ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cricket World Cup: ನವೆಂಬರ್ 12ರಂದು ಕಾಳಿ ಪೂಜೆ ದಿನವೇ ಪಾಕ್–ಇಂಗ್ಲೆಂಡ್ ಪಂದ್ಯ

ಮರುನಿಗದಿಗೆ ಮನವಿ
Published 5 ಆಗಸ್ಟ್ 2023, 22:30 IST
Last Updated 5 ಆಗಸ್ಟ್ 2023, 22:30 IST
ಅಕ್ಷರ ಗಾತ್ರ

ಕೋಲ್ಕತ್ತ: ನವೆಂಬರ್‌ 12ರಂದು ಇಲ್ಲಿ ಪಾಕಿಸ್ತಾನ– ಇಂಗ್ಲೆಂಡ್ ಏಕದಿನ ವಿಶ್ವಕಪ್ ಕ್ರಿಕೆಟ್‌ ಪಂದ್ಯ ನಿಗದಿಯಾಗಿದೆ. ಅಂದೇ ನಗರದಲ್ಲೆಡೆ ಕಾಳಿ ಪೂಜೆಯೂ ನಡೆಯಲಿದ್ದು ಭದ್ರತಾ ಸಮಸ್ಯೆ ಎದುರಾಗುವ ಸಂಭವದ ಕಾರಣ ಈ ಪಂದ್ಯ ಮುಂದೂಡುವಂತೆ ಬೆಂಗಾಲ ಕ್ರಿಕೆಟ್‌ ಸಂಸ್ಥೆ ಶನಿವಾರ ಐಸಿಸಿ ತಂಡಕ್ಕೆ ಮನವಿ ಮಾಡಿದೆ.

ಬಿಸಿಸಿಐ ಮತ್ತು ಐಸಿಸಿ ಈಗ ಮತ್ತೊಂದು ದಿನಾಂಕ ಬದಲಾಯಿಸಿದರೆ, ಪಾಕಿಸ್ತಾನ ಒಳಗೊಳ್ಳುವ  ಮೂರನೇ ಪಂದ್ಯದ ದಿನಾಂಕ ಬದಲಾದಂತೆ ಆಗಲಿದೆ. ಇತ್ತೀಚೆಗಷ್ಟೇ ಭಾರತ– ಪಾಕಿಸ್ತಾನ (ಅಹಮದಾಬಾದ್) ಪಂದ್ಯವನ್ನು  ಅಕ್ಟೋಬರ್ 15ರ ಬದಲು 14ಕ್ಕೆ ಮರುನಿಗದಿ ಮಾಡಲಾಗಿತ್ತು. ಹಾಗೆಯೇ ಶ್ರೀಲಂಕಾ– ಪಾಕಿಸ್ತಾನ ಪಂದ್ಯವನ್ನು ಅಕ್ಟೋಬರ್‌ 12ರ ಬದಲು ಈಗ ಅ. 10ರಂದು ಆಡಿಸಲು ನಿರ್ಧರಿಸಲಾಗಿತ್ತು.

ನವರಾತ್ರಿಯ ಮೊದಲ ದಿನವಾಗಿರುವ ಕಾರಣ ಅಕ್ಟೋಬರ್ 15ರಂದು ಭಾರತ–ಪಾಕ್ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದರು.

ಕಾಳಿ ಪೂಜೆ ಬಂಗಾಳದಲ್ಲಿ ಎರಡನೇ ಅತಿ ದೊಡ್ಡ ಹಬ್ಬವಾಗಿದೆ. ಸಾವಿರಾರು ಸ್ಥಳೀಯ ಸಂಘ–ಸಂಸ್ಥೆಗಳು ಕಾಳಿ ಪೂಜೆ ನಡೆಸುತ್ತವೆ.

ಪಂದ್ಯ ಮುಂದೂಡುವ ಸಂಬಂಧ ಅಧಿಕೃತ ಮನವಿ ಕಳಿಸಿರುವುದನ್ನು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ನಿರಾಕರಿಸಿದರೂ, ಕೋಲ್ಕತ್ತ ಪೊಲೀಸರು ಈ ವಿಷಯದ ಬಗ್ಗೆ ಈಗಾಗಲೇ ಮನವಿ ಸಲ್ಲಿಸಿರುವ ಮಾಹಿತಿ ಸಿಎಬಿಯ ಪದಾಧಿಕಾರಿಗಳಿಗೆ ಇದೆ.

‘ಕೋಲ್ಕತ್ತ ಪೊಲೀಸರು ದೀಪಾವಳಿ ದಿನ ಭದ್ರತೆ ಕಲ್ಪಿಸುವ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಪಂದ್ಯ ಮರುನಿಗದಿ ಮಾಡುವಂತೆ ಐಸಿಸಿ ಮತ್ತು ಬಿಸಿಸಿಐಗೆ ಈ ಬಗ್ಗೆ ನಾವು ಮಾಹಿತಿ ನೀಡಿದ್ದೇವೆ’ ಎಂದು ಸಿಎಬಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು 17 ಸದಸ್ಯರ ಐಸಿಸಿ ಮತ್ತು ಬಿಸಿಸಿಐ ಪರಿಶೀಲನಾ ಸಮಿತಿಯ ಭಾಗವಾಗಿದ್ದಾರೆ. ಐಸಿಸಿ ಮತ್ತೊಮ್ಮೆ ದಿನಾಂಕ ಪರಿಷ್ಕರಿಸಲು ಒಪ್ಪುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT