ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಮುಂಬೈಕರ್ ರಹಾನೆಯ ಗೆಲುವಿನ ಖದರ್

Last Updated 29 ಡಿಸೆಂಬರ್ 2020, 8:58 IST
ಅಕ್ಷರ ಗಾತ್ರ

ಅಜಿಂಕ್ಯ ಮಧುಕರ್ ರಹಾನೆ ಎಂಬ ಹೆಸರು ದೊಡ್ಡ ಬ್ರ್ಯಾಂಡ್ ಅಲ್ಲ. ಆ ಹೆಸರು ಕೇಳಿದಾಗಲೆಲ್ಲ ಕಂಗಳ ಮುಂದೆ ಅಬ್ಬರ, ನಾಟಕೀಯತೆಗಳು ಸುಳಿಯುವುದಿಲ್ಲ. ಆದರೆ ಶಾಂತ–ಸಮಚಿತ್ತದ ಗಡ್ಡಧಾರಿ ಕ್ರಿಕೆಟಿಗನ ಚಿತ್ರ ಕಣ್ಮುಂದೆ ಬರುತ್ತದೆ.

ತಮ್ಮ ಏಳನೇ ವಯಸ್ಸಿನಲ್ಲಿಯೇ ಸಚಿನ್ ತೆಂಡೂಲ್ಕರ್ ಅವರ ಕಪ್ಪು–ಬಿಳುಪು ಚಿತ್ರದ ಮುಂದೆ ನಿಂತು ತಮ್ಮ ತಂದೆಯೊಂದಿಗೆ, ’ಮುಂದೆ ಇವರ ಹಾಗೆ ಆಗುತ್ತೇನೆ. ಇವರೊಂದಿಗೆ ಆಡ್ತೇನೆ ನೋಡ್ತಾ ಇರಿ‘ ಎಂದಿದ್ದರು ಅಜಿಂಕ್ಯ. 2011ರಲ್ಲಿ ಭಾರತ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆನಂತರ ಹಲವು ಸಂದರ್ಭಗಳಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಚಿನ್ ಜೊತೆ ಇರುವ ಅವಕಾಶ ಅವರದ್ದಾಗಿತ್ತು. ಆದರೆ, 2013ರಲ್ಲಿ ದೆಹಲಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದಾಗ ಸಚಿನ್ ಜೊತೆಗೆ ಆಡಿದ್ದರು. ಅದೂ ಕೂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವಾಗಿತ್ತು.

ಇದಾಗಿ ಏಳು ವರ್ಷಗಳಲ್ಲಿ ಅಜಿಂಕ್ಯ ಹಲವು ಏಳು–ಬೀಳುಗಳನ್ನು ಕಂಡಿದ್ದಾರೆ. ಆದರೂ ತಮ್ಮ ಆತ್ಮಬಲ ಮತ್ತು ಸಹನೆಯನ್ನು ಬಿಟ್ಟಿಲ್ಲ. ಸಿಕ್ಕ ಅವಕಾಶಗಳಲ್ಲಿ ಮೇಲುಗೈ ಸಾಧಿಸುವ ಛಲವನ್ನು ಬಿಟ್ಟಿಲ್ಲ ಮುಂಬೈನ ’ಖಡೂಸ್‘ ಆಟಗಾರ. ಮಂಗಳವಾರ ಮೆಲ್ಬರ್ನ್‌ನಲ್ಲಿ ಅವರ ನಾಯಕತ್ವದಲ್ಲಿ ಗೆದ್ದ ಸಾಧನೆ ಸಣ್ಣದಲ್ಲ. ಹೋದವಾರವಷ್ಟೇ ಅಡಿಲೇಡ್‌ನಲ್ಲಿ ಅನುಭವಿಸಿದ್ದ ಹೀನಾಯ ಸೋಲಿನಿಂದ ಭಾರತ ತಂಡವು ಪ್ರಪಾತಕ್ಕಿಳಿದಿತ್ತು. ಬಿದ್ದವರಿಗೆ ಆಳಿಗೊಂದು ಕಲ್ಲು ಎನ್ನುವಂತೆ ಟೀಕೆಗಳು ಸುರಿಮಳೆಯೇ ಸುರಿದಿತ್ತು. ದಾಖಲೆ ಪುಸ್ತಕದಲ್ಲಿ 36 ರನ್‌ಗಳ ಕನಿಷ್ಠ ಸ್ಕೋರು ಅಣಕಿಸುತ್ತಿತ್ತು.

ಅಂತಹ ದೊಡ್ಡ ಸೋಲಿನಲ್ಲಿ ಅಜಿಂಕ್ಯ ಕೂಡ ಆಡಿದ್ದರು. ಆ ಕಳಂಕವನ್ನು ತೊಳೆದುಕೊಳ್ಳುವ ಪಯಣಕ್ಕೆ ಈಗ ಅವರೇ ಚಾಲನೆ ಕೊಟ್ಟಿದ್ದಾರೆ. ಗಟ್ಟಿ ಮನೋಬಲ, ದೃಢವಿಶ್ವಾಸ ಮತ್ತು ಸಾಂಘಿಕ ಹೋರಾಟದ ಉತ್ಕೃಷ್ಟ ನಿದರ್ಶನವನ್ನು ರೂಪಿಸಿದೆ. ಎದುರಾಳಿ ಬೌಲರ್‌ಗಳ ’ಪ್ರೈಸ್‌ ವಿಕೆಟ್‌‘ ಬ್ಯಾಟ್ಸ್‌ಮನ್ ಮತ್ತು ಅಗ್ರೆಸಿವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶಾಂತಸ್ವಭಾವಿ ’ಮುಂಬೈಕರ್‘ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ಹಣಿದು ತೋರಿಸಿದ್ದಾರೆ.

ಈ ಪಂದ್ಯದಲ್ಲಿ ರಹಾನೆಗೆ ಅನುಭವಿ ರೋಹಿತ್ ಶರ್ಮಾ, ಮೊಹಮ್ಮದ್ ಶಮಿಯವರ ಸಾಥ್ ಕೂಡ ಇರಲಿಲ್ಲ. ಆದರೆ ಪದಾರ್ಪಣೆ ಮಾಡಿದ ಶುಭಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಅವರ ಪ್ರತಿಭೆಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೇ ಕನಕಷನ್‌ನಿಂದ ಚೇತರಿಸಿಕೊಂಡು ಬಂದ ರವೀಂದ್ರ ಜಡೇಜ ರಹಾನೆಗೆ ಆನೆಬಲ ತುಂಬಿದರು. ಆರ್. ಆಶ್ವಿನ್ ಎಂದಿನಂತೆ ತಮ್ಮ ಕೈಚಳಕ ಮೆರೆದು ವಿಕೆಟ್ ಬೇಟೆಯಾಡಿದರು. ಜಸ್‌ಪ್ರೀತ್ ಬೂಮ್ರಾ ತಮ್ಮ ಮೇಲಿನ ವಿಶ್ವಾಸಕ್ಕೆ ಒಂಚೂರು ಚ್ಯುತಿ ಬರದಂತೆ ಆಡಿದರು.

ಪಂದ್ಯಕ್ಕೂ ಮುನ್ನ 11ರ ಬಳಗದ ಆಯ್ಕೆಯ ಸವಾಲು ರಹಾನೆ ಮುಂದಿತ್ತು. ಅದೃಷ್ಟಕ್ಕೆ ಜಡೇಜ ಫಿಟ್ ಆದರು. ವೃದ್ಧಿಮಾನ್ ಸಹಾ ಅವರನ್ನು ಕೈಬಿಟ್ಟು ರಿಷಭ್ ಪಂತ್ ಗೆ ಮಣೆ ಹಾಕಿದರು. ಅನುಭವಿ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರನ್ನು ಪರಿಗಣಿಸದ ಕಾರಣ ಟೀಕೆಗಳನ್ನೂ ಸಹಿಸಿಕೊಂಡರು. ಆದರೆ ಮಯಂಕ್ ಅಗರವಾಲ್ ತಮ್ಮ ಬ್ಯಾಕ್‌ಲಿಫ್ಟ್‌ ಲೋಪದ ಕಾರಣ ಎರಡೂ ಇನಿಂಗ್ಸ್‌ಗಳಲ್ಲಿ ವಿಕೆಟ್ ಚೆಲ್ಲಿದರು. ಟೆಸ್ಟ್ ಪರಿಣತರಾದ ಚೇತೇಶ್ವರ್ ಪೂಜಾರ ಮತ್ತು ಹನುಮವಿಹಾರಿ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ಮತ್ತೊಮ್ಮೆ ಎಡವಿದರು.

ಪಂದ್ಯದ ಎರಡನೇ ಇನಿಂಗ್ಸ್‌ನ ಮಧ್ಯದಲ್ಲಿ ಉಮೇಶ್ ಯಾದವ್ ಗಾಯಗೊಂಡಾಗ, ಉಳಿದ ಬೌಲರ್‌ಗಳೊಂದಿಗೆ ಆತಿಥೇಯ ಮಧ್ಯಮಕ್ರಮಾಂಕವನ್ನು ದೂಳೀಪಟ ಮಾಡಿಸಿದ್ದು ರಹಾನೆಯ ಗಟ್ಟಿ ಮನೋಬಲದ ಪ್ರತಿಕ. ಆಸ್ಟ್ರೇಲಿಯಾ ತಂಡವು ಎರಡೂ ಇನಿಂಗ್ಸ್‌ಗಳಲ್ಲಿ ಇನ್ನೂರರ ಗಡಿ ಮೀರಿ ಹೋಗದಂತೆ ನೋಡಿಕೊಂಡಿದ್ದು ಸಣ್ಣ ಸಾಧನೆಯಲ್ಲ. ಸರಿಯಾದ ಸಮಯಕ್ಕೆ ಬೌಲರ್‌ಗಳ ಬದಲಾವಣೆ. ಫೀಲ್ಡಿಂಗ್ ನಿಯೋಜನೆಗಳಲ್ಲಿ ಅಜಿಂಕ್ಯ ಚಾಕಚಕ್ಯತೆ ಎದ್ದು ಕಂಡಿತು.

ಎಲ್ಲಕ್ಕಿಂತ ಮಿಗಿಲಾಗಿ ಮೊದಲ ಇನಿಂಗ್ಸ್‌ನಲ್ಲಿ ಅವರ ಬ್ಯಾಟಿಂಗ್ ಸೊಬಗಿನಲ್ಲಿ ರಾಹುಲ್ ದ್ರಾವಿಡ್ ತಾಳ್ಮೆ, ವಿರಾಟ್ ಕೊಹ್ಲಿಯ ದಿಟ್ಟತನಗಳೆರಡೂ ಎದ್ದು ಕಂಡವು. ಯಾವಾಗಲೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದ ರಹಾನೆ, ಇಲ್ಲಿ ಕೊಹ್ಲಿಯ ನಾಲ್ಕನೇ ಸ್ಥಾನಕ್ಕೆ ನ್ಯಾಯ ಸಲ್ಲಿಸಿದ್ದು ವಿಶೇಷ.

’ಇದೊಂದು ಅದ್ಭುತವಾದ ಜಯ. ಸಂಘಟಿತ ಹೋರಾಟದ ಫಲ ಇದು. ಜಿಂಕ್ಸ್ (ಅಜಿಂಕ್ಯ)ಮತ್ತು ಬಳಗವು ಇಷ್ಟಕ್ಕೆ ಖುಷಿಪಡುವುದಿಲ್ಲ. ಇಲ್ಲಿಂದ ಯಶಸ್ಸಿನ ಏರುಗತಿಯ ಪಯಣ ಆರಂಭವಾಗಿದೆ‘ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

’ಅಡಿಲೇಡ್‌ ಆಘಾತದ ಅವಮಾನವನ್ನು ಭಾರತದ ಆಟಗಾರರು ಮೆಲ್ಬರ್ನ್‌ನಲ್ಲಿ ಸಮಾಧಿ ಮಾಡಿದರು‘ ಎಂದು ಕ್ರಿಕೆಟ್ ವಿಶ್ಲೇಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

’ಆಸ್ಟ್ರೇಲಿಯಾ ಮೆಲ್ಬರ್ನ್‌ನಲ್ಲಿ ಭಾರತವನ್ನು ದೂಳೀಪಟ ಮಾಡಲಿದೆ‘ ಎಂದಿದ್ದ ಶೇನ್ ವಾರ್ನ್ ಕೂಡ ಅಜಿಂಕ್ಯ ನಾಯಕತ್ವವನ್ನು ಹೊಗಳಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅಜಿಂಕ್ಯ ರಹಾನೆ ಬಗ್ಗೆ ಒಂದು ಸಂದೇಶ ಟ್ರೆಂಡಿಂಗ್ ಆಗಿದೆ. ಅದೇನೆಂದರೆ, ಅಜಿಂಕ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 12 ಶತಕಗಳನ್ನು ಗಳಿಸಿದ್ದಾರೆ. ಅದರಲ್ಲಿ ಯಾವುದೇ ಪಂದ್ಯದಲ್ಲಿಯೂ ಭಾರತ ಸೋತಿಲ್ಲ. ಇದು ಸಚಿನ್‌ ತೆಂಡೂಲ್ಕರ್‌ಗಿಂತಲೂ ಉತ್ತಮ ದಾಖಲೆ‘ ಎಂದಿದ್ದಾರೆ ಕೆಲವು ಅಭಿಮಾನಿಗಳು.

ಸಚಿನ್ ತೆಂಡೂಲ್ಕರ್ ಹಲವಾರು ಪಂದ್ಯಗಳಲ್ಲಿ ಭಾರತದ ಜಯಕ್ಕೆ ಕಾರಣರಾಗಿದ್ದರು. ಆದರೂ ’ಸಚಿನ್ ಶತಕ ಹೊಡೆದರೆ ಭಾರತ ಸೋಲುತ್ತದೆ‘ ಎಂಬ ವ್ಯಂಗ್ಯಗಳು ಕೇಳಿಬರುತ್ತಿದ್ದವು. ಶತಕಗಳ ಒಡೆಯ ಸಚಿನ್‌ ತಮ್ಮ ನಿವೃತ್ತಿಯವರೆಗೂ ಈ ವ್ಯಂಗ್ಯವನ್ನು ಕೇಳಿಕೊಂಡಿರಬೇಕಾಯಿತು.

ಅದೇನೆ ಇರಲಿ; ಅಜಿಂಕ್ಯ ಪಾಲಿಗೆ ಮೆಲ್ಬರ್ನ್ ಪಾಲಿಗೆ ವೃತ್ತಿಜೀವನದ ಮರುಜನ್ಮಕ್ಕೆ ಕಾರಣವಾಗುವ ಸಾಧ್ಯತೆ ಇದೆ. 2016ರಿಂದಲೇ ಅವರಿಗೆ ಭಾರತ ಟಿ20 ತಂಡ ಮತ್ತು 2018ರಿಂದ ಏಕದಿನ ತಂಡದ ಬಾಗಿಲು ಮುಚ್ಚಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಅವರ ವರ್ಚಸ್ಸು ಕಡಿಮೆಯಾಗಿದೆ. ಯುಎಇಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಅವರಿಗೆ ಮೊದಲ ಸುತ್ತಿನ ಹಲವು ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಡೆಲ್ಲಿ ಕ್ಯಾಪಿಟಲ್ಸ್‌ ಕೊಟ್ಟಿರಲಿಲ್ಲ

ಹೋದ ವರ್ಷ ರಾಜಸ್ಥಾನ ರಾಯಲ್ಸ್‌ನಲ್ಲಿದ್ದಾಗಲೂ ಅವರನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ, ಸ್ಟಿವನ್ ಸ್ಮಿತ್‌ಗೆ ಪಟ್ಟ ಕಟ್ಟಲಾಗಿತ್ತು. ಈಗ ಅದೇ ಸ್ಮಿತ್ ತವರುನೆಲದಲ್ಲಿ ಅಜಿಂಕ್ಯ ಜಯದ ಡಂಗುರ ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT