ಮಂಗಳವಾರ, ಆಗಸ್ಟ್ 3, 2021
21 °C

ಪ್ರತಿಭಾನ್ವಿತ ಪೃಥ್ವಿ ಶಾ ಶಿಸ್ತು ರೂಢಿಸಿಕೊಳ್ಳಲಿ: ವಾಸೀಂ ಜಾಫರ್ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ ಅವರಂತೆಯೇ ಮುಂಬೈನ ಪೃಥ್ವಿಶಾ ಅವರೂ ಪ್ರತಿಭಾನ್ವಿತರಾಗಿದ್ದಾರೆ. ಆದರೆ ಪೃಥ್ವಿಯವರು ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಕ್ರಿಕೆಟಿಗ ವಾಸೀಂ ಜಾಫರ್‌ ಸಲಹೆ ನೀಡಿದ್ದಾರೆ.

ಹೋದ ವರ್ಷ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಪೃಥ್ವಿ ಶಾ, ನಂತರ ಉದ್ದೀಪನ ಮದ್ದು ಸೇವನೆಯ ಆರೋಪದಲ್ಲಿ ಎಂಟು ತಿಂಗಳುಗಳ ಅಮಾನತು ಶಿಕ್ಷೆ ಅನುಭವಿಸಿದ್ದರು. ಮರಳಿದ ನಂತರ ಈ ವರ್ಷದಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ್ದರು.

’ ಆಟದಿಂದಾಚೆಯ ವೈಯಕ್ತಿಕ ಜೀವನಶೈಲಿಯಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆಟದಂಗಳದಲ್ಲಿ ಶಿಸ್ತು ಪಾಲನೆ ಅನಿವಾರ್ಯವೇ ಇರುತ್ತದೆ. ಆದರೆ ವೈಯಕ್ತಿಕ ಜೀವನದಲ್ಲಿ ನಿರ್ವಹಿಸಿಕೊಳ್ಳುವುದು ಕಠಿಣ ಸವಾಲು. ಅದರಲ್ಲಿ ಗೆಲ್ಲಬೇಕು. ಆಗ ಯಶಸ್ಸು ಸಾಧ್ಯ‘ ಎಂದು ಜಾಫರ್ ಅವರು, ಹಿರಿಯ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರೊಂದಿಗೆ ಯೂಟ್ಯೂಬ್‌ನಲ್ಲಿ ನಡೆಸಿದ ಸಂವಾದದಲ್ಲಿ ಹೇಳಿದರು.

’ಪೃಥ್ವಿ ಅವರೊಬ್ಬ ವಿಶೇಷವಾದ ಆಟಗಾರ. ಆಗಾಧ ಪ್ರತಿಭಾವಂತ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವರು ಪ್ರಯೋಗಿಸುವ ಹೊಡೆತಗಳು, ಬ್ಯಾಟಿಂಗ್‌ನ ಪರಿಪಕ್ವತೆಯನ್ನು ತೋರಿಸುತ್ತವೆ. ಸೆಹ್ವಾಗ್ ಅವರಂತೆಯೇ ಸಮರ್ಥವಾಗಿ ಆಡಬಲ್ಲರು. ಬೌಲರ್‌ಗಳ ದಾಳಿಯನ್ನು ನುಚ್ಚುನೂರು ಮಾಡುವ ಸಾಮರ್ಥ್ಯ ಪೃಥ್ವಿಗೆ ಇದೆ‘ ಎಂದು ಮುಂಬೈನ ತಂಡದ ಮಾಜಿ ನಾಯಕ ಜಾಫರ್ ಅಭಿಪ್ರಾಯಪಟ್ಟರು. 

’ಪೃಥ್ವಿ ತಮ್ಮ ಆಟದ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಅದಕ್ಕಾಗಿ ಅವರು ಒಂದೆರಡು ಹೆಜ್ಜೆ ಹಿಂದೆ ಸರಿದು ನಿಂತು ಯೋಚನೆ ಮಾಡಬೇಕು. ಶಾರ್ಟ್‌ಪಿಚ್ ಎಸೆತಗಳ ಬಲೆಯಲ್ಲಿ ಅವರು ಈ ಹಿಂದೆ ಕೆಲವು ಬಾರಿ ವಿಕೆಟ್ ಚೆಲ್ಲಿದ್ದಾರೆ. ಅಂತಹ ದೌರ್ಬಲ್ಯಗಳನ್ನು ಮೀರಿ ನಿಲ್ಲುವತ್ತ ಚಿತ್ತ ಹರಿಸಬೇಕು‘ ಎಂದು ಹೇಳಿದ್ದಾರೆ.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು