ಭಾನುವಾರ, ಡಿಸೆಂಬರ್ 8, 2019
20 °C
ರಣಜಿ ಕ್ರಿಕೆಟ್: ಸೋಲು ತಪ್ಪಿಸಲು ಮಹಾರಾಷ್ಟ್ರ ಹೋರಾಟ

ರಣಜಿ ಕ್ರಿಕೆಟ್‌: ಕರ್ನಾಟಕ ತಂಡದ ಬಿಗಿಹಿಡಿತ

Published:
Updated:
Deccan Herald

ಮೈಸೂರು: ಮೊದಲ ಇನಿಂಗ್ಸ್‌ನಲ್ಲಿ ಲಭಿಸಿದ 73 ರನ್‌ಗಳ ಮುನ್ನಡೆಯ ಬಲ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧದ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ ತನ್ನ ಹಿಡಿತ ಬಿಗಿಗೊಳಿಸಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರವೂ ಬೌಲರ್‌ಗಳ ಪ್ರಾಬಲ್ಯ ಮುಂದುವರಿಯಿತು. ಮಹಾರಾಷ್ಟ್ರದ ಮೊದಲ ಇನಿಂಗ್ಸ್‌ ಮೊತ್ತ 113 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ 186 ರನ್‌ ಗಳಿಸಿ ಆಲೌಟಾಯಿತು.

ಮಹಾರಾಷ್ಟ್ರ ತಂಡ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದ್ದು, ದಿನದಾಟದ ಅಂತ್ಯಕ್ಕೆ 34 ಓವರ್‌ಗಳಲ್ಲಿ 3 ವಿಕೆಟ್‌ಗೆ 48 ರನ್‌ ಗಳಿಸಿದೆ. ಈ ತಂಡ 25 ರನ್‌ಗಳ ಹಿನ್ನಡೆಯಲ್ಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯುಳಿದಿದ್ದು, ಆರ್‌.ವಿನಯ್‌ ಕುಮಾರ್‌ ಬಳಗದ ಗೆಲುವಿನ ಕನಸಿಗೆ ಬಲ ಬಂದಿದೆ.

ಆರಂಭಿಕ ಆಘಾತ: ಮೊದಲ ಇನಿಂಗ್ಸ್‌ನಲ್ಲಿ ಎಡವಿದ್ದ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲೂ ಕುಸಿತದ ಹಾದಿ ಹಿಡಿದಿದೆ. ಅಭಿಮನ್ಯು ಮಿಥುನ್‌ ನಾಲ್ಕನೇ ಓವರ್‌ನಲ್ಲಿ ಸ್ವಪ್ನಿಲ್‌ ಗುಗಾಲೆ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಎದುರಾಳಿಗಳಿಗೆ ಮೊದಲ ಆಘಾತ ನೀಡಿದರು.

ಚಿರಾಗ್ ಖುರಾನ ಹಾಗೂ ಜಯ್ ಪಾಂಡೆ ಎರಡನೇ ವಿಕೆಟ್‌ಗೆ 117 ಎಸೆತಗಳಲ್ಲಿ 27 ರನ್‌ ಸೇರಿಸಿ ‘ರಕ್ಷಣಾ ಕಾರ್ಯಾಚರಣೆ’ ನಡೆಸಿದರು. ಆದರೆ ಶ್ರೇಯಸ್ ಗೋಪಾಲ್ ಅವರು ಸತತ ಎರಡು ಓವರ್‌ಗಳಲ್ಲಿ ಇಬ್ಬರನ್ನೂ ಔಟ್‌ ಮಾಡಿ ಕರ್ನಾಟಕಕ್ಕೆ ಮೇಲುಗೈ ತಂದಿತ್ತರು.

ಋತುರಾಜ್‌ ಗಾಯಕ್ವಾಡ್‌ ಮತ್ತು ಸತ್ಯಜೀತ್‌ ಬಚಾವ್‌ ಆ ಬಳಿಕ ಹೆಚ್ಚಿನ ವಿಕೆಟ್‌ ಬೀಳದಂತೆ ನೋಡಿಕೊಂಡು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಕೆಚ್ಚೆದೆಯ ಆಟ: ಬೆಳಿಗ್ಗೆ ಮೂರು ವಿಕೆಟ್‌ಗೆ 70 ರನ್‌ಗಳಿಂದ ದಿನದಾಟ ಮುಂದುವರಿಸಿದ್ದ ಕರ್ನಾಟಕ ಬಹಳ ಪ್ರಯಾಸದಿಂದ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿತು. ಶ್ರೇಯಸ್‌ ಗೋಪಾಲ್ (40) ಮತ್ತು ನಾಯಕ ಆರ್‌.ವಿನಯ್ ಕುಮಾರ್ (26) ಅವರ ಕೆಚ್ಚೆದೆಯ ಬ್ಯಾಟಿಂಗ್‌ ಇದಕ್ಕೆ ಕಾರಣ.

ಗ್ಲೇಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಚೆಂಡು ಒಮ್ಮೊಮ್ಮೆ ನಿರೀಕ್ಷೆಗೂ ಮೀರಿ ಪುಟಿದೇಳುತ್ತಿದ್ದರೆ, ಕೆಲವೊಮ್ಮೆ ತೀರಾ ಕೆಳಮಟ್ಟದಲ್ಲಿ ನುಗ್ಗಿಬರುತ್ತಿತ್ತು. ಇದರಿಂದ ಬ್ಯಾಟಿಂಗ್‌ ಕಷ್ಟಕರ ಎನಿಸಿದೆ.

32 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ್ದ ಡಿ.ನಿಶ್ಚಲ್ ಏಳು ರನ್‌ ಸೇರಿಸಿ ಅನುಮಪ್ ಸಂಕ್ಲೇಚ ಅವರಿಗೆ ವಿಕೆಟ್‌ ಒಪ್ಪಿಸಿದರು. ಪವನ್‌ ದೇಶಪಾಂಡೆ ಮತ್ತು ಜೆ.ಸುಚಿತ್‌ ಅವರೂ ಬೇಗನೇ ಔಟಾದಾಗ ತಂಡ ಒತ್ತಡಕ್ಕೆ ಒಳಗಾಯಿತು.

ಶ್ರೇಯಸ್ ಆಸರೆ: ಒಂದು ಕಡೆಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಶ್ರೇಯಸ್‌ ಸರಿಸುಮಾರು ಮೂರು ಗಂಟೆ ಎದುರಾಳಿ ಬೌಲಿಂಗ್‌ ದಾಳಿಗೆ ಸೆಡ್ಡುಹೊಡೆದು ನಿಂತರು. 100 ಎಸೆತಗಳನ್ನು ತೂಗಿ ನೋಡಿದ ಅವರು ಯಾವ ಹಂತದಲ್ಲೂ ಆಕ್ರಮಣಕಾರಿ ಹೊಡೆತಕ್ಕೆ ಮುಂದಾಗಲಿಲ್ಲ. ಐದು ಬೌಂಡರಿಗಳ ನೆರವಿನಿಂದ ತಮ್ಮ ಇನಿಂಗ್ಸ್‌ ಕಟ್ಟಿದರು.

ಭೋಜನ ವಿರಾಮದ ವೇಳೆಗೆ 7 ವಿಕೆಟ್‌ಗೆ 135 ರನ್‌ ಗಳಿಸಿದ್ದ ಆತಿಥೇಯ ತಂಡ, ಎರಡನೇ ಅವಧಿಯಲ್ಲಿ 14.2 ಓವರ್‌ಗಳಲ್ಲಿ ಆಡಿ ಆಲೌಟ್‌ ಆಯಿತು. ಸ್ಪಿನ್ನರ್‌ ಸತ್ಯಜೀವ್‌ ಬಚಾವ್ ಮೂರು ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು