ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

world cup 2023: ಕಿವೀಸ್‌ಗೆ, ಬಾಂಗ್ಲಾ ಸ್ಪಿನ್‌ ಸವಾಲು

ನ್ಯೂಜಿಲೆಂಡ್‌ಗೆ ಬಲ ತುಂಬಲಿರುವ ವಿಲಿಯಮ್ಸನ್‌, ಸೌಥಿ
Published 12 ಅಕ್ಟೋಬರ್ 2023, 14:02 IST
Last Updated 12 ಅಕ್ಟೋಬರ್ 2023, 14:02 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಬೆನ್ನುಬೆನ್ನಿಗೆ ಎರಡು ಪಂದ್ಯಗಳನ್ನು ಗೆದ್ದ ಉತ್ಸಾಹದಲ್ಲಿರುವ ನ್ಯೂಜಿಲೆಂಡ್ ತಂಡ ಶುಕ್ರವಾ ನಡೆಯುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ನಿಧಾನಗತಿಯ ಚೆಪಾಕ್‌ ಪಿಚ್‌ನಲ್ಲಿ ಬಾಂಗ್ಲಾದೇಶದ ಅಸ್ತ್ರವಾದ ಸ್ಪಿನ್ ದಾಳಿಯನ್ನು ತಮ್ಮ ಪ್ರಬಲ ಬ್ಯಾಟಿಂಗ್ ಸರದಿಯ ಮೂಲಕ ಮೆಟ್ಟಿನಿಲ್ಲಬಹುದೆಂಬ ವಿಶ್ವಾಸದಲ್ಲಿ ನ್ಯೂಜಿಲೆಂಡ್‌ ತಂಡ ಇದೆ.

ನ್ಯೂಜಿಲೆಂಡ್ ತಂಡಕ್ಕೆ ಸಂತಸದ ಸುದ್ದಿಯೊಂದು ಇದೆ. ಆ ತಂಡದ ಕಾಯಂ ನಾಯಕ ಕೇನ್ ವಿಲಿಯಮ್ಸನ್ ಮತ್ತು ಅನುಭವಿ ವೇಗದ ಬೌಲರ್ ಟಿಮ್‌ ಸೌಥಿ ಅವರು ಗಾಯದಿಂದ ಚೇತರಿಸಿಕೊಂಡಿದ್ದು ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕೆ ಲಭ್ಯರಿದ್ದಾರೆ. ಇವರಿಬ್ಬರು ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯಗಳಿಗೆ ಟಾಮ್‌ ಲಥಾಂ ಅವರು ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಈಗ ಪಾಯಿಂಟ್‌ ಪಟ್ಟಿಯಲ್ಲಿ ಕಿವೀಸ್ ತಂಡ ನಿವ್ವಳ ರನ್ ದರದ ಆಧಾರದಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ತಂಡ ಎರಡನೇ ಮತ್ತು ಪಾಕಿಸ್ತಾನ ತಂಡ ಮೂರನೇ ಸ್ಥಾನದಲ್ಲಿವೆ.

ಮೊಣಗಂಟಿನ  ನೋವಿನಿಂದ ವಿಲಿಯಮ್ಸನ್ ಅವರು ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಸೌಥಿ ಅವರು ಹೆಬ್ಬೆರಳ ಗಾಯಗಿಂದಲೂ ಗುಣಮುಖರಾಗಿದ್ದಾರೆ ಎಂದು ನ್ಯೂಜಿಲೆಂಡ್ ತಂಡದ ಕೋಚ್ ಗ್ಯಾರಿ ಸ್ಟೀಡ್‌ ತಿಳಿಸಿದ್ದಾರೆ.

ತಂಡಕ್ಕೆ ಈಗ ಸಂದಿಗ್ಧವೂ ಎದುರಾಗಿದೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ರಚಿನ್ ರವೀಂದ್ರ ಒಂದು ಶತಕ, ಒಂದು ಅರ್ಧಶತಕ ಸಿಡಿಸಿ ಒಳ್ಳೆಯ ಲಯದಲ್ಲಿದ್ದಾರೆ. ಹೀಗಾಗಿ 33 ವರ್ಷದ ವಿಲಿಯಮ್ಸನ್ ಅವರಿಗಾಗಿ ಯಾರು ಸ್ಥಾನ ತೆರವು ಮಾಡಬೇಕು ಎಂಬ ಬಗ್ಗೆ ಸಾಕಷ್ಟು ಲೆಕ್ಕಾಚಾರ ಮಾಡಬೇಕಾಗಿದೆ. ಉಳಿದಂತೆ ತಂಡಕ್ಕೆ ಸಮಸ್ಯೆಯಿಲ್ಲ. ವಿಲ್‌ ಯಂಗ್‌, ಡೆವೊನ್ ಕಾನ್ವೆ ಮತ್ತು ಡೇರಿಲ್ ಮಿಚೆಲ್‌ ಅಂಥ ಬ್ಯಾಟರ್‌ಗಳು ಲಯದಲ್ಲಿದ್ದಾರೆ. ಆದರೆ ಇಲ್ಲಿನ ಪಿಚ್‌ನಲ್ಲಿ ಸರಾಗವಾಗಿ ರನ್ ಗಳಿಸುವುದು ಸುಲಭವಲ್ಲ ಎಂಬುದು ಭಾರತ– ಆಸ್ಟ್ರೇಲಿಯಾ ಪಂದ್ಯದಲ್ಲಿ ವ್ಯಕ್ತವಾಗಿತ್ತು. ಕಳೆದ ಭಾನುವಾರ ಭಾರತದ ಸ್ಪಿನ್ನರುಗಳು ಆರು ವಿಕೆಟ್‌ ಗಳಿಸಿದ್ದರು.

ಇಂಗ್ಲೆಂಡ್ ಕೈಲಿ ಹಿಂದಿನ ಪಂದ್ಯದಲ್ಲಿ ದಂಡಿಸಿಕೊಂಡಿದ್ದರೂ, ಚೆನ್ನೈನಲ್ಲಿ ತಮಗೆ ದೊರೆಯುವ ನೆರವು ಕಲ್ಪಿಸಿ ಬಾಂಗ್ಲಾದೇಶ ಸ್ಪಿನ್ನರ್‌ಗಳು ಮನಸ್ಸಿನಲ್ಲಿ ಖುಷಿಪಡಬಹುದು. ಸ್ಪಿನ್‌ತ್ರಯರಾದ ನಾಯಕ ಶಕೀಬ್ ಅಲ್ ಹಸನ್, ಮೆಹೆದಿ ಹಸನ್ ಮತ್ತು ಮಹಿದಿ ಹಸನ್ ಮಿರಾಜ್ ಅವರು ಎರಡು ಪಂದ್ಯಗಳಿಂದ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ತಂಡ ಈ ಮೂವರ ಮೇಲೆ ನಿರೀಕ್ಷೆಯಿಟ್ಟುಕೊಂಡಿದೆ.

ನ್ಯೂಜಿಲೆಂಡ್‌ಗೆ ಮಿಚೆಲ್ ಸ್ಯಾಂಟ್ನರ್ ಸ್ಪಿನ್‌ ಅಸ್ತ್ರವಾಗಿದ್ದಾರೆ. ಹಾಲಿ ವಿಶ್ವಕಪ್‌ನಲ್ಲಿ ಈ ಎಡಗೈ ಸ್ಪಿನ್ನರ್‌ ಪ್ರಸ್ತುತ ಏಳು ವಿಕೆಟ್‌ಗಳೊಡನೆ ವಿಕೆಟ್‌ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ತಂಡದ ವಿಶ್ವಾಸಕ್ಕೆ ಕಾರಣವಾಗಬಹುದು.

ಬಾಂಗ್ಲಾದೇಶ, ಅನುಭವಿ ಬ್ಯಾಟರ್‌ಗಳಾದ ಶಕಿಬ್ ಅಲ್ ಹಸನ್, ಮುಷ್ಫಿಕುರ್ ರಹೀಮ್, ಲಿಟ್ಟನ್ ದಾಸ್ ಮತ್ತು ನಜ್ಮುಲ್ ಶಾಂತೊ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿದೆ.

ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ, ಲಾರ್ಕಿ ಫರ್ಗ್ಯುಸನ್ ಅವರಂಥ ಅನುಭವಿ ವೇಗಿಗಳಿಂದ ಈ ವಿಭಾಗದಲ್ಲಿ ಕಿವೀಸ್ ಪ್ರಬಲವಗಿದೆ. ಇವರೆಲ್ಲಾ ಐಪಿಎಲ್‌ನಲ್ಲಿ ಆಡಿರುವ ಅನುಭವಿಗಳಾಗಿದ್ದು, ಇಲ್ಲಿನ ಪರಿಸ್ಥಿತಿ ತಿಳಿದವರು. ಅಂಕಿ ಅಂಶಗಳೂ ನ್ಯೂಜಿಲೆಂಡ್ ಪರ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT