ಬುಧವಾರ, ಜನವರಿ 19, 2022
18 °C
ಶಹೀನ್ ಶಾ, ಶಾದಬ್‌ ಖಾನ್‌ಗೆ ತಲಾ ಎರಡು ವಿಕೆಟ್‌; ಅಜೇಯ ಅರ್ಧಶತಕ ಗಳಿಸಿದ ಫಖ್ರ್ ಜಮಾನ್

ಬಾಂಗ್ಲಾ ಮಣಿಸಿದ ಪಾಕ್‌ಗೆ ಟ್ವೆಂಟಿ–20 ಸರಣಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಬಾಂಗ್ಲಾದೇಶ ಎದುರಿನ ಎರಡನೇ ಪಂದ್ಯದಲ್ಲೂ ಪಾಕಿಸ್ತಾನ ಸಂಪೂರ್ಣ ಆಧಿಪತ್ಯ ಸ್ಥಾಪಿಸಿತು. ಆತಿಥೇಯರನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ತಂಡ 2–0 ಮುನ್ನಡೆಯೊಂದಿಗೆ ಟ್ವೆಂಟಿ–20 ಸರಣಿಯನ್ನು ತನ್ನದಾಗಿಸಿಕೊಂಡಿತು. 

ಮೀರ್‌ಪುರದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 109 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡ ಇನ್ನೂ 11 ಎಸೆತ ಬಾಕಿ ಇರುವಾಗ ಗೆಲುವಿನ ನಗೆ ಸೂಸಿತು.

ಮೂರನೇ ಓವರ್‌ನಲ್ಲೇ ತಂಡ ನಾಯಕ ಬಾಬರ್ ಆಜಂ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಮೊಹಮ್ಮದ್ ರಿಜ್ವಾನ್ ಅವರ ಜೊತೆಗೂಡಿದ ಫಖ್ರ್‌ ಜಮಾನ್ (57; 51 ಎಸೆತ, 2 ಬೌಂಡರಿ, 3 ಸಿಕ್ಸ್‌) 85 ರನ್‌ಗಳ ಜೊತೆಯಾಟದ ಮೂಲಕ ಆಸರೆಯಾದರು. ಗೆಲುವಿಗೆ 12 ರನ್ ಬೇಕಾಗಿದ್ದಾಗ ರಿಜ್ವಾನ್ (39; 45 ಎ, 4 ಬೌಂ) ಔಟಾದರು. ಆದರೆ ಫಖ್ರ್‌ ಜಮಾನ್ ದಿಟ್ಟ ಆಟವಾಡಿ ಗೆಲುವಿಗೆ ಕಾರಣರಾದರು. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಐದು ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ನಂತರ ನಜ್ಮುಲ್ ಹೊಸೇನ್ (40; 34 ಎ, 5 ಬೌಂ) ಏಕಾಂಗಿ ಹೋರಾಟ ನಡೆಸಿದರು. ಆದರೆ ಇನ್ನೊಂದು ತುದಿಯಲ್ಲಿ ಅವರಿಗೆ ಸಮರ್ಪಕ ಸಹಕಾರ ಸಿಗಲಿಲ್ಲ. 

ವೇಗಿಗಳಾದ ಶಹೀನ್ ಶಾ ಅಫ್ರಿದಿ ಮತ್ತು ಲೆಗ್ ಬ್ರೇಕ್ ಬೌಲರ್ ಶಾದಬ್ ಖಾನ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ಬಾಂಗ್ಲಾದೇಶ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತ್ತು. ಮೂರನೇ ಮತ್ತು ಕೊನೆಯ ಪಂದ್ಯ ಸೋಮವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7ಕ್ಕೆ 108 (ನಜ್ಮುಲ್ ಹೊಸೇನ್ 40, ಅಫೀಫ್ ಹೊಸೇನ್ 20, ಮೊಹಮ್ಮದುಲ್ಲಾ ರಿಯಾದ್‌ 12, ನೂರುಲ್ ಹಸನ್ 11; ಶಹೀನ್ ಶಾ ಅಫ್ರಿದಿ 15ಕ್ಕೆ2, ಮೊಹಮ್ಮದ್ ವಸೀಂ 9ಕ್ಕೆ1 ಹ್ಯಾರಿಸ್ ರವೂಫ್‌ 13ಕ್ಕೆ1, ಶಾದಬ್‌ ಖಾನ್ 22ಕ್ಕೆ2, ಮೊಹಮ್ಮದ್ ನವಾಜ್‌ 25ಕ್ಕೆ1); ಪಾಕಿಸ್ತಾನ: 18.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 109 (ಮೊಹಮ್ಮದ್ ರಿಯಾಜ್ 39, ಫಖ್ರ್‌ ಜಮಾನ್ ಔಟಾಗದೆ 57; ಮುಸ್ತಫಿಜುರ್ ರಹಮಾನ್ 12ಕ್ಕೆ1, ಅಮೀನುಲ್ ಇಸ್ಲಾಂ 30ಕ್ಕೆ1). ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್‌ಗಳ ಜಯ.

ಹಸನ್‌ಗೆ ವಾಗ್ದಂಡನೆ; ಬಾಂಗ್ಲಾಗೆ ದಂಡ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ನಿಯಮ ಉಲ್ಲಂಘಿಸಿದ ಆರೋಪದಡಿ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಅವರನ್ನು ವಾಗ್ದಂಡನೆಗೆ ಒಳಪಡಿಸಲಾಗಿದೆ. ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಬಾಂಗ್ಲಾದೇಶಕ್ಕೆ ದಂಡ ವಿಧಿಸಲಾಗಿದೆ.

ಮೊದಲ ಪಂದ್ಯದ 17ನೇ ಓವರ್‌ನಲ್ಲಿ ಬಾಂಗ್ಲಾದೇಶದ ಬ್ಯಾಟರ್ ನೂರುಲ್ ಹಸನ್ ಅವರ ವಿಕೆಟ್ ಗಳಿಸಿದ ಹಸನ್ ಅಲಿ ಗೇಲಿ ಮಾಡುವ ರೀತಿಯಲ್ಲಿ ಸಂಭ್ರಮಿಸಿದ್ದರು. ಇದು ಐಸಿಸಿ ನೀತಿಯ 2.5ನೇ  ನಿಯಮದ ಉಲ್ಲಂಘನೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಾಗ್ದಂಡೆಗೆ ಒಳಪಡಿಸಲಾಗಿದೆ.

ಬಾಂಗ್ಲಾದೇಶ ಆಟಗಾರರ ಪಂದ್ಯದ ಸಂಭಾವನೆಯ 20 ಶೇಕಡಾ ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು