ಶನಿವಾರ, ಸೆಪ್ಟೆಂಬರ್ 26, 2020
23 °C
ಅರ್ಧಶತಕ ಸಿಡಿಸಿದ ವಿಕೆಟ್ ಕೀಪರ್

ಟೆಸ್ಟ್‌ ಕ್ರಿಕೆಟ್‌: ಆ್ಯಂಡರ್ಸನ್ ದಾಳಿಗೆ ರಿಜ್ವಾನ್ ತಿರುಗೇಟು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಮಳೆ ಮತ್ತು ಮಂದಬೆಳಕಿನ ‘ಆಟ’ ಹಾಗೂ ವೇಗದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರು ಪಾಕಿಸ್ತಾನಕ್ಕೆ ಶುಕ್ರವಾರ ಆಸರೆಯಾದರು. ಒತ್ತಡದ ನಡುವೆಯೂ ಅವರು ತಾಳ್ಮೆಯಿಂದ ಗಳಿಸಿದ ಅರ್ಧಶತಕದ (ಬ್ಯಾಟಿಂಗ್ 60; 116 ಎಸೆತ, 5 ಬೌಂಡರಿ) ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ನಿಟ್ಟುಸಿರು ಬಿಟ್ಟಿತು. ಮೊದಲ ದಿನವಾದ ಗುರುವಾರ ಐದು ವಿಕೆಟ್‌ಗಳಿಗೆ 126 ರನ್ ಗಳಿಸಿದ್ದ ತಂಡ ಎರಡನೇ ದಿನ ಚಹಾ ವಿರಾಮದ ನಂತರ ಬೆಳಕಿನ ಅಭಾವದಿಂದ ಆಟ ಸ್ಥಗಿತಗೊಂಡಾಗ ಒಂಬತ್ತು ವಿಕೆಟ್‌ ಕಳೆದುಕೊಂಡು 223 ರನ್ ಕಲೆ ಹಾಕಿದೆ.

ಗುರುವಾರ ಪತನದತ್ತ ಸಾಗಿದ್ದ ಪಾಕಿಸ್ತಾನ ತಂಡವನ್ನು ರಕ್ಷಿಸಿದ್ದ ಬಾಬರ್ ಆಜಂ ಅವರು ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ಭರವಸೆ ಮೂಡಿಸಿದ್ದರು. ಕ್ರಮವಾಗಿ 25 ಮತ್ತು ನಾಲ್ಕು ರನ್ ಗಳಿಸಿ ಔಟಾಗದೇ ಉಳಿದಿದ್ದ ಇವರಿಬ್ಬರು ಶುಕ್ರವಾರ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದರು. ಮಳೆಯಿಂದಾಗಿ ಅಂಗಣದಲ್ಲಿ ನೀರು ನಿಂತಿದ್ದುದರಿಂದ ದಿನದಾಟವನ್ನು ಒಂದೂವರೆ ತಾಸು ತಡವಾಗಿ ಆರಂಭಿಸಲಾಯಿತು. ಭೋಜನವನ್ನು ಅರ್ಧ ತಾಸು ಮುಂದೂಡಿದ್ದರಿಂದ ವಿರಾಮಕ್ಕೂ ಮೊದಲು ಒಂದು ತಾಸಿನ ಆಟದಲ್ಲಿ ಇಬ್ಬರೂ 29 ರನ್ ಸೇರಿಸಿದರು. ಈ ಸಂದರ್ಭದಲ್ಲಿ ಬಾಬರ್ 45 ಮತ್ತು ರಿಜ್ವಾನ್ 12 ರನ್ ಗಳಿಸಿದ್ದರು.

ಭೋಜನದ ನಂತರ ಮಂದಬೆಳಕು ಕಾಡಿತು. ಆದ್ದರಿಂದ ಹೊನಲು ಬೆಳಕಿನಲ್ಲಿ ಪಂದ್ಯ ಮುಂದುವರಿಸಲು ನಿರ್ಧರಿಸಲಾಯಿತು. ಈ ಪರಿಸ್ಥಿತಿಯಲ್ಲಿ ಬಾಬರ್ ಮತ್ತು ರಿಜ್ವಾನ್ ನಾಲ್ವರು ವೇಗಿಗಳನ್ನು ದಿಟ್ಟವಾಗಿ ಎದುರಿಸಿದರು. ಅರ್ಧಶತಕ ಪೂರೈಸಲಾಗದೆ ಬಾಬರ್ (47; 127 ಎ, 3 ಬೌಂ) ಮರಳಿದರು. ನಂತರ ಯಾಸೀರ್ ಶಾ, ಶಾಹಿನ್ ಶಾ ಅಫ್ರಿದಿ ಮತ್ತು ಮೊಹಮ್ಮದ್ ಅಬ್ಬಾಸ್ ಎರಡಂಕಿಯನ್ನೂ ತಲುಪಲಾಗದೆ ಮರಳಿದರು. ಆದರೆ ರಿಜ್ವಾನ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ತಳವೂರಿದರು. ಚಹಾ ವಿರಾಮಕ್ಕೂ ಮೊದಲೇ ಬೆಳಕಿನ ಅಭಾವ ಕಾಡಿತು. ಹೀಗಾಗಿ ಆಟಗಾರರು ಅಂಗಣ ತೊರೆದರು. ವಿರಾಮದ ನಂತರ ವಾಪಸ್ ಬಂದರೂ ಕೇವಲ ಒಂಬತ್ತು ಎಸೆತಗಳ ಆಟ ನಡೆಯಿತು. ಅಷ್ಟರಲ್ಲಿ ಸ್ಟುವರ್ಟ್ ಬ್ರಾಡ್ ತಮ್ಮ ಮೂರನೇ ವಿಕೆಟ್ ಕಬಳಿಸಿದರು. ಮತ್ತೊಮ್ಮೆ ಬೆಳಕಿನ ಅಭಾವ ಕಾಡಿದ್ದರಿಂದ ಆಟ ಸ್ಥಗಿತಗೊಂಡಿತು. ನಂತರ ದಿನದಾಟವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. ರಿಜ್ವಾನ್ ಜೊತೆ ಒಂದು ರನ್ ಗಳಿಸಿದ ನಸೀಮ್ ಶಾ ಕ್ರೀಸ್‌ನಲ್ಲಿದ್ದಾರೆ.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ರೋಚಕ ಜಯ ಗಳಿಸಿತ್ತು. ಈ ಪಂದ್ಯದಲ್ಲೂ ಗೆದ್ದು ಸರಣಿ ತನ್ನದಾಗಿಸಿಕೊಂಡರೆ 2010ರ ನಂತರ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಸರಣಿ ಗೆದ್ದ ಸಾಧನೆ ಆ ತಂಡದ್ದಾಗಲಿದೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ, ಮೊದಲ ಇನಿಂಗ್ಸ್‌ (ಗುರುವಾರ 45.4 ಓವರ್‌ಗಳಲ್ಲಿ 5ಕ್ಕೆ126): 86 ಓವರ್‌ಗಳಲ್ಲಿ 9ಕ್ಕೆ 223 (ಬಾಬರ್ ಆಜಂ 47, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ 60; ಜೇಮ್ಸ್ ಆ್ಯಂಡರ್ಸನ್ 48ಕ್ಕೆ3, ಸ್ಟುವರ್ಟ್ ಬ್ರಾಡ್ 56ಕ್ಕೆ3, ಸ್ಯಾಮ್ ಕರನ್ 44ಕ್ಕೆ1, ಕ್ರಿಸ್ ವೋಕ್ಸ್ 55ಕ್ಕೆ1). ಎರಡನೇ ದಿನದಾಟದ ಮುಕ್ತಾಯಕ್ಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು