳ್ಳುವ ಇರಾದೆ ಅವರದ್ದಾಗಿತ್ತು. ಆದರೆ ಈ ಜೊತೆಯಾಟವನ್ನು ಮುರಿದ ಕೈಲ್ ಜೆಮಿಸನ್ ಕಿವೀಸ್ ಬಳಗದಲ್ಲಿ ಮತ್ತೆ ಜಯದ ಆಸೆ ಚಿಗುರಿಸಿದರು.

ತಮ್ಮ ನಾಯಕನ ಹಿಂದೆಯೇ ಫವಾದ್ (102; 269ಎ, 14ಬೌಂಡರಿ) ಕೂಡ ಪೆವಿಲಿಯನ್ ಸೇರಿಸಿದರು. ನೀಲ್ ವಾಗ್ನರ್ ಎಸೆತವನ್ನು ಆಡುವ ಭರದಲ್ಲಿ ಬಿಜೆ ವಾಟ್ಲಿಂಗ್‌ಗೆ ಕ್ಯಾಚಿತ್ತರು. 

ಸ್ವಲ್ಪ ಹೋರಾಟ ತೋರಿದ ಫಾಹೀಮ್ ಆಶ್ರಫ್ (19ರನ್) ಅವರಿನ್ನೂ ನೀಲ್ ಔಟ್‌ ಮಾಡಿದರು. ನಂತರದ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳ ಆಟವು ನಡೆಯದಂತೆ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ನೋಡಿಕೊಂಡರು. ಇದರಿಂದಾಗಿ ಪಂದ್ಯದ ಅವಧಿ ಮುಗಿಯುವ ಕೆಲವೇ ಹೊತ್ತಿನ ಮುನ್ನ ಕಿವೀಸ್ ಜಯ ಸಾಧಿಸಲು ಸಾಧ್ಯವಾಯಿತು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ನ್ಯೂಜಿಲೆಂಡ್: 431, ಪಾಕಿಸ್ತಾನ 239. ಎರಡನೇ ಇನಿಂಗ್ಸ್‌: ನ್ಯೂಜಿಲೆಂಡ್: 5ಕ್ಕೆ180ಡಿಕ್ಲೆರ್ಡ್‌, ಪಾಕಿಸ್ತಾನ: 123.3 ಓವರ್‌ಗಳಲ್ಲಿ 271 (ಅಜರ್ ಅಲಿ 38, ಫವಾದ್ ಆಲಂ 102, ಮೊಹಮ್ಮದ್ ರಿಜ್ವಾನ್ 60, ಟಿಮ್ ಸೌಥಿ 33ಕ್ಕೆ2, ಟ್ರೆಂಟ್ ಬೌಲ್ಟ್ 72ಕ್ಕೆ2, ಕೈಲ್ ಜೆಮಿಸನ್ 35ಕ್ಕೆ2, ನೀಲ್ ವಾಗ್ನರ್ 55ಕ್ಕೆ2, ಮಿಚೆಲ್ ಸ್ಯಾಂಟನರ್ 52ಕ್ಕೆ2) ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 101 ರನ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು