ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿಗೆ ಸಿಗುವ ಲಾಭದಿಂದ ಏಕದಿನ ಕ್ರಿಕೆಟ್‌ನ ಅಸ್ತಿತ್ವ

ವೆಸ್ಟ್‌ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಮೈಕೆಲ್‌ ಹೋಲ್ಡಿಂಗ್‌ ಅಭಿಮತ
Last Updated 8 ಜೂನ್ 2020, 11:40 IST
ಅಕ್ಷರ ಗಾತ್ರ

ನವದೆಹಲಿ: ‘ಅಸ್ತಿತ್ವ ಕಳೆದುಕೊಳ್ಳುವ ಕಳವಳದ ನಡುವೆಯೂ ಏಕದಿನ ಕ್ರಿಕೆಟ್‌ ಮಾದರಿ ಉಳಿದುಕೊಂಡಿದೆ. ಅದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ (ಐಸಿಸಿ) ತಂದುಕೊಡುತ್ತಿರುವ ಆರ್ಥಿಕ ಲಾಭವೇ ಇದಕ್ಕೆ ಕಾರಣ’ ಎಂದು ವೆಸ್ಟ್‌ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಮೈಕೆಲ್ ಹೋಲ್ಡಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಟ್ವೆಂಟಿ–20 ಮಾದರಿಯ ತೀವ್ರಗತಿಯ ಬೆಳವಣಿಗೆಯು, ಏಕದಿನ ಕ್ರಿಕೆಟ್‌ನ ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂದು ಹಿರಿಯ ಆಟಗಾರರಾದ ರಿಕಿ ಪಾಂಟಿಂಗ್‌ ಹಾಗೂ ರಾಹುಲ್‌ ದ್ರಾವಿಡ್‌ ಆತಂಕ ವ್ಯಕ್ತಪಡಿಸಿದ್ದರು. ಟೆಸ್ಟ್‌ ಮಾದರಿಯು, ಕ್ರಿಕೆಟಿಗನೊಬ್ಬನಿಗೆ ಎದುರಾಗುವ ನಿಜವಾದ ಸವಾಲು ಎಂದು ಅವರು ಹೇಳಿದ್ದರು.

ಆದರೆ 50 ಓವರ್‌ಗಳ ಮಾದರಿಯು ಎಲ್ಲೆಡೆ ನಡೆಯುತ್ತಲೇ ಇದೆ ಎಂಬುದು ಹೋಲ್ಡಿಂಗ್‌ ಅವರ ಅಭಿಮತ.

‘ಏಕದಿನ ಮಾದರಿಯನ್ನುಐಸಿಸಿಯು ಕೈಬಿಡುತ್ತದೆ ಎಂದು ನನಗೇನೂ ಅನಿಸುವುದಿಲ್ಲ. ಏಕೆಂದರೆ ಟಿವಿ ಪ್ರಸಾರ ಹಕ್ಕುಗಳ ವಿಷಯದಲ್ಲಿ ಇದು ಮಂಡಳಿಗೆ ಬಹಳಷ್ಟು ಆದಾಯ ತಂದುಕೊಡುತ್ತಿದೆ. ನಾನೇನು ಟ್ವೆಂಟಿ–20 ಕ್ರಿಕೆಟ್‌ನ ದೊಡ್ಡ ಅಭಿಮಾನಿ ಅಲ್ಲ. ಆದರೆ ಪಂದ್ಯದ ಓವರುಗಳನ್ನು ಕಡಿಮೆ ಮಾಡುತ್ತಿರುವುದು ಸರಿಯಲ್ಲ’ ಎಂದು ಇನ್ಸ್ಟ್ರಾಗ್ರಾಮ್‌ ಸಂವಾದವೊಂದರಲ್ಲಿ ಅವರು ಹೇಳಿದ್ದಾರೆ.

‘ಜನರು ಕಡಿಮೆ ಓವರುಗಳ ಪಂದ್ಯದ ಆಕರ್ಷಣೆ ಬೆಳೆಸಿಕೊಳ್ಳುತ್ತಾರೆ. ಅಂಥವರ ಗಮನವನ್ನು ಎಲ್ಲ ಕಾಲಕ್ಕೂ ಹಿಡಿದಿಡಲಾಗುವುದಿಲ್ಲ. ಓವರುಗಳನ್ನು ಕಡಿತಗೊಳಿಸುತ್ತಲೇ ಸಾಗುವುದು ಸಾಧ್ಯವಿಲ್ಲ’ ಎಂದು ಹೋಲ್ಡಿಂಗ್‌ ನುಡಿದರು.

ಎಂಜಲು ನಿಷೇಧದಿಂದ ಸಮಸ್ಯೆಯಿಲ್ಲ: ಚೆಂಡನ್ನು ಹೊಳೆಯುವಂತೆ ಮಾಡಲು ಎಂಜಲು ಬಳಕೆ ಮಾಡುವುದನ್ನು ನಿಷೇಧಿಸುವಂತೆ ಐಸಿಸಿ ಕ್ರಿಕೆಟ್‌ ಸಮಿತಿಯು ಮಾಡಿದ ಶಿಫಾರಸು ಪ್ರಾಯೋಗಿಕವಾಗಿ ಯಾವುದೇ ಸಮಸ್ಯೆ ತಂದೊಡ್ಡದು. ಕೆಲವು ದಿನಗಳ ಬಳಿಕ ಕ್ರಿಕೆಟಿಗರು ಇದಕ್ಕೆ ಹೊಂದಿಕೊಳ್ಳುತ್ತಾರೆ’ ಎಂದು ಹೋಲ್ಡಿಂಗ್ ಹೇಳಿದರು.

ಎಂಜಲಿನಷ್ಟೇ ಪರಿಣಾಮಕಾರಿಯಾಗಿ ಬೆವರಿನಿಂದಲೂ ಚೆಂಡನ್ನು ಹೊಳೆಯುವಂತೆ ಮಾಡಬಹುದು ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT