ಗುರುವಾರ , ಏಪ್ರಿಲ್ 9, 2020
19 °C
ಸಚಿನ್ ವಿದಾಯ ಟೆಸ್ಟ್‌ನ ಪಂದ್ಯಶ್ರೇಷ್ಠ

ಪ್ರಥಮ ದರ್ಜೆ ಕ್ರಿಕೆಟ್‌ಗೆ ಪ್ರಗ್ಯಾನ್‌ ಓಜಾ ವಿದಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಏಳು ವರ್ಷಗಳ ಹಿಂದೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ವಿದಾಯದ ಟೆಸ್ಟ್‌ ಪಂದ್ಯವನ್ನು ಅಭಿಮಾನಿಗಳು ಮರೆಯಲು ಸಾಧ್ಯವೇ?

ವೆಸ್ಟ್ ಇಂಡೀಸ್ ಎದುರಿನ ಆ ಪಂದ್ಯದಲ್ಲಿ ಸಚಿನ್‌ ಅವರಿಗೆ ಗೆಲುವಿನ ವಿದಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ. ಎರಡೂ ಇನಿಂಗ್ಸ್‌ಗಳಲ್ಲಿ ಪಂಚಗುಚ್ಛದ ಸಾಧನೆ ಮಾಡಿ, ಒಟ್ಟು ಹತ್ತು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು. ಇದೀಗ ಪ್ರಗ್ಯಾನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

33 ವರ್ಷದ ಪ್ರಗ್ಯಾನ್ ಮೂಲತಃ ಒಡಿಶಾದವರು. ಆದರೆ, ಅವರು ಹೆಚ್ಚು ಅವಧಿಯವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದು ಹೈದರಾಬಾದ್ ತಂಡದಲ್ಲಿ. 2009ರಿಂದ 2013ರವರೆಗೆ ಭಾರತ ತಂಡದಲ್ಲಿ ಆಡಿದ್ದ ಅವರು 24 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 113 ವಿಕೆಟ್‌ಗಳು ಅವರ ಖಾತೆಯಲ್ಲಿವೆ.

‘ಜೀವನದ ಮುಂದಿನ ಹಂತಕ್ಕೆ ಸಾಗುವ ಸಮಯ ಇದು. ಅಂತರರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಈ ಪತ್ರವನ್ನು ಬರೆಯುತ್ತಿರುವೆ. ಭಾರತದ ಕ್ರಿಕೆಟ್‌ ಆಟಗಾರನಾಗಿ ಗುರುತಿಸಿಕೊಂಡಿರುವುದು ನನ್ನ ಅದೃಷ್ಟ. ಭಾರತ ತಂಡವನ್ನು ಪ್ರತಿನಿಧಿಸುವ ಬಾಲ್ಯದ ಕನಸು ನನಸಾಗಿದೆ. ನನ್ನ ಅನುಭವವನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ತಂಡದಲ್ಲಿ ನಾನು ಆಡುವಾಗ ಜೊತೆಗಿದ್ದ ಆಟಗಾರರ ಪ್ರೀತಿ, ಸ್ನೇಹವು ಅಮೂಲ್ಯವಾದದ್ದು. ಪ್ರತಿಯೊಬ್ಬರೂ ಬೆಳವಣಿಗೆಗೆ ಹುರಿದುಂಬಿಸಿದವರು’ ಎಂದು ಟ್ವೀಟ್ ಮಾಡಿದ್ದಾರೆ.

‘ಸಚಿನ್ ತೆಂಡೂಲ್ಕರ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದಿದ್ದು ಮರೆಯಲಾಗದ ಕ್ಷಣ. ವಿವಿಎಸ್ ಲಕ್ಷ್ಮಣ್  ಹಿರಿಯಣ್ಣನಂತೆ  ಮಾರ್ಗದರ್ಶನ ನೀಡಿದವರು. ವೆಂಕಟಪತಿ ರಾಜು ಅವರನ್ನು ಸದಾ ಅನುಕರಿಸಿದ್ದೇನೆ. ಮಹೇಂದ್ರಸಿಂಗ್ ಧೋನಿ ಅವರು ನೀಡಿದ ಅವಕಾಶಗಳು ಮತ್ತು ಹರಭಜನ್ ಸಿಂಗ್ ಅವರ ನಿರಂತರ ಮಾರ್ಗದರ್ಶನದ ಪರಿಣಾಮ ನಾನು ಒಂದಿಷ್ಟು ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಪ್ರಗ್ಯಾನ್ ಕೃತಜ್ಞತೆ ಸಲ್ಲಿಸಿದ್ದಾರೆ.

ಓಜಾ 2005ರಿಂದ 2018ರವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಬಿಹಾರ ತಂಡದ ನಾಯಕತ್ವ ಕೂಡ ವಹಿಸಿದ್ದರು.

ಐಪಿಎಲ್ ಟೂರ್ನಿಯಲ್ಲಿ ಅವರು ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡ ಪ್ರತಿನಿಧಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು