ಶುಕ್ರವಾರ, ಅಕ್ಟೋಬರ್ 23, 2020
25 °C
ಮಟನ್‌ ಪಲಾವ್‌ ಸವಿದಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ

Pv Web Exclusive/ ಮೈಸೂರಿಗೆ ಮನಸೋತಿದ್ದ ಡೀನ್ ಜೋನ್ಸ್

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

Prajavani

ಇತ್ತೀಚೆಗೆ ನಿಧನರಾದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಡೀನ್‌ ಜೋನ್ಸ್‌ ಅವರು ಸಾಂಸ್ಕೃತಿಕ ನಗರಿ ಮೈಸೂರಿನ ಜತೆ ವಿಶೇಷ ನಂಟು ಹೊಂದಿದ್ದರು.

ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಸಮಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಮೈಸೂರಿಗೆ ಭೇಟಿ ಕೊಟ್ಟಿದ್ದರು. 2017 ರಿಂದ ಸತತ ಮೂರು ವರ್ಷ ಇಲ್ಲಿಗೆ ಬಂದಿದ್ದರು. ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯಗಳ ವೀಕ್ಷಕ ವಿವರಣೆ ನೀಡಿದ್ದರು.

2017 ರಲ್ಲಿ ಆಸ್ಟ್ರೇಲಿಯಾದ ಇನ್ನೊಬ್ಬ ಆಟಗಾರ ಬ್ರೆಟ್ ಲೀ ಜತೆ ಬಂದಿದ್ದ ಅವರು ಬಿಡುವಿನ ಸಮಯದಲ್ಲಿ ಮೈಸೂರಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಅವರ ನಗರ ಸಂಚಾರದ ದೃಶ್ಯಗಳನ್ನು ಕೆಪಿಎಲ್‌ ಪಂದ್ಯಗಳ ನೇರಪ್ರಸಾರದ ವೇಳೆ ಸ್ಟಾರ್‌ ಸ್ಪೋರ್ಟ್ಸ್‌ ಚಾನೆಲ್‌ನಲ್ಲಿ ಬಿತ್ತರಿಸಲಾಗಿತ್ತು. ಮೈಸೂರಿನಲ್ಲಿ ತಮಗೆ ಆದ ಮಧುರ ಅನುಭವಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕವೂ ಹಂಚಿಕೊಳ್ಳುತ್ತಿದ್ದರು.

ಮೊದಲ ಬಾರಿ ಮೈಸೂರಿಗೆ ಬಂದಾಗ ಮರುದಿನವೇ ಅವರು ಅಂಬಾ ವಿಲಾಸ ಅರಮನೆಗೆ ತೆರಳಿದ್ದರಲ್ಲದೆ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ಭೇಟಿಯಾಗಿದ್ದರು. ಅರಮನೆ ಆವರಣದಲ್ಲಿದ್ದ ಆನೆಗಳ ಮೈದಡವಿ, ಆನೆ ಸವಾರಿಯ ಮಜಾ ಅನುಭವಿಸಿದ್ದರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣಕ್ಕೆ ಬ್ರೆಟ್‌ ಲೀ ಜತೆ ಜತೆ ತೆರಳಿದ್ದರು. ಅಲ್ಲಿನ ಅಖಾಡದಲ್ಲಿ ಮಟ್ಟಿ ಕುಸ್ತಿಯ ಮಜಾ ಅನುಭವಿಸಿದ್ದರು. ಸ್ಥಳೀಯ ಕುಸ್ತಿಪಟುಗಳಿಂದ ಈ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದರು.

ಮೈಸೂರಿನ ವಿಶೇಷ ಖಾದ್ಯಗಳ ರುಚಿ ಸವಿಯಲು ಮರೆಯಲಿಲ್ಲ. ಇಲ್ಲಿನ ಹಲವು ಹೋಟೆಲ್‌, ಸಿಹಿ ತಿನಿಸುಗಳ ಅಂಗಡಿಗೆ ‘ಲಗ್ಗೆ’ಯಿಟ್ಟಿದ್ದರು. ಹನುಮಂತು ಹೋಟೆಲ್‌ಗೆ ತೆರಳಿ ಮಟನ್‌ ಪಲಾವ್‌ ತಿಂದಿದ್ದರು. ದೇವರಾಜ ಅರಸು ರಸ್ತೆಯಲ್ಲಿರುವ ‘ಬಾಂಬೆ ಟಿಫಾನೀಸ್‌’ಗೆ ಭೇಟಿ ನೀಡಿ ಮೈಸೂರ್‌ ಪಾಕ್‌ ಹಾಗೂ ಇತರ ಸಿಹಿತಿಂಡಿಗಳ ರುಚಿ ಸವಿದಿದ್ದರು. ಮೈಸೂರ್‌ ಪಾಕ್‌ಗೆ ಮನಸೋತಿದ್ದಾಗಿ ಅವರು ಹೇಳಿದ್ದರು.

‘ಕೆಪಿಎಲ್‌ ಟೂರ್ನಿಯ ವೇಳೆ 2–3 ಸಲ ಮೈಸೂರಿಗೆ ಭೇಟಿ ನೀಡಿದ್ದ ಡೀನ್‌ ಜೋನ್ಸ್‌ ಅವರು ಇಲ್ಲಿನ ಸಂಸ್ಕೃತಿಗೆ ಮಾರುಹೋಗಿದ್ದರು’ ಎಂಬುದನ್ನು ಕೆಎಸ್‌ಸಿಎ ಮೈಸೂರು ವಲಯ ನಿಮಂತ್ರಕ ಸುಧಾಕರ್‌ ರೈ ನೆನಪಿಸಿಕೊಂಡರು.

ಜೋನ್ಸ್‌ ಅವರು ಮೈಸೂರಿನಲ್ಲಿದ್ದಷ್ಟು ದಿನ ಇಲ್ಲಿನ ಸಂಸ್ಕೃತಿ, ಸಂಪ್ರದಾಯವನ್ನು ತಿಳಿದುಕೊಳ್ಳಲು ಒಂದಷ್ಟು ಸಮಯ ಮೀಸಲಿಟ್ಟಿದ್ದರು. ಕೆಪಿಎಲ್‌ ಪಂದ್ಯಗಳ ಸಂದರ್ಭ ವಿರಾಮದ ವೇಳೆ ಕಾಮೆಂಟರಿ ಬಾಕ್ಸ್‌ನಿಂದ ಹೊರಬರುತ್ತಿದ್ದ ಅವರು ಪ್ರೇಕ್ಷಕರ ಜತೆ ಫೋಟೊಗೆ ಪೋಸ್‌ ಕೊಡುತ್ತಿದ್ದರು. ಹಸ್ತಾಕ್ಷರ ನೀಡುತ್ತಿದ್ದರು.

ಆಟಗಾರರು, ಅಂಗಳದ ಸಿಬ್ಬಂದಿ ಜತೆ ತಮಾಷೆಯಲ್ಲಿ ತೊಡಗುತ್ತಿದ್ದ ಅವರು ಕೀಟಲೆ ಮೂಲಕವೂ ನಗು ಮೂಡಿಸುತ್ತಿದ್ದರು. ಜೋನ್ಸ್‌ ಇದೀಗ ನಮ್ಮನ್ನು ಅಗಲಿದ್ದಾರೆ. ಆದರೆ ಗಂಗೋತ್ರಿ ಗ್ಲೇಡ್ಸ್‌ನ ಹಸಿರುಹಾಸಿನಲ್ಲಿ ಅವರು ಮೂಡಿಸಿದ್ದ ನೆನಪಿನ ಹೆಜ್ಜೆಗಳು ಕ್ರಿಕೆಟ್‌ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು