ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ದೇವದತ್ತ ಮತ್ತೆ ಶತಕ; ಕರ್ನಾಟಕ ಜಯಭೇರಿ

ದಾಖಲೆ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಶೂನ್ಯಕ್ಕೆ ಔಟ್‌; ಕೇರಳಕ್ಕೆ ಸೋಲು
Last Updated 26 ಫೆಬ್ರುವರಿ 2021, 14:01 IST
ಅಕ್ಷರ ಗಾತ್ರ

ಬೆಂಗಳೂರು: ವೇಗಿ ಅಭಿಮನ್ಯು ಮಿಥುನ್ ಮೊನಚಾದ ದಾಳಿಯ ಮೂಲಕ ಎದುರಾಳಿಗಳನ್ನು ದಿಕ್ಕು ತಪ್ಪಿಸಿದರೆ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಸತತ ಎರಡನೇ ಶತಕ ಸಿಡಿಸಿ ಮಿಂಚಿದರು. ನಾಯಕ ಆರ್.ಸಮರ್ಥ್ ಮತ್ತು ಮೂರನೇ ಕ್ರಮಾಂಕದ ಕೆ.ವಿ.ಸಿದ್ಧಾರ್ಥ್ ಕೂಡ ಬೌಲರ್‌ಗಳನ್ನು ಕಂಗೆಡಿಸಿದರು. ಸಂಘಟಿತ ಆಟಕ್ಕೆ ಫಲ ಕಂಡ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಒಂಬತ್ತು ವಿಕೆಟ್‌ಗಳಿಂದಕೇರಳವನ್ನು ಮಣಿಸಿತು. ಈ ಮೂಲಕ ಕೇರಳ ಮತ್ತು ಉತ್ತರಪ್ರದೇಶ ತಂಡಗಳನ್ನು ಹಿಂದಿಕ್ಕಿ ಗುಂಪು ಹಂತದಲ್ಲಿ ಅಗ್ರ ಪಟ್ಟ ಅಲಂಕರಿಸಿತು.

ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದೇಶಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 11 ಶತಕ ಸಿಡಿಸಿದ ದಾಖಲೆ ಹೊಂದಿರುವ ರಾಬಿನ್ ಉತ್ತಪ್ಪ ದಾಖಲೆಯ 78ನೇ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು. ಆದರೆ ತಮ್ಮ ಮಾಜಿ ಸಹ ಆಟಗಾರ ಅಭಿಮನ್ಯು ಮಿಥುನ್ ಅವರ ವೇಗದ ಅಸ್ತ್ರದ ಮುಂದೆ ಅವರ ಲೆಕ್ಕಾಚಾರ ತಪ್ಪಿತು. ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ ಶರತ್‌ಗೆ ಕ್ಯಾಚ್ ನೀಡಿ ಮರಳಿದರು.

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉತ್ತಮ ಜೊತೆಯಾಟದಿಂದಾಗಿ 277 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಕರ್ನಾಟಕ 27 ಎಸೆತಗಳು ಬಾಕಿ ಇರುವಾಗಲೇ ಜಯದ ನಗೆ ಬೀರಿತು.

ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ಯುವ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ (ಔಟಾಗದೆ 126;138 ಎಸೆತ, 13 ಬೌಂಡರಿ, 2 ಸಿಕ್ಸರ್‌) ಮತ್ತು ಆರ್‌.ಸಮರ್ಥ್ (62; 51 ಎ, 10 ಬೌಂ) ಉತ್ತಮ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ ಇವರಿಬ್ಬರು 99 ರನ್ ಸೇರಿಸಿದರು.

ನಾಯಕ ಔಟಾದ ನಂತರ ಕ್ರೀಸ್‌ಗೆ ಬಂದ ಕೆ.ವಿ.ಸಿದ್ಧಾರ್ಥ್ (86‍; 84 ಎ, 5 ಬೌಂ, 3 ಸಿ) ಅಮೋಘ ಬ್ಯಾಟಿಂಗ್ ಮಾಡಿದರು. ದೇವದತ್ತ ಜೊತೆ ಎರಡನೇ ವಿಕೆಟ್‌ಗೆ 180 ರನ್‌ಗಳನ್ನು ಸೇರಿಸಿದ ಅವರು ತಂಡ ಸುಲಭ ಜಯ ಗಳಿಸಲು ನೆರವಾದರು.

ಎರಡು ದಿನಗಳ ಹಿಂದೆ ಒಡಿಶಾ ಎದುರು 152 ರನ್ ಗಳಿಸಿದ್ದ ದೇವದತ್ತ ಅದೇ ಲಯದಲ್ಲಿ ಬ್ಯಾಟಿಂಗ್ ಮುಂದುವರಿಸಿದರು. ಅನುಭವಿಗಳಾದ ವೇಗಿ ಶ್ರೀಶಾಂತ್‌ ಮತ್ತು ಆಫ್‌ ಸ್ಪಿನ್ನರ್ ಜಲಜ್ ಸಕ್ಸೇನ ಒಳಗೊಂಡಂತೆ ಕೇರಳದ ಬೌಲರ್‌ಗಳನ್ನು ನಿರಾಯಾಸವಾಗಿ ಎದುರಿಸಿದ ಅವರು 13 ಬೌಂಡರಿ ಸಿಡಿಸಿದರು. ಎರಡು ಸಿಕ್ಸರ್‌ಗಳೂ ಅವರ ಇನಿಂಗ್ಸ್‌ನಲ್ಲಿ ಇದ್ದವು. ಈಗಾಗಲೇ ಎರಡು ಅರ್ಧಶತಕಗಳನ್ನು ಕೂಡ ಗಳಿಸಿರುವ ದೇವದತ್ತ ನಾಲ್ಕು ಪಂದ್ಯಗಳಿಂದ ಒಟ್ಟು 427 ರನ್‌ ಕಲೆ ಹಾಕಿ ಹೆಚ್ಚು ರನ್‌ ಗಳಿಸಿರುವವರ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಕೇರಳಕ್ಕೆ ವೇಗಿಗಳಾದ ಅಭಿಮನ್ಯು ಮಿಥುನ್ ಮತ್ತು ಪ್ರಸಿದ್ಧ ಕೃಷ್ಣ ಭಾರಿ ಪೆಟ್ಟು ನೀಡಿದರು. ಮಿಥುನ್ ಐದು ವಿಕೆಟ್ ಉರುಳಿಸಿದರು. ನಾಲ್ಕು ರನ್ ಗಳಿಸುವಷ್ಟರಲ್ಲಿ ಕೇರಳ ತಂಡ ರಾಬಿನ್ ಉತ್ತಪ್ಪ ಮತ್ತು ಸಂಜು ಸ್ಯಾಮ್ಸನ್ ಅವರ ವಿಕೆಟ್ ಕಳೆದುಕೊಂಡಿತ್ತು. 40ಕ್ಕೆ3 ವಿಕೆಟ್ ಉರುಳಿದ್ದಾಗ ವತ್ಸಲ್ ಗೋವಿಂದ್ (95;124ಎ, 7ಬೌಂ, 1ಸಿ) ಮತ್ತು ನಾಯಕ ಸಚಿನ್ ಬೇಬಿ (54; 63ಎ, 2 ಬೌಂ, 1 ಸಿ) 114 ರನ್‌ಗಳನ್ನು ಸೇರಿಸಿ ತಂಡವನ್ನು ರಕ್ಷಿಸಿದರು. ಆರನೇ ಕ್ರಮಾಂಕದ ಮೊಹಮ್ಮದ್ ಅಜರುದ್ದೀನ್ (ಔಟಾಗದೆ 59; 38ಎ, 2ಬೌಂ, 3ಸಿ) ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು.

ಬೆಂಗಳೂ‌ರಿನಲ್ಲಿ ನಡೆದ ಇತರ ಪಂದ್ಯಗಳ ಸಂಕ್ಷಿಪ್ತ ಸ್ಕೋರು: ಆಲೂರು 3ನೇ ಮೈದಾನ: ಉತ್ತರ ಪ್ರದೇಶ: 50 ಓವರ್‌ಗಳಲ್ಲಿ 6ಕ್ಕೆ 346 (ಪ್ರಿಯಂ ಗಾರ್ಗ್‌ 115, ಅಕ್ಷದೀಪ್ ನಾಥ್ 93; ಅನಂತ ಸಹ 66ಕ್ಕೆ3); ರೈಲ್ವೇಸ್‌: 46.1 ಓವರ್‌ಗಳಲ್ಲಿ 276 (ಶಿವಂ ಚೌಧರಿ 107, ಸೌರಭ್ ಸಿಂಗ್‌ 51); ಶಿವಂ ಮಾವಿ 51ಕ್ಕೆ4, ಭುವನೇಶ್ವರ್ ಕುಮಾರ್ 49ಕ್ಕೆ2). ಫಲಿತಾಂಶ: ಉತ್ತರ ಪ್ರದೇಶಕ್ಕೆ 70 ರನ್‌ಗಳ ಜಯ.

ಆಲೂರು ಎರಡನೇ ಮೈದಾನ: ಬಿಹಾರ: 50 ಓವರ್‌ಗಳಲ್ಲಿ 7ಕ್ಕೆ 255 (ಬಾಬುಲ್ ಕುಮಾರ್ 78, ಶಕೀಬುಲ್ ಗನಿ 48; ಶಂತನು ಮಿಶ್ರಾ 46ಕ್ಕೆ3); ಒಡಿಶಾ: 48.1 ಓವರ್‌ಗಳಲ್ಲಿ 3ಕ್ಕೆ 258 (ಶಂತನು ಮಿಶ್ರಾ 76, ಸಂದೀಪ್ ಪಟ್ನಾಯಕ್ 64, ಕಾರ್ತಿಕ್ ಬಿಸ್ವಾಲ್ ಔಟಾಗದೆ 53, ಅಂಕಿತ್ ಯಾದವ್ ಔಟಾಗದೆ 43). ಫಲಿತಾಂಶ: ಒಡಿಶಾಗೆ 7 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT