ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | DC Vs GT: ರಿಷಭ್ ಪಂತ್ ನಾಯಕತ್ವಕ್ಕೆ ಸವಾಲು

ಡೆಲ್ಲಿ ಕ್ಯಾಪಿಟಲ್ಸ್‌–ಗುಜರಾತ್ ಟೈಟನ್ಸ್ ತಂಡಗಳ ಮುಖಾಮುಖಿ ಇಂದು
Published 24 ಏಪ್ರಿಲ್ 2024, 1:16 IST
Last Updated 24 ಏಪ್ರಿಲ್ 2024, 1:16 IST
ಅಕ್ಷರ ಗಾತ್ರ

ನವದೆಹಲಿ: ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಎದುರು ಕಣಕ್ಕಿಳಿಯಲಿದೆ. 

ಟೂರ್ನಿಯಲ್ಲಿ ಇದು ಎರಡನೇ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಒಂದು ವಾರದ ಹಿಂದೆ ಡೆಲ್ಲಿ ತಂಡವು ಗುಜರಾತ್ ಎದುರು ಜಯಿಸಿತ್ತು. 

ಅದರ ನಂತರದ ಪಂದ್ಯದಲ್ಲಿ  ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೋತಿತ್ತು. ಡೆಲ್ಲಿ ತಂಡವು ಎಂಟು ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಮಾತ್ರ ಜಯಿಸಿದೆ. ಐದರಲ್ಲಿ ಪರಾಭವಗೊಂಡಿದೆ. ಆದ್ದರಿಂದ ಈ ಪಂದ್ಯದಲ್ಲಿ ಗೆಲುವು ಮುಖ್ಯವಾಗಿದೆ. ಅಲ್ಲದೇ ರಿಷಭ್ ನಾಯಕತ್ವಕ್ಕೂ ಇದು ಸವಾಲಿನದ್ದಾಗಿದೆ.

ದೀರ್ಘ ಕಾಲದ ನಂತರ ಕಣಕ್ಕಿಳಿದಿರುವ ರಿಷಭ್ ಈ ಐಪಿಎಲ್ ಟೂರ್ನಿಯಲ್ಲಿ  ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್‌ನಲ್ಲಿ ಗಮನ ಸೆಳೆಯುವಂತಹ ಆಟವಾಡಿದ್ದಾರೆ. ಆದರೆ ನಾಯಕತ್ವದಲ್ಲಿ ಕೆಲವು ಸುಧಾರಣಗಳ ಅಗತ್ಯವಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ತಂಡವು ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಇಲ್ಲಿಂದ ಮುಂದಿನ ಬಹುತೇಕ ಎಲ್ಲ ಪಂದ್ಯಗ‌ಳಲ್ಲಿ ಜಯಿಸುವ ಒತ್ತಡ ಇದೆ. ಇದನ್ನು ನಿಭಾಯಿಸುವ ಸವಾಲು ರಿಷಭ್ ಮುಂದಿದೆ. 

ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ದುಬಾರಿಯಾದವು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ  ಮಾಡಿಕೊಂಡರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಸ್ಸಂಜೆಯ ಇಬ್ಬನಿಯ ಪರಿಣಾಮದ ಬಗ್ಗೆ  ಅವರು ಮಾಡಿದ ಅಂದಾಜು ಕೈಕೊಟ್ಟಿತು. 

ಇನಿಂಗ್ಸ್‌ನ ಎರಡನೇ ಓವರ್ ಹಾಕಲು ಲಲಿತ್ ಯಾದವ್ ಅವರಿಗೆ ಚೆಂಡು ನೀಡಿದ್ದು ತಪ್ಪಾಯಿತು. ಪವರ್‌ಪ್ಲೇ ಅವಧಿಯಲ್ಲಿಯೇ ಸನ್‌ರೈಸರ್ಸ್‌ ಆರಂಭಿಕ ಜೋಡಿಯು 125 ರನ್‌ ಗಳಿಸಿಬಿಟ್ಟಿತು. ಕುಲದೀಪ್‌ ಯಾದವ್ ಮತ್ತು ಅಕ್ಷರ್ ಪಟೇಲ್ ಅವರು ವಿಕೆಟ್‌ ಪಡೆದು, ರನ್‌ಗಳಿಗೂ ತಡೆಯೊಡ್ಡಿದರು. ಆದರೂ ಡೆಲ್ಲಿ ತಂಡವು 267 ರನ್‌ಗಳ ಗುರಿ ಬೆನ್ನಟ್ಟಬೇಕಾಯಿತು.

ಈ ಹಾದಿಯಲ್ಲಿ ಡೇವಿಡ್ ವಾರ್ನರ್, ಪೃಥ್ವಿ ಶಾ ನೆಲಕಚ್ಚಿದರು. ಯುವ ಆಟಗಾರ ಜೇಕ್ ಫ್ರೆಸರ್ ಮೆಕ್‌ಗುರ್ಕ್, 18 ಎಸೆತಗಳಲ್ಲಿ 65 ರನ್‌ ಹೊಡೆದು ಭರವಸೆ ಮೂಡಿಸಿದ್ದರು. ಅಭಿಷೇಕ್ ಪೊರೆಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಪಂತ್ ಬ್ಯಾಟಿಂಗ್ ತುಸು ನಿಧಾನಗತಿಯಲ್ಲಿತ್ತು.  ಈ ಎಲ್ಲ ಅಂಶಗಳನ್ನು ಸುಧಾರಿಸಿಕೊಂಡು ಕಣಕ್ಕಿಳಿಯುವ ಸವಾಲು ಡೆಲ್ಲಿ ಮುಂದಿದೆ. 

ಗುಜರಾತ್ ತಂಡವು ತನ್ನ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಗೆದ್ದಿತ್ತು.  ಇದರೊಂದಿಗೆ ಒಟ್ಟು ನಾಲ್ಕು ಸೋಲು ಮತ್ತು ನಾಲ್ಕು ಜಯ ಸಾಧಿಸಿದೆ. ತಂಡದ ಬೌಲರ್‌ಗಳಾದ ಸಾಯಿ ಕಿಶೋರ್, ನೂರ್ ಅಹಮದ್ ಮತ್ತು ಮೋಹಿತ್ ಶರ್ಮಾ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಬ್ಯಾಟಿಂಗ್‌ನಲ್ಲಿ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಗಿಲ್ ಮತ್ತು ಡೇವಿಡ್ ಮಿಲ್ಲರ್ ಅವರು ತಮ್ಮ ನೈಜ ಸಾಮರ್ಥ್ಯದಿಂದ ಬ್ಯಾಟಿಂಗ್ ಮಾಡಿದರೆ ಉತ್ತಮ ಮೊತ್ತ ಪೇರಿಸಬಹುದು. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್.

ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಆಶಿಶ್ ನೆಹ್ರಾ   –ಪಿಟಿಐ ಚಿತ್ರ
ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಆಶಿಶ್ ನೆಹ್ರಾ   –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT