ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಗೌತಮ್ ಆಕ್ರಮಣ, ಮಧ್ಯಪ್ರದೇಶ ತಲ್ಲಣ

ಮೊದಲ ಇನಿಂಗ್ಸ್‌ನಲ್ಲಿ 426 ರನ್‌ಗಳ ಬೃಹತ್‌ ಮೊತ್ತ ಗಳಿಸಿದ ಕರ್ನಾಟಕ ತಂಡ
Last Updated 5 ಫೆಬ್ರುವರಿ 2020, 17:10 IST
ಅಕ್ಷರ ಗಾತ್ರ
ADVERTISEMENT
""

ಶಿವಮೊಗ್ಗ: ಅತಿ ನಿಧಾನ ಎನ್ನುವಂತೆ ಸಾಗಿದ್ದ ಕರ್ನಾಟಕದ ಮೊದಲ ಇನಿಂಗ್ಸ್‌ನಲ್ಲಿ ಮಿಂಚಿನ ಸಂಚಾರವಾಗುವಂತೆ ಆಡಿದವರು ಕೆ. ಗೌತಮ್. 120.59ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಬಾಚಿದ ಅವರು 18 ರನ್‌ಗಳಿಂದ ಶತಕವಂಚಿತರಾದರು (82; 68 ಎಸೆತ, 7 ಬೌಂಡರಿ, 4 ಸಿಕ್ಸರ್). ಇನ್ನೊಂದು ತುದಿಯಲ್ಲಿ ಅನುಭವಿ ಶ್ರೇಯಸ್ ಗೋಪಾಲ್ ತಾಳ್ಮೆ–ಆಕ್ರಮಣ ಬೆರೆಸಿದ ಬ್ಯಾಟಿಂಗ್‌ನಿಂದ ಅರ್ಧಶತಕ (50; 86 ಎಸೆತ, 7 ಬೌಂಡರಿ) ದಾಖಲಿಸಿದರು.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಧ್ಯಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದ ಎರಡನೇ ದಿನವಾದ ಬುಧವಾರ ಕರ್ನಾಟಕ ಮೊದಲ ಇನಿಂಗ್ಸ್‌ 426 ರನ್‌ಗಳಿಗೆ ಬೆಳೆಯಿತು. ಉತ್ತರವಾಗಿ ದಿನದಾಟ ಮುಗಿದಾಗ ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 60 ರನ್ ಗಳಿಸಿತ್ತು.

ವಿಕೆಟ್ ಹಿಂಬದಿ ನಿಂತಿದ್ದ ನಾಲ್ವರು ಕ್ಷೇತ್ರರಕ್ಷಕರ ಉಸಾಬರಿಯನ್ನೇ ಮರೆತಂತೆ ಅಪ್ಪರ್ ಕಟ್ ಮಾಡಲು ಗೌತಮ್ ಹಿಂದೇಟು ಹಾಕಲಿಲ್ಲ. ಕುಲದೀಪ್ ಸೇನ್ ಮಾಡಿದ 111ನೇ ಓವರ್‌ನಲ್ಲೇ ಅಂಥ ಕಟ್‌ನಿಂದ ಸಿಕ್ಸರ್ ಗಿಟ್ಟಿಸುವ ಮೂಲಕ ತಮ್ಮ ಇರಾದೆ ಸ್ಪಷ್ಟಪಡಿಸಿದರು. ಆಮೇಲಿನದ್ದು ಸಂಪೂರ್ಣ ಆಕ್ರಮಣಕಾರಿ ತಂತ್ರ. ಕುಮಾರ್ ಕಾರ್ತಿಕೇಯ ಸಿಂಗ್ ಅವರ ಎಸೆತವೊಂದನ್ನು ಕ್ರೀಸ್‌ನಿಂದ ಹೊರಬಂದು, ಸ್ಟ್ರೈಟ್‌ಡ್ರೈವ್‌ ಮಾಡಿ ಸಿಕ್ಸರ್‌ಗೆ ಎತ್ತಿದಾಗ ಚೆಂಡು ಕ್ರೀಡಾಂಗಣದ ಹೊರಗೆ ಬಿತ್ತು.

ಗೌತಮ್‌ ಅವರಿಗೇ ಹೆಚ್ಚು ಸ್ಟ್ರೈಕ್ ಕೊಟ್ಟ ಶ್ರೇಯಸ್‌ ಗೋಪಾಲ್, ಆಮೇಲೆ ಸಹಆಟಗಾರನಿಂದ ಪ್ರೇರಣೆ ಪಡೆದವರಂತೆ ಖುದ್ದು ಹೊಡೆತಗಳಿಗೆ ಮುಂದಾದರು. ಅವರಿಂದಲೂ ಕೆಲವು ಸಾಂಪ್ರದಾ
ಯಿಕ ಡ್ರೈವ್‌ಗಳು ನೋಡಲು ಸಿಕ್ಕವು.

ಗೌತಮ್ ಯಾವ ಹಂತದಲ್ಲೂ ರಕ್ಷಣಾತ್ಮಕ ತಂತ್ರ ಪ್ರದರ್ಶಿಸಲೇ ಇಲ್ಲ. ಥರ್ಡ್‌ಮನ್‌ ಹಾಗೂ ಮಿಡ್‌ಆಫ್ ಕ್ಷೇತ್ರರಕ್ಷಕರಿದ್ದ ನಡುವಿನ ಭಾಗಕ್ಕೆ ಅವರು ಹೊಡೆದ ಚೆಂಡು ಹಿಡಿಯಲು ಹೋಗಿ ಯಶ್ ದುಬೆ ಹಾಗೂ ಆದಿತ್ಯ ಶ್ರೀವಾಸ್ತವ ಇಬ್ಬರೂ ಪರಸ್ಪರ ಬಲವಾಗಿ ಡಿಕ್ಕಿ ಹೊಡೆದುಕೊಂಡರು. ಇಬ್ಬರೂ ನೋವಿನಿಂದ ಕೆಲಕ್ಷಣ ಒದ್ದಾಡಿದರಾದರೂ ಆ ಬೌಂಡರಿ ತಡೆಯಲು ಸಾಧ್ಯವಾಗಲಿಲ್ಲ.

ದಿನದ ಆರಂಭ ಮಧ್ಯಪ್ರದೇಶದ ಬೌಲರ್‌ಗಳ ಕಡೆಗೆ ವಾಲಿತ್ತು. ರವಿ ಯಾದವ್ ದಿನದಾಟದ ಐದನೇ ಓವರ್‌ನಲ್ಲೇ ಸಿದ್ಧಾರ್ಥ್ ಅವರನ್ನು ಬೌಲ್ಡ್ ಮಾಡಿದರು. ಮಂಗಳವಾರದ ತಮ್ಮ ಮೊತ್ತಕ್ಕೆ ಸಿದ್ಧಾರ್ಥ್ ಒಂದೂ ರನ್ ಸೇರಿಸಲಿಲ್ಲ. ತಮ್ಮ ಮುಂದಿನ ಓವರ್‌ನಲ್ಲಿ ಸಮರ್ಥ್ (108 ರನ್) ಅವರನ್ನೂ ರವಿ ಎಲ್‌ಬಿಡಬ್ಲ್ಯು ಔಟ್ ಮಾಡಿದಾಗ ವೇಗದ ಬೌಲರ್‌ಗಳು ಪಿಚ್‌ನಲ್ಲಿ ಕಾಡುವ ಸಾಧ್ಯತೆ ಕಾಣಿಸಿತು.

ಶರತ್ ಔಟಾದಾಗ ತಂಡದ ಮೊತ್ತ 282/6. ಆಗ ಕಣಕ್ಕಿಳಿದ ಗೌತಮ್ ಪ್ರವಾಸಿ ತಂಡದ ಕ್ಷೇತ್ರರಕ್ಷಕರಿಗೆ ವಿಪರೀತ ಕೆಲಸ ಕೊಟ್ಟರು. ಪಾದರಸದಂಥ ಅವರ ಆಟದ ಎದುರು ಬೌಲರ್‌ಗಳೂ ಬಸವಳಿದರು. ಮಧ್ಯಪ್ರದೇಶದ ಪರ ರವಿ ಯಾದವ್ ಹಾಗೂ ಕುಮಾರ್ ಕಾರ್ತಿಕೇಯ ಸಿಂಗ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಮುನ್ನುಗ್ಗಿ ನಿಯಂತ್ರಣ ಕಳೆದುಕೊಂಡು, ಆಫ್‌ಸ್ಟಂಪ್‌ನಿಂದ ಸಾಕಷ್ಟು ಆಚೆ ಇದ್ದ ಚೆಂಡನ್ನು ಕೆಣಕಿ ಗೌತಮ್ ಗಲ್ಲಿ ಫೀಲ್ಡರ್‌ಗೆ ಕ್ಯಾಚಿತ್ತರು.

ಮೂವತ್ತೆಂಟು ಬೈ ಸೇರಿ 73 ಇತರೆ ರನ್‌ಗಳು ಬಂದವು. ಮಧ್ಯಪ್ರದೇಶ ಕೀಪರ್‌ ಹಿಮಾಂಶು ಕೀಪಿಂಗ್‌ನಲ್ಲಿ ಚುರುಕಾಗಿದ್ದರೆ ಈ ಮೊತ್ತ ಕಡಿಮೆಯಾಗುತಿತ್ತು.

ಕರ್ನಾಟಕದ ಬೌಲಿಂಗ್ ಚೆನ್ನಾಗಿತ್ತು. ತಾವು ಮಾಡಿದ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಎಡಗೈ ಮಧ್ಯಮ ವೇಗಿ ಪ್ರತೀಕ್‌ ಜೈನ್‌ ಮಧ್ಯಪ್ರದೇಶದ ರಜತ್ ಪಾಟಿದಾರ್ ಅವರನ್ನು ಬೌಲ್ಡ್‌ ಮಾಡಿದರು. ಆರಂಭಿಕ ಆಟಗಾರ ರಮೀಜ್ ಖಾನ್ ಹಾಗೂ ಬ್ಯಾಟಿಂಗ್ ಪ್ರತಿಭಾವಂತ ಯಶ್‌ ದುಬೆ ತಾಳ್ಮೆ ಕಳೆದುಕೊಳ್ಳಲಿಲ್ಲ. ಎರಡೂಕಾಲು ತಾಸು ಆಡಿದ ರಮೀಜ್ (22; 91 ಎಸೆತ, 4 ಬೌಂಡರಿ) ಅವರನ್ನು ಅಭಿಮನ್ಯು ಮಿಥುನ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಬೆಳಗಿನ ಒಂದೆರಡು ತಾಸು ಬೌಲರ್‌ಗಳಿಗೆ ಪಿಚ್‌ನಲ್ಲಿ ನೆರವು ಸಿಗುವ ನಿರೀಕ್ಷೆ ಇದ್ದು, ಗುರುವಾರ ಕರ್ನಾಟಕದ ಆಟ ಕಳೆಗಟ್ಟುವ ಸಾಧ್ಯತೆ ಇದೆ.

ಮತ್ತೆ ಹುಮ್ಮಸ್ಸು ಪಡೆದ ಸಿದ್ಧಾರ್ಥ್‌

ಭುಜದ ಮೂಳೆಯಲ್ಲಿ ಸಣ್ಣ ಬಿರುಕು ಬಂದಿದ್ದರಿಂದ ಮೂರು ತಿಂಗಳು ಕ್ರಿಕೆಟ್‌ ಆಡುವುದರಿಂದ ಹೊರಗುಳಿದಿದ್ದ ಬ್ಯಾಟ್ಸ್‌ಮನ್‌ ಸಿದ್ಧಾರ್ಥ್ ಕೆ.ವಿ. ಅವರಿಗೆ ಅರ್ಧಶತಕ ಗಳಿಸಿದ್ದು ಹುಮ್ಮಸ್ಸು ಮೂಡಿಸಿದೆ.

‘ಇಂಥದೊಂದು ಇನಿಂಗ್ಸ್ ನನಗೆ ಅಗತ್ಯವಿತ್ತು. ಗೌತಮ್ ಸಹಜವಾಗಿ ಆಡಿ ಇಷ್ಟೊಂದು ದೊಡ್ಡ ಮೊತ್ತ ಕೊಟ್ಟಿರುವುದರಿಂದ ಪಂದ್ಯದ ಮೇಲೆ ನಾವು ಹಿಡಿತ ಸಾಧಿಸಿದ್ದೇವೆ. ಇನ್ನೂ ಒಂದೆರಡು ವಿಕೆಟ್‌ಗಳನ್ನು ಎರಡನೇ ದಿನವೇ ಪಡೆಯುವ ನಿರೀಕ್ಷೆ ಇತ್ತು. ಗುರುವಾರ ಬೆಳಿಗ್ಗೆ ಮೇಲುಗೈ ನಮ್ಮದಾಗಲಿದೆ’ ಎಂದು ಸಿದ್ಧಾರ್ಥ್ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT