ಮಂಗಳವಾರ, ಫೆಬ್ರವರಿ 18, 2020
17 °C

ಟಿ20 ಕ್ರಿಕೆಟ್ | ಹೆಚ್ಚು ಬಾರಿ 200ಕ್ಕಿಂತ ಅಧಿಕ ಮೊತ್ತ ಬೆನ್ನಟ್ಟಿ ಗೆದ್ದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ಲೆಂಡ್: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ನೀಡಿದ್ದ 204 ಗುರಿಯನ್ನು ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಭಾರತ ತಂಡ ತಲುಪಿತು. ಇದರೊಂದಿಗೆ ಅತಿಹೆಚ್ಚು ಬಾರಿ 200 ಮತ್ತು ಅದಕ್ಕಿಂತ ಹೆಚ್ಚು ರನ್‌ ಬೆನ್ನಟ್ಟಿ ಗೆದ್ದ ತಂಡ ಎನಿಸಿತು.

ಚುಟುಕು ಕ್ರಿಕೆಟ್‌ನಲ್ಲಿ ಇದುವರೆಗೆ 200 ಹಾಗೂ ಅದಕ್ಕಿಂತ ಹೆಚ್ಚು ಮೊತ್ತ ಬೆನ್ನಟ್ಟಿ ಗೆದ್ದ ಪಂದ್ಯಗಳ ಸಂಖ್ಯೆ ಕೇವಲ 13 ಮಾತ್ರ. ಈ ಸಾಧನೆ ಮಾಡಲು ಸಾಧ್ಯವಾಗಿರುವುದು ಕೇವಲ 8 ತಂಡಗಳಿಗೆ ಮಾತ್ರ. ಅದರಲ್ಲೂ ಭಾರತ ನಾಲ್ಕು ಬಾರಿ ಮತ್ತು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ತಲಾ ಎರಡೆರಡು ಸಲ ಈ ಸಾಧನೆ ಮಾಡಿವೆ.

ಉಳಿದಂತೆ, ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌, ಬಾಂಗ್ಲಾದೇಶ ಮತ್ತು ಕತಾರ್‌ ತಂಡಗಳು ಒಂದೊಂದು ಸಲ ಗುರಿ ತಲುಪಿವೆ.

ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 203 ರನ್ ಗಳಿಸಿತ್ತು. ಈ ತಂಡದ ಕಾಲಿನ್‌ ಮನ್ರೋ (59), ನಾಯಕ ಕೇನ್‌ ವಿಲಿಯಮ್ಸನ್‌ (51) ಹಾಗೂ ರಾಸ್ ಟೇಲರ್‌ (54) ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 203ಕ್ಕೆ ತಂದು ನಿಲ್ಲಿಸಿದ್ದರು.

ಈ ಗುರಿಯೆದುರು ಭಾರತದ ಕೆ.ಎಲ್‌.ರಾಹುಲ್‌ (56), ನಾಯಕ ವಿರಾಟ್‌ ಕೊಹ್ಲಿ (45) ಮತ್ತು ಶ್ರೇಯಸ್‌ ಅಯ್ಯರ್‌ (ಔಟಾಗದೆ 58) ಉತ್ತಮ ಆಟವಾಡಿದರು. ಹೀಗಾಗಿ ಕೊಹ್ಲಿ ಪಡೆ 19ನೇ ಓವರ್‌ನಲ್ಲೇ 204ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಮಾತ್ರವಲ್ಲದೆ ಇದು ಭಾರತಕ್ಕೆ ಮೂರನೇ ಅತಿದೊಡ್ಡ ಚೇಸಿಂಗ್ ಜಯವಾಗಿದೆ. 2009ರಲ್ಲಿ ಶ್ರಿಲಂಕಾ ನೀಡಿದ್ದ 207ರನ್‌ ಎದುರು 211 ರನ್‌ ಮತ್ತು ಕಳೆದ ವರ್ಷ ವೆಸ್ಟ್‌ ಇಂಡೀಸ್‌ ನೀಡಿದ್ದ 208 ರನ್‌ ಎದುರು 2019 ರನ್‌ ಗಳಿಸಿ ಗೆದ್ದಿತ್ತು. 

ಇದೇ ಮೈದಾನದಲ್ಲಿ 2008ರಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್‌ ವಿರುದ್ಧ 244 ರನ್‌ ಗುರಿ ಬೆನ್ನಟ್ಟಿ ಗೆದ್ದಿತ್ತು. ಇದು ಚುಟುಕು ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟಿ ಗೆದ್ದ ಅತಿದೊಡ್ಡ ಮೊತ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು