ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ರೈಲ್ವೆ ಮಹಿಳೆಯರಿಗೆ ರಾಷ್ಟ್ರೀಯ ಏಕದಿನ ಟ್ರೋಫಿ

ಮಿಥಾಲಿ ರಾಜ್ ಬಳಗದ ಸ್ನೇಹಾ ರಾಣಾ ಆಲ್‌ರೌಂಡ್ ಆಟ; ಮೇಘನಾ, ಪೂನಂ ಅರ್ಧಶತಕ
Last Updated 4 ಏಪ್ರಿಲ್ 2021, 13:58 IST
ಅಕ್ಷರ ಗಾತ್ರ

ರಾಜ್‌ಕೋಟ್‌ (ಗುಜರಾತ್‌): ಜಾರ್ಖಂಡ್ ಮಹಿಳಾ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ರೈಲ್ವೇಸ್ ಮಹಿಳೆಯರು ರಾಷ್ಟ್ರೀಯ ಏಕದಿನ ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ನಡೆದ ಫೈನಲ್‌ನಲ್ಲಿ 168 ರನ್‌ಗಳ ಗೆಲುವಿನ ಗುರಿ ಮುಟ್ಟಲು ರೈಲ್ವೇಸ್ ತೆಗೆದುಕೊಂಡಿದ್ದು 37 ಓವರ್‌ ಮಾತ್ರ.

ಈ ಗೆಲುವಿನೊಂದಿಗೆ ತಂಡ 12ನೇ ಬಾರಿ ಚಾಂಪಿಯನ್ ಆಯಿತು. ಇದು ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯ 14ನ ಆವೃತ್ತಿಯಾಗಿದೆ. ರೈಲ್ವೇಸ್ ಈ ವರೆಗೆ ಫೈನಲ್‌ ಪ್ರವೇಶಿಸಿದ ಎಲ್ಲ ಆವೃತ್ತಿಯಲ್ಲೂ ಪ್ರಶಸ್ತಿ ಗೆದ್ದುಕೊಂಡಿದೆ.

ಆರಂಭಿಕ ಬ್ಯಾಟರ್ ಎಸ್‌.ಮೇಘನಾ (53; 67 ಎಸೆತ, 6 ಬೌಂಡರಿ) ಮತ್ತು ಅಂತರರಾಷ್ಟ್ರೀಯ ಆಟಗಾರ್ತಿ ಪೂನಂ ರಾವತ್ (59‍;94 ಎ) ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. 22 ಎಸೆತಗಳಲ್ಲಿ 34 ರನ್ ಗಳಿಸಿದ ಸ್ನೇಹಾ ರಾಣಾ ಮತ್ತು ಔಟಾಗದೆ 19 ರನ್‌ ಗಳಿಸಿದ ಮೋನಾ ಮೇಶ್ರಮ್‌ ಸುಲಭ ಜಯಕ್ಕೆ ಕಾರಣರಾದರು. ಆಫ್‌ ಬ್ರೇಕ್ ಬೌಲರ್ ಕೂಡ ಆಗಿರುವ ಸ್ನೇಹಾ 34 ರನ್‌ಗಳಿಗೆ ಮೂರು ವಿಕೆಟ್‌ ಕೂಡ ಕಬಳಿಸಿದರು. ‌

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಜಾರ್ಖಂಡ್‌ ತಂಡಕ್ಕೆ ಯಾವ ಹಂತದಲ್ಲೂ ರೈಲ್ವೇಸ್ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಲು ಆಗಲಿಲ್ಲ. ಐವರು ಸ್ಪಿನ್ನರ್‌ಗಳು ಒಳಗೊಂಡಂತೆ ಆರು ಮಂದಿ ಬೌಲರ್‌ಗಳೊಂದಿಗೆ ರೈಲ್ವೇಸ್‌ ಕಣಕ್ಕೆ ಇಳಿದಿತ್ತು. ಜಾರ್ಖಂಡ್‌ನ ಆರು ಬ್ಯಾಟರ್‌ಗಳು ಎರಡಂಕಿ ಮೊತ್ತವನ್ನೂ ದಾಟಲಾಗದೆ ವಾಪಸಾದರು. ಈ ಪೈಕಿ ಮೂವರು ಶೂನ್ಯಕ್ಕೆ ಔಟಾದರು.

ಮಧ್ಯಮ ವೇಗಿ ಮೇಘನಾ ಸಿಂಗ್ ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ರಿತು ಕುಮಾರಿ ಮತ್ತು ರಾಧೇ ಸೋನಿಯಾ ಅವರನ್ನು ಶೂನ್ಯಕ್ಕೆ ವಾಪಸ್ ಕಳುಹಿಸಿ ಜಾರ್ಖಂಡ್‌ಗೆ ಪೆಟ್ಟು ನೀಡಿದರು. ಇಂದ್ರಾಣಿ ರಾಯ್ 77 ಎಸೆತಗಳಲ್ಲಿ 49 ರನ್ ಗಳಿಸಿದರು. ದುರ್ಗಾ ಮುರ್ಮು ಮತ್ತು ನಾಯಕಿ ಮಣಿ ನಿಹಾರಿಕಾ ಸ್ವಲ್ಪ ಪ್ರತಿರೋಧ ತೋರಿದರು.

39ನೇ ಓವರ್‌ ಮುಕ್ತಾಯದ ವೇಳೆ 5 ವಿಕೆಟ್‌ಗಳಿಗೆ 130 ರನ್ ಗಳಿಸಿದ್ದ ತಂಡ 200 ರನ್ ಗಳಿಸುವ ಭರವಸೆ ಮೂಡಿಸಿತ್ತು. ಆದರೆ ಕೊನೆಯ ಐದು ವಿಕೆಟ್‌ಗಳು ಕೇವಲ 37 ರನ್‌ಗಳಿಗೆ ಪತನಗೊಂಡವು.

ಸಂಕ್ಷಿಪ್ತ ಸ್ಕೋರು:

ಜಾರ್ಖಂಡ್‌: 50 ಓವರ್‌ಗಳಲ್ಲಿ 167 (‌ರಶ್ಮಿ 19, ಇಂದ್ರಾಣಿ ರಾಯ್ 49, ದುರ್ಗಾ ಮುರ್ಮು 31, ಮಣಿ ನಿಹಾರಿಕಾ 39; ಮೇಘನಾ ಸಿಂಗ್ 22ಕ್ಕೆ2, ಏಕ್ತಾ ಬಿಷ್ಠ್‌ 33ಕ್ಕೆ2, ಪೂನಂ ಯಾದವ್‌ 26ಕ್ಕೆ1, ಸ್ವಾಗತಿಕಾ ರಥ್‌ 28ಕ್ಕೆ1, ಸ್ನೇಹಾ ರಾಣಾ 33ಕ್ಕೆ3)

ರೈಲ್ವೇಸ್‌: 37 ಓವರ್‌ಗಳಲ್ಲಿ 3ಕ್ಕೆ 169 (ಮೇಘನಾ ಸಿಂಗ್‌ 53, ಪೂನಂ ರಾವತ್ 59, ಸ್ನೇಹಾ ರಾಣಾ 34; ದೇವಯಾನಿ 36ಕ್ಕೆ2). ಫಲಿತಾಂಶ: ರೈಲ್ವೇಸ್‌ಗೆ ಏಳು ವಿಕೆಟ್‌ಗಳ ಜಯ; ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT