ಗುರುವಾರ , ಮಾರ್ಚ್ 30, 2023
22 °C
ನಮೀಬಿಯಾ ಎದುರಾಳಿ: ಸತತ ಗೆಲುವಿನ ಹುಮ್ಮಸ್ಸಿನಲ್ಲಿರುವ ‌ಬಾಬರ್ ಬಳಗ

T20 World Cup: ಸೆಮಿಫೈನಲ್ ಮೇಲೆ ಪಾಕಿಸ್ತಾನ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಭಾರತ ಮತ್ತು ನ್ಯೂಜಿಲೆಂಡ್ ಎದುರು ಪಾರಮ್ಯ ಸಾಧಿಸಿದ್ದು ಸೇರಿದಂತೆ ಗೆಲುವಿನ ‘ಹ್ಯಾಟ್ರಿಕ್’ ಸಾಧನೆ ಮಾಡಿರುವ ಪಾಕಿಸ್ತಾನ ತಂಡ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ನಮೀಬಿಯಾವನ್ನು ಎದುರಿಸಲಿದೆ. 

ಬಲಿಷ್ಠ ತಂಡಗಳಿಗೆ ಪ್ರಬಲ ಪೈಪೋಟಿ ನೀಡುತ್ತ ಬಂದಿರುವ ನಮೀಬಿಯಾ ತಂಡವು ಪಾಕಿಸ್ತಾನಕ್ಕೆ ಉತ್ತಮ ಪೈಪೋಟಿ ನೀಡುವ ನಿರೀಕ್ಷೆ ಇದೆ. ಆದರೆ ಪಾಕಿಸ್ತಾನ ಈ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶವನ್ನು ಖಾತರಿಪಡಿಸಿಕೊಳ್ಳಲು ಪ್ರಯತ್ನಿಸಲಿದೆ. 

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಭದ್ರತೆಯ ಕಾರಣ ಹೇಳಿ ಪಾಕಿಸ್ತಾನದಿಂದ ವಾಪಸ್ ಹೋಗಿದ್ದವು. ವಿಶ್ವಕಪ್‌ನಲ್ಲಿ ಪಾಕಿಸ್ತಾನ ಆರಂಭದಿಂದಲೇ ಅಮೋಘ ಆಟ ಆಡುತ್ತಿದೆ. ಸಾಂಪ್ರದಾಯಿಕ ಎದುರಾಳಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನ ನಂತರ ನ್ಯೂಜಿಲೆಂಡ್ ಮತ್ತು ಅಫ್ಗಾನಿಸ್ತಾನ ವಿರುದ್ಧವೂ ಕ್ರಮವಾಗಿ ಐದು ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

ಆರಂಭಿಕ ಜೋಡಿ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಮಧ್ಯಮ ಕ್ರಮಾಂಕದ ಆಸಿಫ್‌ ಅಲಿ ಸಿಕ್ಸರ್‌ಗಳ ಮೂಲಕ ಮಿಂಚಿದ್ದಾರೆ. ಆದರೆ ಅನುಭವಿ ಬ್ಯಾಟರ್ ಮೊಹಮ್ಮದ್ ಹಫೀಜ್ ಮತ್ತು ಶೊಯೆಬ್ ಮಲಿಕ್ ಅವರು ರನ್ ಗಳಿಸಲು ವಿಫಲರಾಗುತ್ತಿರುವುದು ತಂಡದಲ್ಲಿ ಆತಂಕ ಮೂಡಿಸಿದೆ.

ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ಯಾವುದೇ ತಂಡದ ಬ್ಯಾಟರ್‌ಗಳನ್ನು ಕೂಡ ಕಟ್ಟಿಹಾಕುವಷ್ಟು ಬಲಿಷ್ಠವಾಗಿದೆ. ನಮೀಬಿಯಾ ಬ್ಯಾಟರ್‌ಗಳ ಮೇಲೆಯೂ ಆಧಿಪತ್ಯ ಸ್ಥಾಪಿಸಲು ಬೌಲರ್‌ಗಳು ಪ್ರಯತ್ನಿಸಲಿದ್ದಾರೆ. ಹಸನ್ ಅಲಿ ಮಾತ್ರ ಸ್ವಲ್ಪ ವೈಫಲ್ಯ ಅನುವಭಿಸುತ್ತಿದ್ದಾರೆ.

ಅಫ್ಗಾನಿಸ್ತಾನ ವಿರುದ್ಧ ನೀರಸ ಆಟವಾಡಿರುವ ನಮೀಬಿಯಾ ಪುಟಿದೇಳುವ ಹುಮ್ಮಸ್ಸಿನಲ್ಲಿದೆ. ತಂಡದ ಆರು ಬ್ಯಾಟರ್‌ಗಳು ವೇಗಿಗಳಿಗೆ ಬಲಿಯಾಗಿದ್ದವು. ಹೀಗಾಗಿ ಪಾಕಿಸ್ತಾನದ ವೇಗದ ದಾಳಿಯನ್ನು ತಂಡ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು