ಪಂತ್ ಪರಾಕ್ರಮಕ್ಕೆ ಮಣಿದ ಮುಂಬೈ

ಗುರುವಾರ , ಏಪ್ರಿಲ್ 25, 2019
33 °C
ಯುವಿ ಅರ್ಧಶತಕ ವ್ಯರ್ಥ; ಶಿಖರ್–ಕಾಲಿನ್ ಉತ್ತಮ ಜೊತೆಯಾಟ; ಡೆಲ್ಲಿಗೆ ಜಯ

ಪಂತ್ ಪರಾಕ್ರಮಕ್ಕೆ ಮಣಿದ ಮುಂಬೈ

Published:
Updated:
Prajavani

ಮುಂಬೈ: ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಪರಾಕ್ರಮಕ್ಕೆ ಬೆಚ್ಚಿದ ಮುಂಬೈ ಇಂಡಿಯನ್ಸ್ ತಂಡ ಭಾನುವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋಲಿಗೆ ಶರಣಾಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಪಂತ್‌ (78; 27 ಎಸೆತ, 7 ಸಿಕ್ಸರ್‌, 7 ಬೌಂಡರಿ) ಗಳಿಸಿದ ಅರ್ಧಶತಕ ಮತ್ತು ಶಿಖರ್ ಧವನ್‌ –ಕಾಲಿನ್‌ ಇಂಗ್ರಾಮ್ ಅವರ ಅಮೋಘ ಜೊತೆಯಾಟದಿಂದಾಗಿ ಕ್ಯಾಪಿಟಲ್ಸ್‌ ಭಾರಿ ಮೊತ್ತ ಕಲೆ ಹಾಕಿತು.

ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ (53; 35 ಎಸೆತ, 3 ಸಿಕ್ಸರ್‌, 5 ಬೌಂಡರಿ) ಏಕಾಂಗಿ ಹೋರಾಟ ನಡೆಸಿದರು. ನಾಯಕ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡರು. ಆರನೇ ವಿಕೆಟ್‌ಗೆ ಯುವರಾಜ್ ಸಿಂಗ್ ಮತ್ತು ಕೃಣಾಲ್ ಪಾಂಡ್ಯ 39 ರನ್‌ ಸೇರಿಸಿದ್ದು ಬಿಟ್ಟರೆ ಉತ್ತಮ ಜೊತೆಯಾಟ ಮೂಡಿಬರಲಿಲ್ಲ.

ರಿಷಭ್ ಪಂತ್‌ ಸ್ಫೋಟಕ ಬ್ಯಾಟಿಂಗ್: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಬಳಗ 29 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಫೋಟಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಕೇವಲ ಏಳು ರನ್ ಗಳಿಸಿ ಮರಳಿದಾಗ ತಂಡದ ಮೊತ್ತ 10 ರನ್ ಆಗಿತ್ತು. ಶ್ರೇಯಸ್ ಅಯ್ಯರ್ ಕೂಡ ಬೇಗನೇ ಡಗ್ಔಟ್ ಸೇರಿದರು.

ಈ ಸಂದರ್ಭದಲ್ಲಿ ಜೊತೆಗೂಡಿದ ಧವನ್ (43; 36 ಎಸೆತ, 1 ಸಿಕ್ಸರ್‌, 4 ಬೌಂಡರಿ) ಮತ್ತು ಕಾಲಿನ್‌ ಇಂಗ್ರಾಮ್‌ (47; 32 ಎಸೆತ, 1 ಸಿಕ್ಸರ್‌, 7 ಬೌಂಡರಿ) 83 ರನ್ ಸೇರಿಸಿದರು. 13 ರನ್‌ಗಳ ಅಂತರದಲ್ಲಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾದರು.

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಭ್ ಪಂತ್‌ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಮುಂಬೈ ಕ್ರಿಕೆಟ್‌ ಪ್ರಿಯರನ್ನು ರೋಮಾಂಚನಗೊಳಿಸಿದರು. 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಂತರವೂ ಗರ್ಜಿಸಿದ ಅವರು ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !