ಗುರುವಾರ , ಮಾರ್ಚ್ 4, 2021
18 °C
ಅಂಬಟಿ ಮಿಂಚು, ಹಾರ್ದಿಕ್ ಆಲ್‌ರೌಂಡ್ ಆಟ

5ನೇ ಏಕದಿನ ಕ್ರಿಕೆಟ್‌ ಪಂದ್ಯ ಗೆಲ್ಲಿಸಿಕೊಟ್ಟ ಬೌಲರ್‌ಗಳು: ಸರಣಿ ಜಯಿಸಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್: ಅಂಬಟಿ ರಾಯುಡು ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಆಟದ ಬಲದಿಂದ ಭಾರತ ಕ್ರಿಕೆಟ್ ತಂಡವು ಭಾನುವಾರ ಇಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಜಯಿಸಿತು. ಇದರೊಂದಿಗೆ 4–1ರಿಂದ ಸರಣಿ ಜಯ ಸಾಧಿಸಿತು.

ಭಾರತ ತಂಡವು ಕಿವೀಸ್ ಪಡೆಯ ವಿರುದ್ಧ ಸಾಧಿಸಿದ ಅತಿ ಹೆಚ್ಚು ಅಂತರದ ಸರಣಿ ಗೆಲುವು ಇದಾಗಿದೆ. ಹೋದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ರೋಹಿತ್ ಶರ್ಮಾ ಬಳಗವು ಇಲ್ಲಿಯೂ ಆರಂಭದಲ್ಲಿ ಆಘಾತ ಅನುಭವಿಸಿತು. ಆದರೆ ಅಂಬಟಿ ರಾಯುಡು  (90; 113ಎಸೆತ; 8ಬೌಂಡರಿ, 4ಸಿಕ್ಸರ್) ಮತ್ತು ಕೊನೆಯ ಹಂತದಲ್ಲಿ ಹಾರ್ದಿಕ್ ಪಾಂಡ್ಯ (45; 22ಎಸೆತ, 2ಬೌಂಡರಿ, 5ಸಿಕ್ಸರ್) ಅವರ ಆಬ್ಬರದ ಬಲದಿಂದ ತಂಡವು 49.5 ಓವರ್‌ಗಳಲ್ಲಿ 252 ರನ್‌ಗಳ ಹೋರಾಟದ ಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ಆತಿಥೇಯ ತಂಡವು ಯಜುವೇಂದ್ರ ಚಾಹಲ್ (41ಕ್ಕೆ3) ಮತ್ತು ಮೊಹಮ್ಮದ್ ಶಮಿ (35ಕ್ಕೆ2) ಅವರ ಬೌಲಿಂಗ್‌ ಮುಂದೆ ಕುಸಿಯಿತು. 44.1 ಓವರ್‌ಗಳಲ್ಲಿ 217 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲ ಮೂರು ಪಂದ್ಯಗಳನ್ನು ಗೆದ್ದಿದ್ದ ಭಾರತ ತಂಡವು ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ನಾಯಕ ವಿರಾಟ್ ಕೊಹ್ಲಿ ನಂತರದ ಪಂದ್ಯಗಳಿಂದ ವಿಶ್ರಾಂತಿ ಪಡೆದು ಸ್ವದೇಶಕ್ಕೆ ಮರಳಿದ್ದರು. ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿ 92 ರನ್‌ ಗಳಿಸಿ ಆಲೌಟ್ ಆಗಿತ್ತು.

ವೆಲ್ಲಿಂಗ್ಟನ್‌ನಲ್ಲಿಯೂ ಅದೇ ಪರಿಸ್ಥಿತಿ ಇತ್ತು. ಆರಂಭಿಕ ಜೋಡಿ ರೋಹಿತ್ ಶರ್ಮಾ (2), ಶಿಖರ್ ಧವನ್  (6) ಬೇಗನೆ ನಿರ್ಗಮಿಸಿದರು. ಪದಾರ್ಪಣೆಯ ಸರಣಿ ಆಡುತ್ತಿರುವ ಶುಭಮನ್ ಗಿಲ್ (7) ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.

ಮ್ಯಾಟ್ ಹೆನ್ರಿ ಮತ್ತು ಟ್ರೆಂಟ್ ಬೌಲ್ಟ್‌ ಆಘಾತ ನೀಡಿದರು. ಅನುಭವಿ ಮಹೇಂದ್ರಸಿಂಗ್ ಧೋನಿ ಕೂಡ ಒಂದು ರನ್ ಹೊಡೆದು ನಿರ್ಗಮಿಸಿದರು. ಗಾಯದಿಂದಾಗಿ ಅವರು ಹೋದ ಪಂದ್ಯದಲ್ಲಿ ಆಡಿರಲಿಲ್ಲ. ಇದರಿಂದಾಗಿ ತಂಡವು ಕೇವಲ 18 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು.

ಅಂಬಟಿ ರಾಯುಡು ಅವರು ಮಾತ್ರ ದಿಟ್ಟವಾಗಿ ಆಡಿದರು. ಅವರಿಗೆ ವಿಜಯ ಶಂಕರ್ (45; 64ಎ, 4ಬೌಂಡರಿ) ಜೊತೆ ನೀಡಿದರು. ಇದರಿಂದಾಗಿ ಐದನೇ ವಿಕೆಟ್‌ ಜೊತೆಯಾಟದಲ್ಲಿ 98 ರನ್‌ಗಳು ಸೇರಿದವು. ಕೇದಾರ್ ಜಾಧವ್ (34 ರನ್) ಕೂಡ ಅಂಬಟಿಗೆ 
ಬೆಂಬಲ ನೀಡಿದರು. ಆರನೇ ವಿಕೆಟ್‌ ಜೊತೆಯಾಟದಲ್ಲಿ 73 ರನ್‌ ಗಳನ್ನು ಸೇರಿಸಿದರು. ಆದರೆ ತಂಡವು ಹೋರಾಟದ ಮೊತ್ತ ಗಳಿಸಲು ಹಾರ್ದಿಕ್ ಪಾಂಡ್ಯ ವಿಶ್ವಾಸಭರಿತ ಆಟವು ಸಹಕಾರಿಯಾಯಿತು. ಅವರು ಟಾಡ್ ಆ್ಯಸ್ಲೆಯ ಬೌಲಿಂಗ್‌ನಲ್ಲಿ ಸತತ ಮೂರು ಸಿಕ್ಸರ್ ಎತ್ತಿದರು. ಕೇವಲ 22 ಎಸೆತಗಳಲ್ಲಿ 45 ರನ್‌ ಸೂರೆ ಮಾಡಿದರು. ಬೌಲಿಂಗ್‌ನಲ್ಲಿಯೂ ಮಿಂಚಿದ ಅವರು  ಎರಡು ವಿಕೆಟ್ ಗಳಿಸಿದರು. ಧೋನಿಯ ಮಿಂಚಿನ ಆಟಕ್ಕೆ ಜೇಮ್ಸ್‌ ನಿಶಾಮ್ (44 ರನ್) ಔಟಾದರು. ಇದರೊಂದಿಗೆ ಕಿವೀಸ್‌ ಮಧ್ಯಮ ಕ್ರಮಾಂಕವು ಕುಸಿಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು