ಒಂದೇ ದಿನ 22 ವಿಕೆಟ್‌ ಕಬಳಿಸಿದ ಮೋತಿಭಾಗ್!

7
ರಣಜಿ ಕ್ರಿಕೆಟ್: ಸಂಕಷ್ಟದಲ್ಲಿ ಕರ್ನಾಟಕ ತಂಡ; ಬರೋಡಾಗೆ ಇನಿಂಗ್ಸ್‌ ಮುನ್ನಡೆ

ಒಂದೇ ದಿನ 22 ವಿಕೆಟ್‌ ಕಬಳಿಸಿದ ಮೋತಿಭಾಗ್!

Published:
Updated:
Prajavani

ವಡೋದರ: ಇಲ್ಲಿಯ ಮೋತಿಭಾಗ್ ಅಂಗಳದಲ್ಲಿ ಸೋಮವಾರ ಒಂದೇ ದಿನ 22 ವಿಕೆಟ್‌ಗಳು ಪತನವಾದವು. ಈ ಭರಾಟೆಯಲ್ಲಿ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಮುಗ್ಗರಿಸಿ ಬಿದ್ದಿತು!

ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ಗುಂಪಿನ ಕೊನೆಯ ಸುತ್ತಿನ ಪಂದ್ಯದಲ್ಲಿ ಲಕ್ಮನ್ ಮೆರಿವಾಲಾ (22ಕ್ಕೆ3) ಮತ್ತು ಭಾರ್ಗವ್ ಭಟ್ (27ಕ್ಕೆ3) ಅವರ ಬೌಲಿಂಗ್‌ಗೆ ಕರ್ನಾಟಕವು ತತ್ತರಿಸಿತು. ಊಟದ ವಿರಾಮಕ್ಕೂ ಮುನ್ನವೇ 31.2 ಓವರ್‌ಗಳಲ್ಲಿ112 ರನ್‌ ಗಳಿಸಿ ಆಲೌಟ್‌ ಆಯಿತು. ಸ್ಪಿನ್ನರ್‌ಗಳ ಎಸೆತಗಳಿಗೆ ಉತ್ತಮ ತಿರುವು ಲಭಿಸುತ್ತಿದ್ದ ಪಿಚ್‌ನಲ್ಲಿ ಬರೋಡಾ ಕೂಡ ಆರಂಭದಲ್ಲಿಯೇ ಪೆಟ್ಟು ತಿಂದಿತು. ಆದರೆ, ವಿಷ್ಣು ಸೋಳಂಕಿ (69 ರನ್) ಮತ್ತು ದೀಪಕ್ ಹೂಡಾ (51) ಅವರ ಅರ್ಧಶತಕಗಳ ಬಲದಿಂದ 51 ಓವರ್‌ಗಳಲ್ಲಿ 223 ರನ್‌ ಗಳಿಸಿತು. ಇದರೊಂದಿಗೆ 111 ರನ್‌ಗಳ ಮುನ್ನಡೆ ಸಾಧಿಸಿತು. ಸಂಜೆಯ ಹೊತ್ತಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡವು ನಾಲ್ಕು ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 13 ರನ್‌ ಗಳಿಸಿತು. ಕೆ.ವಿ. ಸಿದ್ಧಾರ್ಥ್ (ಬ್ಯಾಟಿಂಗ್ 11) ಮತ್ತು ಅನುಭವಿ ಆಟಗಾರ ಕರುಣ್ ನಾಯರ್ (ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದಾರೆ.

ಇನ್ನೂ 98 ರನ್‌ಗಳ ಬಾಕಿಯನ್ನು ಚುಕ್ತಾ ಮಾಡಬೇಕು. ಆದರೆ ಬೆಳಗಿನ ಅವಧಿಯಲ್ಲಿ ಇಲ್ಲಿ ಬ್ಯಾಟಿಂಗ್ ಮಾಡುವುದು ಕಠಿಣ ಸವಾಲಾಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡಕ್ಕೆ ಮಧ್ಯಮವೇಗಿ ರಿಷಿ ಅರೋತೆ ಎರಡನೇ ಓವರ್‌ನಲ್ಲಿಯೇ ಪೆಟ್ಟು ನೀಡಿದರು. ಈ ಬಾರಿಯ ಟೂರ್ನಿಯಲ್ಲಿ ಮೂರು ಶತಕ ಬಾರಿಸಿರುವ ಡೇಗಾ ನಿಶ್ಚಲ್ ವಿಕೆಟ್ ಕಬಳಿಸಿದರು.  ತಂಡಕ್ಕೆ ಮರಳಿದ ಆರ್. ಸಮರ್ಥ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅವರಿಗೆ ಲಕ್ಮನ್ ಮೆರಿವಾಲಾ ಪೆವಿಲಿಯನ್ ದಾರಿ ತೋರಿದರು.  ಹೋದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೆ.ವಿ. ಸಿದ್ಧಾರ್ಥ್ ಕೇವಲ ನಾಲ್ಕು ರನ್ ಗಳಿಸಿ ಔಟಾದರು.

ಈ ಪಂದ್ಯದೊಂದಿಗೆ ತಂಡಕ್ಕೆ ಮರುಪ್ರವೇಶ ಮಾಡಿದ ಕರುಣ್ ನಾಯರ್ 12 ಎಸೆತಗಳಲ್ಲಿ 12 ರನ್ ಗಳಿಸಿದರು. ಎರಡು ಬೌಂಡರಿ ಹೊಡೆದ ಅವರು ಭರವಸೆ ಮೂಡಿಸಿದ್ದರು. ಆದರೆ, ಮೆರಿವಾಲಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಾಯಕ ಮನೀಷ್ ಪಾಂಡೆ (43; 70ಎಸೆತ, 5ಬೌಂಡರಿ, 1ಸಿಕ್ಸರ್) ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಆದರೆ ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತಿದರು. ಈ ಪಂದ್ಯದಲ್ಲಿ ಸ್ಥಾನ ಪಡೆದಿರುವ ಬಿ.ಆರ್. ಶರತ್ (30; 34ಎಸೆತ, 5ಬೌಂಡರಿ) ತುಸು ಹೋರಾಟ ಮಾಡಿದರು. ಇದರಿಂದಾಗಿ ತಂಡದ ಮೊತ್ತವು ನೂರರ ಗಡಿ ದಾಟಿತು. ಪದಾರ್ಪಣೆ ಪಂದ್ಯ ಆಡುತ್ತಿರುವ ಶುಭಾಂಗ್ ಹೆಗ್ಡೆ 11 ರನ್‌ ಗಳಿಸಿದರು. ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದ ಅವರು ನಾಲ್ಕು ವಿಕೆಟ್ ಕಬಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !