ನವದೆಹಲಿ (ಪಿಟಿಐ): ಏಕದಿನ ವಿಶ್ವಕಪ್ ಟೂರ್ನಿಯ ಇನ್ನು ಕೆಲವು ಪಂದ್ಯಗಳ ದಿನಾಂಕ ಮತ್ತು ಸಮಯದಲ್ಲಿ ಬದಲಾವಣೆಯಾಗಿದೆ. ಈ ಹಿಂದಿನ ಬದಲಾವಣೆಯೂ ಸೇರಿ ಒಟ್ಟು 9 ಪಂದ್ಯಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಇಂಗ್ಲೆಂಡ್, ಪಾಕಿಸ್ತಾನ ತಂಡಗಳು ಆಡುವ ಮೂರು ಪಂದ್ಯಗಳಲ್ಲಿ ಬದಲಾವಣೆ ಆಗಿದೆ. ಐಸಿಸಿ ಇದನ್ನು ಬುಧವಾರ ಖಚಿತಪಡಿಸಿದೆ.
ಭಾರತ– ಪಾಕಿಸ್ತಾನ ಪಂದ್ಯ ಅಕ್ಟೋಬರ್ 14ರಂದು (ಅ. 15ರ ಬದಲು) ನಡೆಯಲಿದೆ. ಬೆಂಗಳೂರಿನಲ್ಲಿ ಭಾರತ– ನೆದರ್ಲೆಂಡ್ಸ್ ಪಂದ್ಯ ನವೆಂಬರ್ 12ರಂದು (11ರ ಬದಲು) ನಡೆಯಲಿದೆ.
ಪಾಕಿಸ್ತಾನ – ಶ್ರೀಲಂಕಾ ನಡುವಣ ಪಂದ್ಯ ಹೈದರಾಬಾದ್‌ನಲ್ಲಿ ಅಕ್ಟೋಬರ್ 11ರ ಬದಲು ಅ.10ರಂದು ನಡೆಯಲಿದೆ. ಅದೇ ದಿನ ಇಂಗ್ಲೆಂಡ್ ತಂಡ ಧರ್ಮಶಾಲಾದಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇದು ಹಗಲು–ರಾತ್ರಿ ಬದಲು ಹಗಲು (ಬೆಳಿಗ್ಗೆ 10.30ರಿಂದ) ನಡೆಯಲಿದೆ.
ಇಂಗ್ಲೆಂಡ್– ಅಫ್ಗಾನಿಸ್ತಾನ ನಡುವಣ ಪಂದ್ಯ ನವದೆಹಲಿಯಲ್ಲಿ ಅಕ್ಟೋಬರ್ 14ರ ಬದಲು 15ರಂದು ನಡೆಯಲಿದೆ.
ಇಂಗ್ಲೆಂಡ್–ಪಾಕಿಸ್ತಾನ ನಡುವಣ ಪಂದ್ಯ ಕೋಲ್ಕತ್ತದಲ್ಲಿ ನವೆಂಬರ್ 12ರ ಬದಲು ನವೆಂಬರ್ 11ರಂದು ನಿಗದಿಯಾಗಿದೆ. ನ. 12ರಂದು ಕೋಲ್ಕತ್ತದಲ್ಲಿ ಕಾಳಿಪೂಜೆ ನಡೆಯುವ ಕಾರಣ, ಭದ್ರತೆ ದೃಷ್ಟಿಯಿಂದ ಬದಲಾವಣೆ ನಿರೀಕ್ಷಿಸಲಾಗಿತ್ತು. ನ್ಯೂಜಿಲೆಂಡ್– ಬಾಂಗ್ಲಾದೇಶ ನಡುವಣ ಪಂದ್ಯ ಅಕ್ಟೋಬರ್ ಚೆನ್ನೈನಲ್ಲಿ ಅಕ್ಟೋಬರ್ 14ರ ಬದಲು 13ರಂದು ನಡೆಯಲಿದೆ. ಇದು ಹಗಲು–ರಾತ್ರಿ ಪಂದ್ಯ.
ಭಾರತ ಆಡುವ ಪಂದ್ಯಗಳ ಟಿಕೆಟ್ ಮರಾಟ ಆ. 30 ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್ ಕಾದಿರಿಸುವಿಕೆ ಸೆ. 15ರಂದು ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.