ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆ ಎದುರಿನ ಕ್ರಿಕೆಟ್ ಸರಣಿ ಆತಿಥ್ಯಕ್ಕೆ ಪಾಕ್ ಸಜ್ಜು

Last Updated 23 ಸೆಪ್ಟೆಂಬರ್ 2020, 14:11 IST
ಅಕ್ಷರ ಗಾತ್ರ

ಕರಾಚಿ: ಜಿಂಬಾಬ್ವೆ ವಿರುದ್ಧ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಜ್ಜಾಗಿದ್ದು ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಪಂದ್ಯಗಳು ನಡೆಯಲಿವೆ. ಈ ವಿಷಯವನ್ನು ಮಂಡಳಿ ಬುಧವಾರ ತಿಳಿಸಿದೆ.

ಮುಂದಿನ ತಿಂಗಳು ಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಬರಲಿದ್ದು ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಆಡಲಿದೆ. ‌ಕೋವಿಡ್–19 ಹಿನ್ನೆಲೆಯಲ್ಲಿ ಸರಣಿಗಳು ಬಯೊ ಸೆಕ್ಯೂರ್ ವ್ಯವಸ್ಥೆಯಡಿ ನಡೆಯಲಿವೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಕಾಲದಲ್ಲಿ ಕ್ರಿಕೆಟ್ ಸರಣಿ ಆಯೋಜಿಸಿದ ಮೊದಲ ದೇಶ ಇಂಗ್ಲೆಂಡ್‌. ಜುಲೈ ತಿಂಗಳಿಂದ ಸೆಪ್ಟೆಂಬರ್ ವರೆಗೆ ಅಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನ, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರು ಸರಣಿಗಳು ನಡೆದಿದ್ದವು. ನಿಗದಿತ ಅವಧಿಯಲ್ಲಿ ಕೋವಿಡ್ ‍ಪರೀಕ್ಷೆಗೆ ಒಳಗಾದ ಆಟಗಾರರು ಕ್ರೀಡಾಂಗಣ ಮತ್ತು ಹೋಟೆಲ್‌ನ ಬಯೊಬಬಲ್‌ನಲ್ಲಿ ಇರಬೇಕಾಗಿತ್ತು.

ವೈರಸ್ ನಿಯಂತ್ರನಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಇಂಗ್ಲೆಂಡ್‌ ಜೊತೆ ಚರ್ಚೆ ನಡೆಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದ್ದು ಈ ತಿಂಗಳ 30ರಂದು ಅರಂಭವಾಗುವ ರಾಷ್ಟ್ರೀಯ ಟ್ವೆಂಟಿ–20 ಸರಣಿಯಲ್ಲಿ ಅದನ್ನು ಅಳವಡಿಸಲಾಗುವುದು. ಅಕ್ಟೋಬರ್ 20ರ ವೇಳೆ ಜಿಂಬಾಬ್ವೆ ತಂಡ ಇಲ್ಲಿಗೆ ಬರಲಿದ್ದು ಆ ಸಂದರ್ಭದಲ್ಲಿ ಬಯೊಸೆಕ್ಯೂರ್ ವ್ಯವಸ್ಥೆಯ ನಿರ್ವಹಣೆಯಲ್ಲಿ ಹೆಚ್ಚು ಅನುಭವ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಜಿಂಬಾಬ್ವೆ ತಂಡದಲ್ಲಿ 32 ಆಟಗಾರರು ಇರುತ್ತಾರೆ. ಎರಡೂ ಮಾದರಿಯಲ್ಲಿ ಆಡಲು ಮತ್ತು ಅವರೊಳಗೇ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಈ ಸಂಖ್ಯೆ ಅನುಕೂಲ ಆಗಲಿದೆ.

10 ದಿನಗಳ ಕ್ವಾರಂಟೈನ್‌ ನಂತರ ಅಕ್ಟೋಬರ್ 30ರಂದು ಮೊದಲ ಏಕದಿನ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದೆ.‍ನವೆಂಬರ್‌ 1 ಮತ್ತು 3ರಂದು ಇತರ ಎರಡು ಪಂದ್ಯಗಳು ನಡೆಯಲಿವೆ. ಟ್ವೆಂಟಿ–20 ಪಂದ್ಯಗಳು ನವೆಂಬರ್ 7, 8 ಮತ್ತು 10ರಂದು ರಾವಲ್ಪಿಂಡಿಯಲ್ಲಿ ನಡೆಯಲಿವೆ.ಪಂದ್ಯಗಳಿಗೆ ಪ್ರೇಕ್ಷರಿಗೆ ಪ್ರವೇಶ ಇರುವುದಿಲ್ಲ.

ಪಾಕಿಸ್ತಾನದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಕಳೆದ ಕೆಲವು ತಿಂಗಳಿಂದ ಕಡಿಮೆಯಾಗುತ್ತಿದ್ದು ಲಾಕ್‌ಡೌನ್‌ ಹಿಂತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT