ಶನಿವಾರ, ಜುಲೈ 31, 2021
25 °C
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧಿಕಾರಿ ಹೇಳಿಕೆ

ಐಪಿಎಲ್‌ ಆಯೋಜಿಸಲು ನ್ಯೂಜಿಲೆಂಡ್‌ ಒಲವು: ಬಿಸಿಸಿಐ ಅಧಿಕಾರಿ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಲು ನ್ಯೂಜಿಲೆಂಡ್‌ ಒಲವು ತೋರುತ್ತಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

‘13ನೇ ಆವೃತ್ತಿಯ ಲೀಗ್‌ ಅನ್ನು ಭಾರತದಲ್ಲೇ ನಡೆಸಬೇಕೆಂಬುದು ನಮ್ಮ ಬಯಕೆ. ಈಗ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತವರಿನಲ್ಲಿ ಲೀಗ್‌ ಆಯೋಜಿಸಲು ಸಾಧ್ಯವಾಗದೇ ಹೋದರೆ ವಿದೇಶದಲ್ಲಿ ಪಂದ್ಯಗಳನ್ನು ನಡೆಸಬೇಕೆಂಬ ಆಲೋಚನೆ ಇದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ ರಾಷ್ಟ್ರಗಳು ಲೀಗ್‌ನ ಆತಿಥ್ಯವಹಿಸಲು ಆಸಕ್ತಿ ತೋರಿವೆ’ ಎಂದು ಅವರು ತಿಳಿಸಿದ್ದಾರೆ.

‘ಆಟಗಾರರು, ಸಿಬ್ಬಂದಿ ಹಾಗೂ ಪಂದ್ಯದ ಅಧಿಕಾರಿಗಳ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಹೀಗಾಗಿ ಫ್ರಾಂಚೈಸ್‌ಗಳು, ಲೀಗ್‌ನ ಪ್ರಸಾರದ ಹಕ್ಕು ಖರೀದಿಸಿರುವವರು, ಪ್ರಾಯೋಜಕರು ಹಾಗೂ ಇತರರ ಜೊತೆ ಕೂತು ಚರ್ಚಿಸುತ್ತೇವೆ. ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಕಾರಣ 2009 ಮತ್ತು 2014ರಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ ಹಾಗೂ ಯುಎಇಯಲ್ಲಿ ಐಪಿಎಲ್‌ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಒಂದೊಮ್ಮೆ ಭಾರತದಲ್ಲಿ ಲೀಗ್‌ ನಡೆಸಲು ಆಗದೇ ಹೋದರೆ ಯುಎಇಯಲ್ಲಿ ಪಂದ್ಯಗಳನ್ನು ಹಮ್ಮಿಕೊಳ್ಳಲು ಬಿಸಿಸಿಐ ಉತ್ಸುಕವಾಗಿದೆ.

‘ನ್ಯೂಜಿಲೆಂಡ್‌ನಲ್ಲಿ ಲೀಗ್‌ ನಡೆಸಲು ಹಲವು ಅಡೆತಡೆಗಳಿವೆ. ಕಿವೀಸ್‌ ನಾಡಿನ ಕಾಲಮಾನದ ಪ್ರಕಾರ ಅಲ್ಲಿ ಮಧ್ಯಾಹ್ನ 12.30ಕ್ಕೆ ಪಂದ್ಯ ಶುರುವಾದರೂ ಭಾರತದ ಬಹುತೇಕರಿಗೆ ಅದನ್ನು ನೋಡಲು ಆಗುವುದಿಲ್ಲ. ಇದರಿಂದ ಟಿ.ವಿ.ವೀಕ್ಷಕರ ಸಂಖ್ಯೆ ಕುಸಿಯುವ ಅಪಾಯವಿದೆ. ಹ್ಯಾಮಿಲ್ಟನ್‌ ಮತ್ತು ಆಕ್ಲೆಂಡ್‌ಗೆ ರಸ್ತೆ ಮಾರ್ಗವಾಗಿ ಹೋಗಬಹುದು. ಆದರೆ ವೆಲ್ಲಿಂಗ್ಟನ್‌, ಕ್ರೈಸ್ಟ್‌ಚರ್ಚ್‌, ನೇಪಿಯರ್‌ ಹಾಗೂ ಡ್ಯುನೆಡಿನ್‌ಗೆ ಪ್ರಯಾಣಿಸಲು ವಿಮಾನವನ್ನೇ ಅವಲಂಬಿಸಬೇಕಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಐಪಿಎಲ್‌ ಆಡಳಿತ ಮಂಡಳಿ ಸಭೆಯ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ಐಪಿಎಲ್‌ನಲ್ಲಿ ಚೀನಾ ಕಂಪನಿಗಳ ಪ್ರಾಯೋಜಕತ್ವ ವಿಷಯದ ಕುರಿತು ಈ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ’ ಎಂದೂ ಅವರು ನುಡಿದಿದ್ದಾರೆ.

ಚೀನಾದ ವಿವೊ ಮೊಬೈಲ್‌ ಕಂಪನಿಯು 2022ರವರೆಗೆ ಐಪಿಎಲ್‌ ಟೈಟಲ್‌ ಪ್ರಾಯೋಜಕತ್ವದ ಹಕ್ಕು ಪಡೆದಿದೆ. ಈ ಒಪ್ಪಂದದಿಂದಾಗಿ ಬಿಸಿಸಿಐಗೆ ವಾರ್ಷಿಕ ₹440 ಕೋಟಿ ಆದಾಯ ಬರುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು