ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವೀಸ್ ವಿರುದ್ಧದ ಟೆಸ್ಟ್: ಪರದಾಡಿದ ವಿರಾಟ್‌ ಕೊಹ್ಲಿ ಬಳಗ

ಮೊದಲ ದಿನದಾಟಕ್ಕೆ ಮಳೆ ಅಡ್ಡಿ; ಪದಾರ್ಪಣೆಯಲ್ಲಿ ಮಿಂಚಿದ ಕೈಲ್
Last Updated 21 ಫೆಬ್ರುವರಿ 2020, 19:50 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್: ಶುಕ್ರವಾರ ದಿನದಾಟದ ಬಹುತೇಕ ಅವಧಿಯಲ್ಲಿ ‘ಎತ್ತರಕಾಯದ’ ಕೈಲ್ ಜೆಮಿಸನ್ ಬೌಲಿಂಗ್ ಮುಂದೆ ಭಾರತದ ಬ್ಯಾಟ್ಸ್‌ಮನ್‌ಗಳ ಪರದಾಟ, ನಂತರ ಮಳೆಯಾಟ ನಡೆಯಿತು.

ಪದಾರ್ಪಣೆಯ ಟೆಸ್ಟ್‌ನಲ್ಲಿ ಮಿಂಚಿದ ಕೈಲ್ (38ಕ್ಕೆ3) ದಾಳಿಗೆ ಕುಸಿದ ಭಾರತ ತಂಡವು, 55 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 122 ರನ್‌ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡದ ಯೋಜನೆ ಸಫಲವಾಗಲು ಕಾರಣರಾದರು. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ (11 ರನ್), ನಾಯಕ ವಿರಾಟ್ ಕೊಹ್ಲಿ (2 ರನ್) ಮತ್ತು ಜಿ. ಹನುಮವಿಹಾರಿ (7 ರನ್) ಅವರ ವಿಕೆಟ್‌ಗಳನ್ನು ಕಿತ್ತು ಭಾರತಕ್ಕೆ ದೊಡ್ಡ ಪೆಟ್ಟು ಕೊಟ್ಟರು.

ಮಯಂಕ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಪೃಥ್ವಿ ಶಾ (16; 18ಎ, 2ಬೌಂಡರಿ) ಪರಿಣಾಮಕಾರಿಯಾಗಲಿಲ್ಲ. ಚೆಂಡಿನ ಚಲನೆ ಗುರುತಿಸಲು ಆರಂಭದಿಂದಲೂ ತಡಬಡಾಯಿಸಿದ ಪೃಥ್ವಿ ಐದನೇ ಓವರ್‌ನಲ್ಲಿ ಟಿಮ್ ಸೌಥಿಯ ನೇರ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು. ತಾಳ್ಮೆಯಿಂದ ಆಡುತ್ತಿದ್ದ ಮಯಂಕ್ ಜೊತೆಗೆ ಸೇರಿಕೊಂಡ ಪೂಜಾರ ಇನಿಂಗ್ಸ್‌ಗೆ ಒಳ್ಳೆಯ ಬುನಾದಿ ಹಾಕಲು ಯತ್ನಿಸಿದರು. ಆದರೆ, ಈ ಜೊತೆಯಾಟವನ್ನು ಆರೂವರೆ ಅಡಿಗಿಂತ ಹೆಚ್ಚು ಎತ್ತರವಿರುವ ಕೈಲ್ ಮುರಿದರು. ಔಟ್‌ಸ್ವಿಂಗ್ ಎಸೆತವನ್ನು ಕೆಣಕಿದ ಪೂಜಾರ ವಿಕೆಟ್‌ಕೀಪರ್‌ ಬಿ.ಜೆ. ವಾಟ್ಲಿಂಗ್‌ಗೆ ಕ್ಯಾಚ್ ಕೊಟ್ಟರು.

ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪ್ರಮುಖರಾಗಿರುವ ವಿರಾಟ್ ಕೊಹ್ಲಿ ವಿಕೆಟ್‌ ಗಳಿಸುವಲ್ಲಿಯೂ ಕೈಲ್ ತಡ ಮಾಡಲಿಲ್ಲ. 18ನೇ ಓವರ್‌ನಲ್ಲಿ ಜೆಮಿಸನ್ ಎಸೆತದ ಪುಟಿತವನ್ನು ಅಂದಾಜಿಸುವಲ್ಲಿ ವಿಫಲರಾದ ವಿರಾಟ್ ತಪ್ಪು ಹೊಡೆತ ಪ್ರಯೋಗಿಸಿದರು. ಮೊದಲ ಸ್ಲಿಪ್‌ನಲ್ಲಿದ್ದ ರಾಸ್ ಟೇಲರ್ ಕ್ಯಾಚ್ ಮಾಡಿದರು. ಜೆಮಿಸನ್ ಸಂತಸಕ್ಕೆ ಪಾರವೇ ಇರಲಿಲ್ಲ.

ಊಟದ ವಿರಾಮದವರೆಗೂ ಕ್ರೀಸ್‌ನಲ್ಲಿ ಉಳಿಯುವ ಸಾಹಸ ಮಾಡಿದ ಮಯಂಕ್‌ ಜೊತೆಗೂಡಿದ ಅಜಿಂಕ್ಯ ರಹಾನೆ (ಬ್ಯಾಟಿಂಗ್ 38; 122ಎ, 4ಬೌಂ)ತಾಳ್ಮೆಯ ಆಟವಾಡಿದರು. 35ನೇ ಓವರ್‌ನಲ್ಲಿ ಅನುಭವಿ ವೇಗಿ ಟ್ರೆಂಟ್‌ ಬೌಲ್ಟ್‌ ಶಾರ್ಟ್‌ ಪಿಚ್ ಎಸೆತವನ್ನು ಆಡಿದ ಮಯಂಕ್ ದಂಡ ತೆತ್ತರು. ಲಾಂಗ್‌ಲೆಗ್‌ನಲ್ಲಿದ್ದ ಕೈಲ್ ಕ್ಯಾಚ್ ಪಡೆದು ಕುಣಿದಾಡಿದರು. ಸ್ವಲ್ಪ ಹೊತ್ತಿನ ನಂತರ ಹನುಮವಿಹಾರಿ ವಿಕೆಟ್ ಕಿತ್ತ ಕೈಲ್ ಮಿಂಚಿದರು.

ರಹಾನೆ ಜೊತೆಗೂಡಿದ ರಿಷಭ್ ಪಂತ್ (ಬ್ಯಾಟಿಂಗ್ 10) ವಿಕೆಟ್‌ ಪತನಕ್ಕೆ ತಡೆ ಹಾಕಿದರು. ಆದರೆ, ಮಳೆ ಬಂದ ಕಾರಣ ಪಂದ್ಯ ಸ್ಥಗಿತವಾಯಿತು. ಭಾರತಕ್ಕೆ ಹೋರಾಟದ ಮೊತ್ತ ಪೇರಿಸಿಕೊಡುವ ಸವಾಲು ಇವರಿಬ್ಬರ ಮುಂದಿದೆ. ವೃದ್ಧಿಮಾನ್ ಸಹಾ ಬದಲು ಸ್ಥಾನ ಪಡೆದಿರುವ ರಿಷಭ್‌ಗೆ ಇದು ಮಹತ್ವದ ಪಂದ್ಯ. ಸಾಮರ್ಥ್ಯಸಾಬೀತುಪಡಿಸುವ ಅವಕಾಶ ಅವರ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT