ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಭಾರತದ ಗೆಲುವಿನ ಕಿಡಿ, ವ್ಯಾಗ್ನರ್ ಮುನ್ನುಡಿ

ಆಟದ ಮನೆ
Last Updated 27 ಜನವರಿ 2021, 9:49 IST
ಅಕ್ಷರ ಗಾತ್ರ

ಭಾರತದ ಹೊಸತಲೆಮಾರಿನ ವೇಗಿಗಳ ಛಲದ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಅವಿಸ್ಮರಣೀಯ ಗೆಲುವನ್ನು ನಾವೆಲ್ಲ ಚಪ್ಪರಿಸುತ್ತಿದ್ದೇವೆ. ಕಾಂಗರೂ ದೇಶದ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಮನೋಬಲವನ್ನು ವರ್ಷದ ಹಿಂದೆಯೇ ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ ಕೆಣಕಿದ್ದರು. ಅದರ ಫಲವಿದು ಎನ್ನುವುದು ಆಸಕ್ತಿಕರ.

ಭಾರತವು ಆಸ್ಟ್ರೇಲಿಯಾ ವಿರುದ್ಧ ಅವಿಸ್ಮರಣೀಯ ಟೆಸ್ಟ್ ಸರಣಿ ಗೆಲುವನ್ನು ಬ್ರಿಸ್ಬೇನ್‌ನಲ್ಲಿ ಸಾಧಿಸಿದ ಮೇಲೆ ನಡೆದಿರುವ ಕೆಲವು ವಿದ್ಯಮಾನಗಳು, ವಿಶ್ಲೇಷಣೆಗಳು ಮಜವಾಗಿವೆ. ‘ಪೂಜಾರ ಇಂಗ್ಲೆಂಡ್‌ನ ಮೊಯಿನ್ ಅಲಿ ತರಹದ ಬೌಲರ್‌ಗೆ ಒಂದೇ ಒಂದು ಸಲ ಕ್ರೀಸ್‌ನಿಂದ ಆಚೆ ಬಂದು ಹೊಡೆದರೂ ನಾನು ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ’ ಎಂದು ಆಫ್ ಸ್ಪಿನ್ನರ್ ಆರ್. ಅಶ್ವಿನ್ ಸವಾಲೊಡ್ಡಿದ್ದಾರೆ. ಪೂಜಾರ ಅದನ್ನು ಸ್ವೀಕರಿಸುವುದು ಅನುಮಾನ. ಇನ್ನೊಂದು ಕಡೆ ಆಸ್ಟ್ರೇಲಿಯಾದ ವಿಲಕ್ಷಣ ಶೈಲಿಯ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರನ್ನು ಕಟ್ಟಿಹಾಕಿದ ತಂತ್ರಗಾರಿಕೆಯ ಕುರಿತು ವಿಶ್ಲೇಷಣೆ ನಡೆಯುತ್ತಿದೆ.

ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಈ ಹೊತ್ತಿನ ಹೀರೊ. ಪ್ರಮುಖ ವೇಗಿಗಳು ಸಾಲು ಸಾಲಾಗಿ ಗಾಯಾಳುಗಳಾಗಿ ಹೊರಗುಳಿದರೂ ಹೊಸ ಮುಖಗಳು ಸವಾಲನ್ನು ಸ್ವೀಕರಿಸಿ ಗೆದ್ದ ಪರಿ ರೋಚಕ. ಹೀಗೆ ವೇಗಿಗಳ ದೊಡ್ಡ ದಂಡನ್ನೇ ಭರತ್ ಈಗ ಸಿದ್ಧಪಡಿಸಿರುವುದಕ್ಕೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ನಟರಾಜನ್, ನವದೀಪ್ ಸೈನಿ ತರಹದ ಹುಡುಗರ ಬಿಸಿರಕ್ತವೇ ಕನ್ನಡಿ ಹಿಡಿದಿದೆ. ಆಸ್ಟ್ರೇಲಿಯನ್ನರಿಗೆ ಭಾರತ ‘ಬಿ’ ತಂಡವನ್ನು ಸೋಲಿಸಲಿಕ್ಕೆ ಆಗಲಿಲ್ಲ ಎಂದು ಅಲ್ಲಿನ ಹಿರಿಯ ಆಟಗಾರರು ಟೀಕಾಪ್ರಹಾರ ಮುಂದುವರಿಸಿದ್ದಾರೆ.

ನೀಲ್ ವ್ಯಾಗ್ನರ್
ನೀಲ್ ವ್ಯಾಗ್ನರ್

ಕೆಲವೇ ತಿಂಗಳುಗಳ ಹಿಂದಿನ ಇತಿಹಾಸವನ್ನು ನಾವು ಆಟದ ವಿಷಯದಲ್ಲಿ ಯಾವತ್ತೂ ಗಮನಿಸಬೇಕಾಗುತ್ತದೆ. 2019ರ ಡಿಸೆಂಬರ್ ಹಾಗೂ 2020ರ ಜನವರಿಯಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಪರ್ತ್ ಹಾಗೂ ಸಿಡ್ನಿಯಲ್ಲಿ ಮೂರು ಟೆಸ್ಟ್‌ ಕ್ರಿಕೆಟ್ ಪಂದ್ಯಗಳು ನಡೆದಿದ್ದವು. ಮೂರರಲ್ಲೂ ಆಸ್ಟ್ರೇಲಿಯಾ ಕ್ರಮವಾಗಿ 296, 247 ಹಾಗೂ 279 ರನ್‌ಗಳಿಂದ ವಿಜಯ ಸಾಧಿಸಿತ್ತು. ಹೀಗಾಗಿ ಆ ಸರಣಿಯಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಲಾಬುಷೇನ್ ಮೂವರೂ ಎದುರಿಸಿದ್ದ ಸವಾಲುಗಳು ಅಷ್ಟಾಗಿ ಮುನ್ನೆಲೆಗೆ ಬಂದಿರಲಿಲ್ಲ. ಆ ಸರಣಿಯ ವಿಡಿಯೊಗಳನ್ನು ನೋಡಿ ಭರತ್ ಅರುಣ್ ರೂಪಿಸಿರಬಹುದಾದ ತಂತ್ರ ಅನಾವರಣಗೊಂಡದ್ದು ಮೊನ್ನೆ ಮೊನ್ನೆ ಆಸ್ಟ್ರೇಲಿಯನ್ನರನ್ನು ಭಾರತದ ವೇಗಿಗಳು ಕಂಗೆಡಿಸಿದಾಗ. ಭರತ್ ಅರುಣ್‌ಗೆ ನ್ಯೂಜಿಲೆಂಡ್‌ನ ವೇಗಿ ನೀಲ್ ವ್ಯಾಗ್ನರ್ ಹಲವು ಟಿಪ್ಸ್‌ ಕೊಟ್ಟಿರಲಿಕ್ಕೆ ಸಾಕು.

ವ್ಯಾಗ್ನರ್ ಎಡಗೈ ವೇಗಿ. ಆಡಲು ಪ್ರಾರಂಭಿಸಿ ಒಂಬತ್ತು ವರ್ಷಗಳೇ ಉರುಳಿವೆ. ನ್ಯೂಜಿಲೆಂಡ್‌ನ ಟಿಮ್ ಸೌಥಿ, ಟ್ರೆಂಟ್ ಬೋಲ್ಟ್ ತರಹದ ವೇಗದ ಮಷಿನ್‌ಗಳ ಪ್ರಭಾವಳಿಯಲ್ಲಿ ಕಂಡೂ ಕಾಣದಂತೆ ಇರುವವರು ಅವರು. ಆ ತಂಡ ಅವರನ್ನು ಏಕದಿನದ ಪಂದ್ಯಗಳಲ್ಲಿ ಆಡಿಸುವುದಿಲ್ಲ. ಟ್ವೆಂಟಿ20 ಕಣ್ಮಣಿಯಂತೂ ಅವರಲ್ಲ. ಆದರೆ, ಟೆಸ್ಟ್‌ ಪಂದ್ಯಗಳೆಂದರೆ ಅವರನ್ನು ಕಣ್ಮುಚ್ಚಿಕೊಂಡು ಆಯ್ಕೆದಾರರು ನಾಲ್ಕನೇ ಬೌಲರ್ ರೂಪದಲ್ಲಿ ಹೆಕ್ಕುತ್ತಾರೆ. ಅದಕ್ಕೆ ಇರುವ ಕಾರಣವೆಂದರೆ, ಅವರು ದಣಿಯದೆ ಸುದೀರ್ಘ ಸ್ಪೆಲ್‌ಗಳನ್ನು ಹಾಕಬಲ್ಲರೆಂಬುದು. ಆಸ್ಟ್ರೇಲಿಯಾ ಎದುರಿನ ಸರಣಿ ಅದರ ಪ್ರಾತ್ಯಕ್ಷಿಕೆಯಂತೆ ಇತ್ತು. ಉಭಯ ತಂಡಗಳ ಯಾವ ಬೌಲರ್ ಕೂಡ ವ್ಯಾಗ್ನರ್ ಅವರಷ್ಟು ಎಸೆತಗಳನ್ನು ಆ ಸರಣಿಯಲ್ಲಿ ಬೌಲ್ ಮಾಡಲಿಲ್ಲ. 157 ಓವರ್‌ಗಳನ್ನು ಅರ್ಥಾತ್ ಎಕ್ಸ್‌ಟ್ರಾ ಸೇರಿ 945 ಎಸೆತಗಳನ್ನು ಅವರು ಆ ಸರಣಿಯಲ್ಲಿ ಹಾಕಿದರು. 17 ವಿಕೆಟ್‌ಗಳನ್ನು ಕಿತ್ತರು (ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆ ಸರಣಿಯಲ್ಲಿ ಎರಡನೇ ಬೌಲರ್). ವಾರ್ನರ್ ಹಾಗೂ ಸ್ಮಿತ್ ಇಬ್ಬರೂ ನಾಲ್ಕು ಸಲ ಅವರಿಗೆ ಔಟಾದದ್ದು ಈ ಬೌಲರ್‌ನ ಮನೋಬಲ, ದೈಹಿಕ ಕ್ಷಮತೆಗೆ ಸಾಕ್ಷಿ. ಲಾಬುಷೇನ್ ಕೂಡ ಎರಡು ಸಲ ವ್ಯಾಗ್ನರ್ ಬಲೆಗೆ ಬಿದ್ದಿದ್ದರು.

ಆ ಸರಣಿಯಲ್ಲಿ ವ್ಯಾಗ್ನರ್ ಶಾರ್ಟ್‌ಪಿಚ್ ತಂತ್ರಗಳನ್ನು ಪ್ರಯೋಗಿಸಿದ್ದರು. ಮಿಡ್ಲ್ ಸ್ಟಂಪ್ ಹಾಗೂ ಲೆಗ್‌ಸ್ಟಂಪ್‌ ಅನ್ನೇ ಗುರಿ ಮಾಡಿ ಅವರು ಸ್ಮಿತ್, ಲಾಬುಷೇನ್‌ಗೆ ಬೌಲಿಂಗ್ ಮಾಡುತ್ತಿದ್ದರು. ವಾರ್ನರ್‌ ಕೂಡ ಪುಲ್, ಹುಕ್ ಮಾಡುವ ಪ್ರಯತ್ನಕ್ಕೆ ಕೈಹಾಕಿ ಅನೇಕ ಸಲ ತಿರುಗೇಟು ತಿಂದಿದ್ದಿದೆ. ಈ ಮೂವರು ಹಾಗೂ ನೇಥನ್ ಲಯಾನ್ ಒಂದು ಇನಿಂಗ್ಸ್‌ನಲ್ಲಿ ವ್ಯಾಗ್ನರ್‌ ಕೂರಂಬುಗಳಂಥ ಎಸೆತಗಳನ್ನು ಕಂಡು ದಿಗ್ಭ್ರಾಂತರಾದದ್ದನ್ನು ನೋಡಿದರೆ ಭಾರತದ ಗೆಲುವಿನ ಹಿಂದಿನ ತಂತ್ರ ಅರಿವಿಗೆ ಬರುತ್ತದೆ.

ನೀಲ್ ವ್ಯಾಗ್ನರ್
ನೀಲ್ ವ್ಯಾಗ್ನರ್

ಇದುವರೆಗೆ 51 ಟೆಸ್ಟ್‌ ಪಂದ್ಯಗಳನ್ನು ಆಡಿರುವ ವ್ಯಾಗ್ನರ್ 219 ವಿಕೆಟ್‌ಗಳನ್ನು ಪಡೆದಿರುವುದು ಎಷ್ಟೋ ಜನರಿಗೆ ಗೊತ್ತಿಲ್ಲ. ಯಾಕೆಂದರೆ, ಟೆಸ್ಟ್‌ ಕ್ರಿಕೆಟ್‌ನ ಬ್ಯಾಟರ್‌ಗಳ ವಿಷಯದಲ್ಲಿ ಪೂಜಾರ ಹೇಗೋ, ಬೌಲರ್‌ಗಳ ಸಾಲಿನಲ್ಲಿ ವ್ಯಾಗ್ನರ್ ಹಾಗೆ. ಅವರು ಮೂರನೇ ರ‍್ಯಾಂಕಿಂಗ್‌ವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಏರಿದ ಪ್ರತಿಭಾವಂತ.

ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಹುಟ್ಟಿದ ವ್ಯಾಗ್ನರ್ ಆಮೇಲೆ ನ್ಯೂಜಿಲೆಂಡ್‌ಗೆ ವಲಸೆ ಬಂದು, ಅಲ್ಲೇ ಕ್ರಿಕೆಟ್ ಬದುಕು ಕಟ್ಟಿಕೊಂಡರು. ಅವರಿಗೀಗ 34 ವಯಸ್ಸು. ಫಿಟ್‌ನೆಸ್‌ ನೋಡಿದರೆ ಎಂಥವರೂ ದಂಗಾಗಬೇಕು. ಅವರ ಫಿಟ್‌ನೆಸ್‌ ಟ್ರೈನಿಂಗ್ ಕಥನ ಕೂಡ ಕುತೂಹಲಕಾರಿ.

ಸಾಮಾನ್ಯವಾಗಿ ಬೌಲರ್‌ಗಳು ಎಸೆತಗಳ ಸ್ವಿಂಗ್, ಲೈನ್ ಹಾಗೂ ವೇಗದಲ್ಲಿನ ವೈವಿಧ್ಯದ ತರಬೇತಿಗೆ ಹೆಚ್ಚು ಒತ್ತುನೀಡುತ್ತಾರೆ. ವ್ಯಾಗ್ನರ್ ಇವೆಲ್ಲದರ ಜತೆಗೆ ಓಟದ ನಿಯಮಿತ ಅಭ್ಯಾಸ ನಡೆಸುವುದು ವಿಶೇಷ. 100 ಮೀಟರ್‌ ಓಡಿ ಒಂದು ನಿಮಿಷ ವಿರಮಿಸಿ, ಮತ್ತೆ 200 ಮೀಟರ್‌ ಓಡಿ ಒಂದು ನಿಮಿಷ ವಿರಮಿಸಿ, ಅದಾದ ಮೇಲೆ ನಾನ್ನೂರು ಮೀಟರ್ ಓಡಿ ಒಂದು ನಿಮಿಷ ವಿರಮಿಸಿ... ಹೀಗೆ ವಾರಕ್ಕೆ ಮೂರು ನಾಲ್ಕು ದಿನ ಅವರು ಓಟದ ತರಬೇತಿ ಪಡೆಯುತ್ತಾರೆ. ಬೆಟ್ಟಗಳನ್ನು ಹತ್ತುವ ಸವಾಲನ್ನೂ ಓಡುತ್ತಲೇ ಎದುರಿಸುವುದರಲ್ಲಿಯೂ ಅವರು ನಿಷ್ಣಾತರು. ಇದರಿಂದಾಗಿಯೇ ಅವರು ಸೂಪರ್ ಫಿಟ್. ಭಾರತದ ವೇಗಿಗಳು ಸ್ನಾಯುಸೆಳೆತ, ಪಕ್ಕೆಲುಬು ನೋವು, ಬೆನ್ನು ನೋವು ಎಂದೆಲ್ಲ ಸಮಸ್ಯೆಗೆ ಒಳಗಾಗುತ್ತಿರುವ ಈ ದಿನಗಳಲ್ಲಿ ವ್ಯಾಗ್ನರ್ ಫಿಟ್‌ನೆಸ್‌ ಮಂತ್ರ ಅನುಕರಣೀಯವೂ ಆಗಬಲ್ಲದು. ಬಹುಶಃ ಮುಂದೆ ಭರತ್ ಅರುಣ್ ಆ ತಂತ್ರವನ್ನೂ ತರಬೇತಿಯಲ್ಲಿ ಅಳವಡಿಸಿಕೊಂಡಾರು.

ಭಾರತವು ಸರಣಿ ಗೆದ್ದಮೇಲೆ ವ್ಯಾಗ್ನರ್ ಹೇಗೆಲ್ಲ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು ಎಂಬ ವಿಡಿಯೊಗಳು ಹರಿದಾಡಿದವು. ಭಾರತದ ಕೋಚ್ ರವಿಶಾಸ್ತ್ರಿ ಆ ಸರಣಿಯನ್ನು ನೋಡಿದ ಮೇಲೆಯೇ ಆಸ್ಟ್ರೇಲಿಯನ್ನರಿಗೆ ಆಫ್‌ಸೈಡ್‌ ಫೀಲ್ಡ್‌ ಸೆಟ್‌ ಮಾಡುವ ಅಗತ್ಯವೇ ಇಲ್ಲ ಎಂದು ಭರತ್ ಕೋಚ್ ಜತೆ ಸಂವಾದ ನಡೆಸಿದ್ದ ಸಂಗತಿಯೂ ಅನಾವರಣಗೊಂಡಿತು. ಇದರ ಫಲವೇ ಸ್ಟೀವ್‌ ಸ್ಮಿತ್‌ ಭಾರತದ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ತಡಕಾಡಿದ್ದು. ಅವರು ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್) ಕ್ರಿಕೆಟ್‌ ನಡೆದಾಗಲೂ ಹಳೆಯ ಲಯಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ವಿಲಕ್ಷಣ ಫುಟ್‌ವರ್ಕ್‌ನಿಂದ ಎದುರಾಳಿಗಳ ಕೆಲವು ವರ್ಷಗಳಿಂದ ಕಂಗೆಡಿಸಿರುವ ಸ್ಮಿತ್‌ ಇನ್ನು ಮುಂದೆ ಎಂತಹ ಪ್ರತಿತಂತ್ರ ಅಳವಡಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಿರಾಜ್ ಓಡುತ್ತಿರುವಾಗ ಗಾಳಿಗೂ ಅವರ ಕಟ್ಟಿದ ಉದ್ದನೆಯ ತಲೆಗೂದಲಿಗೂ ನಡುವೆ ಸಂಘರ್ಷವೊಂದು ನಡೆಯುತ್ತಿರುವಂತೆ ಭಾಸವಾಯಿತು. ಬಹುಶಃ ವ್ಯಾಗ್ನರ್ ದಣಿವರಿಯದೆ ಓಡುವ ವೇಗ ಕಂಡರೆ ಸಿರಾಜ್ ಒಪ್ಪವಾದ ಕೂದಲು ಕೂಡ ಅತ್ತಿತ್ತಲಾದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT