ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: IPL-2021; ಒಡೆದ ಬಯೋಬಬಲ್ ಕಲಿಸಿದ ಪಾಠ

Last Updated 6 ಮೇ 2021, 7:24 IST
ಅಕ್ಷರ ಗಾತ್ರ

ತಮ್ಮ ದೇಹಾಕಾರದ, ಚುರುಕುಮತಿಯ ಬಗೆಗೆ ಅಖಂಡ ಆತ್ಮವಿಶ್ವಾಸ ಇರುವ ಕ್ರಿಕೆಟಿಗರು ಮೈದಾನದಲ್ಲಿ ಮಿಂಚುಹುಳುಗಳು. ಅವರ ಮಿಂಚುಗಳನ್ನೇ ಬಂಡವಾಳ ಮಾಡಿಕೊಳ್ಳುವ ಕಾರ್ಪೊರೇಟ್ ಮನಸ್ಸುಗಳ ವ್ಯಾವಹಾರಿಕ ಪ್ರಭೆ ಇನ್ನೊಂದು ಕಡೆ. ಎಲ್ಲ ಕ್ರೀಡಾ ಚಟುವಟಿಕೆ ಸ್ತಬ್ಧಗೊಂಡಿದ್ದ ಹೊತ್ತಿನಲ್ಲೂ ಸದ್ದು ಮಾಡಲು ಹೊರಟ ಐಪಿಎಲ್‌ನ ಬಯೋಬಬಲ್ ಈಗ ಢಬ್ಬೆಂದು ಒಡೆದಿದೆ. ಅದು ಕಲಿಸಿದ ಪಾಠಗಳು ಹಲವು.

***

ಕಳೆದ ವರ್ಷ ಬಯೋ ಬಬಲ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯ ನಡೆದ ಮಹತ್ವದ ಘಟ್ಟ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಮೂರು ಸಲ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದ ಮೇಲೆ ತಮ್ಮ ಟಿ–ಶರ್ಟ್‌ಅನ್ನು ಮೇಲೆತ್ತಿದರು. ‘ಅವರಲ್ಲಿ ಸಿಕ್ಸ್‌ಪ್ಯಾಕ್ ಇದೆಯಾ’ ಎಂದು ವೀಕ್ಷಕ ವಿವರಣೆಕಾರ ಕೇಳಿದ್ದಕ್ಕೆ ತೋರಿಸಿದ್ದು ತಮ್ಮ ಉದರ ಭಾಗದ ಪದರಗಳನ್ನು. ಋತುರಾಜ್‌ ಆ ಸಲವೇ ಕೋವಿಡ್‌ ಪೀಡಿತರಾಗಿ, ಆಮೇಲೆ ಚೇತರಿಸಿಕೊಂಡು ಕ್ರಿಕೆಟ್ ಆಡಿದ್ದರು.

ಈ ಸಲ ಇನ್ನಷ್ಟು ಆಟಗಾರರು ತಮ್ಮ ಉದರ ಬಲ, ಭುಜಬಲ ತೋರಲಾರರು. ಯಾಕೆಂದರೆ, ಐಪಿಎಲ್ ಪಂದ್ಯಗಳು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿವೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೋದವರ್ಷ ಸುಸೂತ್ರವಾಗಿ ಐಪಿಎಲ್ ನಡೆದಾಗ, ‘ಎಲ್ಲವನ್ನೂ ಹಿಡಿತದಲ್ಲಿ ಇಟ್ಟುಕೊಂಡು, ಬಯೋಬಬಲ್‌ನಲ್ಲಿ ಪಂದ್ಯಗಳನ್ನು ನಡೆಸಿದರೆ ಸಲೀಸಾಗಿ ಟೂರ್ನಿ ಆಯೋಜಿಸಬಹುದು ಎನ್ನುವುದು ಸಾಬೀತಾಗಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈ ಸಲವೂ ಅದೇ ಆತ್ಮವಿಶ್ವಾಸದಲ್ಲಿ ಭಾರತದ ಆರು ನಗರಗಳಲ್ಲಿ 60 ಪಂದ್ಯಗಳನ್ನು ನಡೆಸಲು ಬಿಸಿಸಿಐ ಯೋಜಿಸಿತ್ತು. ಆದರೆ, ಕೋವಿಡ್ ಎರಡನೇ ಅಲೆ ಒಡ್ಡಿದ ಸವಾಲೇ ಬೇರೆ.

ಎಂಟು ತಂಡಗಳ 200 ಆಟಗಾರರು, ಅವರಿಗೆ ನೆರವು ನೀಡುವ ಸಿಬ್ಬಂದಿ, ತಂಡದ ವ್ಯವಸ್ಥಾಪಕ ಸಮಿತಿಯ ಸಿಬ್ಬಂದಿ, ವೀಕ್ಷಕ ವಿವರಣೆಕಾರರು, ಪ್ರಸಾರದ ಹಕ್ಕು ಪಡೆದ ವಾಹಿನಿಯವರು, ಮೈದಾನವನ್ನು ಸಜ್ಜುಗೊಳಿಸುವವರು, ಅಡುಗೆ ಮಾಡಿ ಬಡಿಸುವವರು, ಹೋಟೆಲ್‌ಗಳಲ್ಲಿ ನಿಗಾ ಮಾಡುವವರು, ಅಲ್ಲಿಂದ ಬಸ್‌ಗಳಲ್ಲಿ ಮೈದಾನಕ್ಕೆ ಕರೆತರುವವರು, ಒಂದು ನಗರದಿಂದ ಇನ್ನೊಂದು ನಗರಕ್ಕೆ ಇವರೆಲ್ಲ ಪ್ರವಾಸ ಮಾಡುವಾಗ ಸಂಪರ್ಕಕ್ಕೆ ಬರುವವರು... ಹೀಗೆ ದೊಡ್ಡ ಸಮುದಾಯವೊಂದು ಬಯೋಬಬಲ್‌ಗೆಂದೇ ಮನಸ್ಸನ್ನು ಅಣಿಗೊಳಿಸಿಕೊಳ್ಳಬೇಕಾಗುತ್ತದೆ. ಇಲ್ಲಿ ಬಯೋಬಬಲ್‌ನಲ್ಲಿ ಇರುವ ಮನಸ್ಸುಗಳಿಗೆ ಅದರಿಂದ ಆಚೆ ಇರುವ ತಮ್ಮವರ ಚಿಂತೆ ಕಾಡದೇ ಇರಲಾರದು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ತಮ್ಮ ಮನೆಯವರಿಗೆ ಕೋವಿಡ್ ಬಂದದ್ದು ಖಾತರಿಯಾಗುತ್ತಿದ್ದಂತೆ ಕಾಲಿಗೆ ಬುದ್ಧಿ ಹೇಳಿದ್ದು ಅದಕ್ಕೇ. ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಕೇನ್ ರಿಚರ್ಡ್‌ಸನ್‌ ಇಬ್ಬರೂ ಟೂರ್ನಿಯ ಪ್ರಾರಂಭಿಕ ಹಂತದಲ್ಲೇ ತಮ್ಮೂರಿಗೆ ಹೋದದ್ದೂ ಅವರ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳದಿಂದಲೇ.

ಈ ಸಲ ಐಪಿಎಲ್ ಶುರುವಾಗುವ ಮೊದಲೇ, ಏಪ್ರಿಲ್‌ನಲ್ಲಿ ಬಿಬಿಸಿ ನ್ಯೂಸ್ ಇಂಥದ್ದೊಂದು ಟೂರ್ನಿಯನ್ನು ಆಯೋಜಿಸುವುದರ ಆತಂಕದ ಕುರಿತು ಸವಿಸ್ತಾರವಾಗಿ ಬರೆದಿತ್ತು. ‘ವಿಶ್ವದ ಅತಿ ಗ್ಲಾಮರಸ್ ಆದ ಟೂರ್ನಿಯನ್ನು ಕೋವಿಡ್ ಎರಡನೇ ಅಲೆಯು ಸೂತಕದ ಛಾಯೆ ಮೂಡಿಸಿರುವ ಹೊತ್ತಿನಲ್ಲೇ ಆಯೋಜಿಸಲಾಗುತ್ತಿದೆ’ ಎಂದು ಆ ಬರವಣಿಗೆಯ ಒಕ್ಕಣೆ ಇತ್ತು. ಚೆನ್ನೈ, ಬೆಂಗಳೂರು, ಕೋಲ್ಕತ್ತ, ದೆಹಲಿ, ಮುಂಬೈ, ಅಹಮದಾಬಾದ್ ಈ ನಗರಗಳಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಾಗ ಎರಡನೇ ಅಲೆ ಏಳತೊಡಗಿತ್ತು. ಟೂರ್ನಿ ಶುರುವಾದ ಮೇಲಂತೂ ಈ ಎಲ್ಲ ನಗರಗಳಲ್ಲೂ ಜನರು ಹಾಸಿಗೆಗಾಗಿ ಪರದಾಡುತ್ತಿರುವ ಸುದ್ದಿಗಳು ಮಾಧ್ಯಮದಲ್ಲಿ ಎದ್ದುಕಾಣತೊಡಗಿದವು.

ಇಂಥದ್ದೊಂದು ದುರಿತ ಕಾಲದಲ್ಲಿ ಟೂರ್ನಿ ನಡೆಸುವುದು ಸರಿಯೇ ಎಂಬ ಪ್ರಶ್ನೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಟೂರ್ನಿ ಶುರುವಾಗುವ ಮೊದಲೇ ಎದುರಾಗಿತ್ತು. ‘ಬಯೋಬಬಲ್ ಎನ್ನುವುದು ಸುರಕ್ಷಾ ಕವಚವಿದ್ದಂತೆ’ ಎನ್ನುವ ನುಡಿಗಟ್ಟನ್ನೇ ಅವರು ಆಗ ಪುನರುಚ್ಚರಿಸಿದ್ದರು.

ಐಪಿಎಲ್ ನಿಜಕ್ಕೂ ಗ್ಲಾಮರಸ್. ವೀಕ್ಷಕ ವಿವರಣೆಕಾರರ ಜತೆ ಈಗ ಹೆಣ್ಣುಧ್ವನಿಯೂ ಕೇಳುತ್ತದೆ. ಪಂದ್ಯದ ವಿಶ್ಲೇಷಣೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವಾಗ ನಿರ್ವಹಣೆಗೆಂದು ಸುಂದರ ಹುಡುಗಿಯರನ್ನು ಸ್ಟುಡಿಯೊದಲ್ಲಿ ಕೂರಿಸಿರುತ್ತಾರೆ. ಕನ್ನಡದಲ್ಲಿಯೂ ಕಾಲು ಚಾಚಿಕೊಂಡ ಹುಡುಗಿಯ ಎದುರು ವೆಂಕಟೇಶ್ ಪ್ರಸಾದ್ ತರಹದ ಹಳೆಯ ಕ್ರಿಕೆಟಿಗರು ಪಂದ್ಯದ ರೂಹಿನ ಬಗೆಗೆ ಚರ್ಚಿಸಿದ್ದನ್ನು ನೋಡಿದ್ದೇವೆ.

ಹೋದ ವರ್ಷ ಲಾಕ್‌ಡೌನ್ ಆದಾಗ ಬಹುತೇಕ ಜನರಲ್ಲಿ ಇದ್ದ ಮನಸ್ಥಿತಿ ಬೇರೆ. ಈಗಿನ ಅಲೆಯ ಹೊಡೆತದ ಗತಿ–ಸ್ಥಿತಿಯೇ ಬೇರೆ. ನಿಜಕ್ಕೂ ಈಗ ಸೂತಕದ ಮೋಡ ಆವರಿಸಿದೆ. ಇಂತಹ ಹೊತ್ತಿನಲ್ಲಿ ಬೇರೆಲ್ಲ ಕ್ರೀಡಾ ಟೂರ್ನಿಗಳು ರದ್ದಾಗುತ್ತಿರುವಾಗ ಐಪಿಎಲ್ ಮಾತ್ರ ನಡೆಯುವುದು ಒಂದು ರೀತಿಯಲ್ಲಿ ಕಾರ್ಪೊರೇಟ್ ಕೃತ್ರಿಮದಂತೆ ಕಾಣುತ್ತಿದೆ ಎಂದು ಕೆಲವರು ಟೀಕಿಸಿದ್ದನ್ನೂ ತಳ್ಳಿಹಾಕುವಂತಿಲ್ಲ.

ರಿಷಬ್ ಪಂತ್ ಕೈಯಿಂದ ಬ್ಯಾಟ್ ಜಾರಿದ ಕ್ಷಣ....ಈ ಸಲದ ಐಪಿಎಲ್‌ನ ರೂಪಕ
ರಿಷಬ್ ಪಂತ್ ಕೈಯಿಂದ ಬ್ಯಾಟ್ ಜಾರಿದ ಕ್ಷಣ....ಈ ಸಲದ ಐಪಿಎಲ್‌ನ ರೂಪಕ

ಕ್ರಿಕೆಟಿಗರಿಗೆ ತಮ್ಮ ಫಿಟ್‌ನೆಸ್‌ ವಿಷಯದಲ್ಲಿ ಅಖಂಡ ಆತ್ಮವಿಶ್ವಾಸ ಇರುತ್ತದೆ. ಜಿಮ್‌ನಲ್ಲಿ ವರ್ಷಗಟ್ಟಲೆ ಇಳಿಸಿದ ಬೆವರಿಗೆ, ಮೈದಾನದಲ್ಲಿ ತಪಸ್ಸಿನಂತೆ ಕಲಿತ ವರಸೆಗಳಿಗೆ ಐಪಿಎಲ್ ನಿಜಕ್ಕೂ ಹುಲ್ಲುಗಾವಲಿನಂತೆ. ಹಾಗೆಂದೇ ಭಾವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಅವರನ್ನು ಟೂರ್ನಿಯ ಮೊದಲೇ ಕೋವಿಡ್ ಕಾಡಿತು. ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ಮೇಲೆ ಮನಸ್ಸನ್ನು ತಹಬಂದಿಗೆ ತಂದು ಆಡುವುದು ಕೂಡ ಸವಾಲೇ.

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ, ಅಲ್ಲಿನ ಪ್ರಧಾನಿ ಎಲ್ಲರಿಂದ ಟೀಕೆಗಳಿಗೆ ಒಳಗಾಗಿಯೇ ಇಲ್ಲಿ ಆಡಲು ಬಂದ ಆ ದೇಶದ ಕ್ರಿಕೆಟಿಗರಂತೂ ಕಣ್ಣು ಕಣ್ಣು ಬಿಡುವಂಥ ಸ್ಥಿತಿ ಸೃಷ್ಟಿಯಾಯಿತು. ಡೇವಿಡ್ ವಾರ್ನರ್‌ಗೆ ಅವರ ಮಗಳು, ‘ಮನೆಗೆ ಬೇಗ ಬಂದುಬಿಡಪ್ಪಾ’ ಎಂದು ಭಾವುಕಳಾಗಿ ಚಿತ್ರಗಳನ್ನು ಬಿಡಿಸಿ, ಅದರ ಕೆಳಗೆ ಬರೆದಿದ್ದ ಒಕ್ಕಣೆ ನೋಡಿದರೆ ನಿಜಸ್ಥಿತಿಯ ಅರಿವಾಗುತ್ತದೆ. ಅದನ್ನು ಕ್ಯಾಮೆರಾ ಕಣ್ಣಿಗೆ ತೋರಿಸಿದ ವಾರ್ನರ್ ಕೂಡ ಹನಿಗಣ್ಣಾಗಿದ್ದರು.

ಐಪಿಎಲ್‌ಗೆ ದೊಡ್ಡ ಮಾರುಕಟ್ಟೆ ಇದೆ. ಅದರ ಸುತ್ತ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ. ಆ್ಯಪ್‌ಗಳು, ಸ್ಪರ್ಧೆಗಳು ಇವನ್ನೆಲ್ಲ ಡಿಜಿಟಲ್ ವೇದಿಕೆ ಮೇಲೆ ತೇಲಿಬಿಟ್ಟೇ ಎಷ್ಟೋ ವಹಿವಾಟನ್ನು ಮಾಡುವ ಮನಸ್ಸುಗಳು ಹುಟ್ಟಿಕೊಂಡಿವೆ. ಇನ್ನು ಅಕ್ರಮ ಬೆಟ್ಟಿಂಗ್ ಜಾಲವಂತೂ ಈ ಸಂದರ್ಭದಲ್ಲಿ ಗಲ್ಲಿ ಗಲ್ಲಿಗಳಲ್ಲೂ ಗರಿಗೆದರುತ್ತವೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ‘ಪಿಚ್ ಸೈಡಿಂಗ್’ನಲ್ಲಿ (ಪಂದ್ಯ ನಡೆಯುವಾಗ ಅದು ಟಿ.ವಿ. ಪರದೆ ಮೇಲೆ ಮೂಡಲು ಆಡಿದ ಕೆಲವು ಸೆಕೆಂಡುಗಳು ಬೇಕಾಗುತ್ತದೆ. ಈ ಅಂತರದಲ್ಲೇ ಮಾಹಿತಿ ರವಾನಿಸುವ ವೈಖರಿಗೆ ಹೀಗೆನ್ನುತ್ತಾರೆ) ಸ್ವಚ್ಛತಾ ಸಿಬ್ಬಂದಿಯೊಬ್ಬ ನಿರತನಾಗಿದ್ದನೆಂಬ ಪ್ರಸಂಗವೂ ಬೆಳಕಿಗೆ ಬಂದಿದೆ. ಜನರ ದುಡಿಮೆಗೆ ಕೋವಿಡ್ ಕುತ್ತು ತಂದಿರುವ ಇಂತಹ ಹೊತ್ತಿನಲ್ಲಿ ಈ ರೀತಿಯ ಟೂರ್ನಿ ಬೇಕೆ ಎಂಬ ಇನ್ನೊಂದು ಪ್ರಶ್ನೆಯೂ ಮಾನವೀಯ ನೆಲೆಗಟ್ಟಿನಲ್ಲಿ ಮುಖ್ಯವಾಗುತ್ತದೆ.

ಬಿಸಿಸಿಐ ಅಧಿಕಾರಿಗಳು, ಕ್ರಿಕೆಟ್ ಕಾರ್ಪೊರೇಟ್ ಕುಳಗಳು, ಇಂತಹ ಆಟವನ್ನೇ ನೆಚ್ಚಿಕೊಂಡು ಬಂಡವಾಳ ಹೂಡಿ ದೊಡ್ಡ ಲಾಭ ತೆಗೆಯುವ ವಾಹಿನಿಗಳು ಆಟಕ್ಕೆ ಮನರಂಜನೆಯ ಕವಚ ತೊಡಿಸಿ ವರ್ಷಗಳೇ ಆಗಿವೆ. ಆಟದ ಹುಚ್ಚು ಅಭಿಮಾನದಲ್ಲಿ ಟಿ.ವಿ ಮುಂದೆ ಮಂದಿ ಕೇಕೆ ಹಾಕುತ್ತಿರುವ ಹೊತ್ತಿನಲ್ಲೇ ಪಕ್ಕದ ಮನೆಯ ಎದುರು ಸದ್ದು ಮಾಡುತ್ತಾ ಆ್ಯಂಬುಲೆನ್ಸ್ ಬಂದು ನಿಂತರೆ ಹೇಗಾಗಬೇಡ? ಬಹುಶಃ ಇಂತಹ ಮಾನವೀಯ ಕ್ಷಣಗಳೇ ಈ ಸಲ ಬಯೋಬಬಲ್ ಅನ್ನು ಒಡೆದಿರಬೇಕು.

ಕ್ರಿಕೆಟ್ ಜಂಟಲ್‌ಮನ್‌ಗಳ ಆಟ. ಹೀಗಾಗಿ ಆಡುವವರು, ಆಡಿಸುವವರೂ ಜಂಟಲ್‌ಮನ್‌ಗಳಾಗಿಯೇ ಉಳಿಯಬೇಕು ಎಂಬ ಸಂದೇಶವನ್ನೂ ಒಡೆದ ಬಯೋಬಬಲ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT