ಭಾನುವಾರ, ಸೆಪ್ಟೆಂಬರ್ 27, 2020
26 °C
ಕಿಂಗ್ಸ್‌ ಇಲೆವನ್ ಪಂಜಾಬ್ ಫ್ರ್ಯಾಂಚೈಸಿ ಸಹಮಾಲೀಕ ನೆಸ್ ವಾಡಿಯಾ ಆತಂಕ

ಒಂದು ಸೋಂಕಿನ ಪ್ರಕರಣದಿಂದ ಐಪಿಎಲ್‌ಗೇ ಧಕ್ಕೆ: ನೆಸ್ ವಾಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಾಯೋಜಕತ್ವದ ಬಗ್ಗೆ ಹೆಚ್ಚು ಗೊಂದಲ ಮಾಡಿಕೊಳ್ಳುವ ಬದಲು. ಐಪಿಎಲ್‌ನಲ್ಲಿ ಆಟಗಾರರ ಸುರಕ್ಷತೆಯ ಕುರಿತು ಹೆಚ್ಚು ಗಮನ ನೀಡಬೇಕು. ಟೂರ್ನಿ ಸಂದರ್ಭದಲ್ಲಿ ಯಾರಾದರೊಬ್ಬರಿಗೆ ಕೋವಿಡ್ ಸೋಂಕು ತಗುಲಿದರೂ ಎಲ್ಲ ಶ್ರಮವೂ ವ್ಯರ್ಥವಾದಂತೆ ಎಂದು ಕಿಂಗ್ಲ್ ಇಲೆವನ್ ಪಂಜಾಬ್ ತಂಡದ ಸಹಮಾಲೀಕ ನೆಸ್ ವಾಡಿಯಾ ಎಚ್ಚರಿಸಿದ್ದಾರೆ.

’ಪ್ರಾಯೋಜಕತ್ವದ ಕುರಿತು ವಿಪರೀತ ಚರ್ಚೆಗಳು ನಡೆಯುತ್ತಿವೆ. ಇದು ಅಸಂಬದ್ಧ.  ಐಪಿಎಲ್ ನೆಡೆಯಲಿದೆ ಎಂಬುದೇನೊ ನಮಗೆ ಗೊತ್ತಾಗಿದೆ. ಆದರೆ ಆಟಗಾರರು ಮತ್ತು ಇನ್ನಿತರರ ಆರೋಗ್ಯ ಸುರಕ್ಷತೆಯ ಕುರಿತು ಹೆಚ್ಚು ಚರ್ಚೆಗಳು ಆಗಬೇಕು. ಒಂದೇ ಒಂದು ಪ್ರಕರಣ ದಾಖಲಾದರೂ ಇಡೀ ಟೂರ್ನಿಯೇ ವಿಫಲವಾಗುತ್ತದೆ‘ ಎಂದು ಹೇಳಿದರು. ಬುಧವಾರ ಐಪಿಎಲ್ ಫ್ರ್ಯಾಂಚೈಸಿ ಗಳ ಮಾಲೀಕರ ಸಭೆಯ ನಂತರ ಅವರು ಮಾತನಾಡಿದರು.

’ಇವತ್ತಿನ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಎಲ್ಲ ಪ್ರಾಯೋಜಕರು ಚೌಕಾಶಿ ಮಾಡುವುದು ಖಚಿತ. ನಿರೀಕ್ಷಿತ ಮಟ್ಟದ ಮೊತ್ತ ಸಿಗುವುದು ಸವಾಲಿನ ಕೆಲಸವೇ ಸರಿ. ಆದರೆ, ಈ ಬಾರಿಯ ಐಪಿಎಲ್ ಟೂರ್ನಿಯನ್ನು ದಾಖಲೆಯ ಸಂಖ್ಯೆಯಲ್ಲಿ ಜನರು ವೀಕ್ಷಿಸುವುದು ಖಚಿತ. ಅದೂ ವಿಶ್ವದಾದ್ಯಂತ‘ ಎಂದು ಉದ್ಯಮಿಯೂ  ಆಗಿರುವ ವಾಡಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾವು ತಂಡದೊಂದಿಗೆ ಯುಎಇಗೆ ಪ್ರಯಾಣಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ’ಜೀವ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಈಗಿರುವ ಸಂಕಷ್ಟದ ವಾತಾವರಣದಲ್ಲಿ ಸರಿಯಾದ ನಿರ್ಧಾರ ಮುಖ್ಯ. ಸಾಮಾನ್ಯ ಜನರು ಅತಿವಿಶೇಷವಾದ ಕಾರ್ಯ ಮಾಡಬೇಕಾದ ಕಾಲವೂ ಇದಾಗಿದೆ. ಪ್ರಯಾಣದ ಕುರಿತು ಇನ್ನೂ ನಿರ್ಧರಿಸಿಲ್ಲ‘ ಎಂದರು. 

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಟೂರ್ನಿಯು ನಡೆಯಲಿದೆ. ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಯುಎಇಯಲ್ಲಿ ಟೂರ್ನಿ ನಡೆಸಲು ಈಚೆಗೆ ಬಿಸಿಸಿಐ ನಿರ್ಧರಿಸಿದೆ. ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ. 

 ಬಿಸಿಸಿಐ 16 ಪುಟಗಳ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ. ಈ ಕೈಪಿಡಿಯನ್ನು ಫ್ರ್ಯಾಂಚೈಸಿಗಳಿಗೆ ನೀಡಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು