ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌: ಎಂಟರ ಘಟ್ಟಕ್ಕೆ ಮಯಂಕ್ ಪಡೆ

ಕರ್ನಾಟಕ–ಚಂಡೀಗಢ ನಡುವಿನ ಪಂದ್ಯ ಡ್ರಾ
Published 20 ಫೆಬ್ರುವರಿ 2024, 5:04 IST
Last Updated 20 ಫೆಬ್ರುವರಿ 2024, 5:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಗೆದ್ದು ಪೂರ್ಣ ಅಂಕ ಗಳಿಸುವ ಕರ್ನಾಟಕದ ಆಸೆಗೆ ಚಂಡೀಗಢದ ಕೆಳ ಮಧ್ಯಮ ಕ್ರಮಾಂಕದ ಆಟಗಾರರಾದ ಮಯಂಕ್ ಸಿಧು (ಔಟಾಗದೇ 56), ಕರಣ್‌ ಕೈಲಾ (ಔಟಾಗದೇ 25) ದಿಟ್ಟ ಆಟದ ಮೂಲಕ ಅಡ್ಡಿಯಾದರು. ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. 

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಾಲ್ಕನೇ ದಿನದಾಟದಲ್ಲಿ ಚಂಡೀಗಢ ತಂಡವನ್ನು ಆಲೌಟ್ ಮಾಡಿ ಇನಿಂಗ್ಸ್‌ ಗೆಲುವು ಸಾಧಿಸುವ ಆತಿಥೇಯ ತಂಡದ ಲೆಕ್ಕಾಚಾರ ಕೈಗೂಡಲಿಲ್ಲ. 296 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ತಂಡ ಮೂರು ಅಂಕಕ್ಕೆ ಸಮಾಧಾನ ಪಡಬೇಕಾಯಿತು.

ಕರ್ನಾಟಕ ತಂಡ ‘ಸಿ’ ಗುಂಪಿನಲ್ಲಿ 27 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ತಮಿಳುನಾಡು (28 ಅಂಕ) ಅಗ್ರಸ್ಥಾನ ಗಳಿಸಿತು. ಈ ಎರಡೂ ತಂಡಗಳು ‘ಸಿ’ ಗುಂಪಿನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದವು.

ಕರ್ನಾಟಕ ಫೆಬ್ರುವರಿ 23ರಿಂದ 27ರವರೆಗೆ ನಾಗಪುರದಲ್ಲಿ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಫೆ.23ರಂದು ವಿದರ್ಭ ತಂಡವನ್ನು ಎದುರಿಸಲಿದೆ. ವಿದರ್ಭ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ದಿಟ್ಟ ಹೋರಾಟ:

ಮಯಂಕ್‌ ಸಿಧು ಮತ್ತು ಆಲ್‌ರೌಂಡರ್ ಕರಣ್ ಅವರ ಮಹತ್ವದ ಜತೆಯಾಟ ಚಂಡೀಗಢ ತಂಡಕ್ಕೆ ಸೋಲು ತಪ್ಪಿಸಿತು. 174 ಎಸೆತಗಳನ್ನು ಎದುರಿಸಿದ ಈ ಜೋಡಿ ಮುರಿಯದ ಆರನೇ ವಿಕೆಟ್ ಜತೆಯಾಟದಲ್ಲಿ 61 ರನ್ ಸೇರಿಸಿತು.

ಚಂಡೀಗಢ ತಂಡ 80 ಓವರ್‌ಗಳಲ್ಲಿ 5 ವಿಕೆಟ್‌ಗೆ 236 ರನ್‌ ಗಳಿಸಿದ್ದ ವೇಳೆ ಉಭಯ ನಾಯಕರು ‘ಡ್ರಾ’ಕ್ಕೆ ಒಪ್ಪಿಕೊಂಡರು. ಆಗ ದಿನದಾಟದಲ್ಲಿ ಇನ್ನೂ 21 ಓವರ್‌ಗಳು ಬಾಕಿ ಇದ್ದವು.

131 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮಯಂಕ್ ಸಿಧು 165 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಬೇರೂರಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಮೊದಲ ಅರ್ಧಶತಕ. ಅವರಿಗೆ ಬೆಂಬಲ ನೀಡಿದ ಕರಣ್‌ ಕೈಲಾ ಅತ್ಯುಪಯುಕ್ತ ಅಜೇಯ 25 ರನ್ ಗಳಿಸಿದರು. ಅವರು ಪ್ರಥಮ ಇನಿಂಗ್ಸ್‌ನಲ್ಲಿ 79 ರನ್‌ ಗಳಿಸಿದ್ದರು.

ಇದಕ್ಕೂ ಮುನ್ನ ವಿಕೆಟ್‌ ನಷ್ಟವಿಲ್ಲದೇ 61 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಚಂಡೀಗಢಕ್ಕೆ ಮೊದಲ ಎಸೆತದಲ್ಲೇ ಶಿವಂ ಭಾಂಬ್ರಿ (33) ಅವರನ್ನು ಎಲ್‌ಬಿ ಬಲೆಗೆ ಕೆಡವಿದ ಆಫ್‌ ಸ್ಪಿನ್ನರ್ ಕೆ.ಶಶಿಕುಮಾರ್ ಪೆಟ್ಟು ಕೊಟ್ಟರು.

ಈ ಹಂತದಲ್ಲಿ ನಾಯಕ ಮನನ್‌ ವೋಹ್ರಾ ಜತೆಗೂಡಿದ ಅರ್ಸ್ಲಾನ್ ಖಾನ್‌ ಎರಡನೇ ವಿಕೆಟ್‌ಗೆ 61 (67) ರನ್ ಕಲೆಹಾಕಿ ಕುಸಿತ ತಡೆದರು. ಜವಾಬ್ದಾರಿಯುತ ಆಟವಾಡುತ್ತಿದ್ದ ವೋಹ್ರಾ 23 (53 ಎಸೆತ) ಶಾರ್ಟ್‌ಲೆಗ್‌ನಲ್ಲಿದ್ದ ನಿಕಿನ್‌ ಜೋಸ್‌ಗೆ ಕ್ಯಾಚಿತ್ತರು.

ಅರ್ಧಶತಕ ಗಳಿಸಿದ್ದ ಅರ್ಸ್ಲಾನ್ ಖಾನ್‌ (63 ರನ್‌; 90ಎಸೆತ, 4X11) ಅವರನ್ನು ಇನಿಂಗ್ಸ್‌ನ 29ನೇ ಓವರ್‌ನಲ್ಲಿ ಎಲ್‌ಬಿ ಬಲೆಗೆ ಬೀಳಿಸಿದ ವೇಗಿ ವಿ.ಕೌಶಿಕ್‌, ತಮ್ಮ ಮುಂದಿನ ಓವರ್‌ನಲ್ಲಿ ಕುನಾಲ್ ಮಹಾಜನ್‌ ಅವರನ್ನು ಬೌಲ್ಡ್‌ ಮಾಡಿದರು.

ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಚಂಡೀಗಢ ಎದುರಿನ ರಣಜಿ ಪಂದ್ಯದಲ್ಲಿ ಮನನ್ ವೋಹ್ರಾ ಅವರ ಕ್ಯಾಚ್‌ ಹಿಡಿದ ನಿಕಿನ್ ಜೋಸ್ ಅವರನ್ನು ಸಗ ಆಟಗಾರರು ಅಭಿನಂದಿಸಿದರು
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಚಂಡೀಗಢ ಎದುರಿನ ರಣಜಿ ಪಂದ್ಯದಲ್ಲಿ ಮನನ್ ವೋಹ್ರಾ ಅವರ ಕ್ಯಾಚ್‌ ಹಿಡಿದ ನಿಕಿನ್ ಜೋಸ್ ಅವರನ್ನು ಸಗ ಆಟಗಾರರು ಅಭಿನಂದಿಸಿದರು -ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಲಂಚ್‌ ನಂತರ ಕರ್ನಾಟಕ ತಂಡಕ್ಕೆ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಯಿತು. ಕರ್ನಾಟಕ ತಂಡದ ಪರ ವಿ.ಕೌಶಿಕ್‌, ಕೆ.ಶಶಿಕುಮಾರ್‌ ತಲಾ 2 ವಿಕೆಟ್ ಕಬಳಿಸಿದರು.

ಎರಡು ವಿಕೆಟ್ ಪಡೆದ ಕರ್ನಾಟಕ ತಂಡದ ಕೆ.ಶಶಿಕುಮಾರ್‌
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಎರಡು ವಿಕೆಟ್ ಪಡೆದ ಕರ್ನಾಟಕ ತಂಡದ ಕೆ.ಶಶಿಕುಮಾರ್‌ -ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
‘ತಂಡದ ಪ್ರದರ್ಶನ ತೃಪ್ತಿ ತಂದಿದೆ’
‘ಚಂಡೀಗಢದ ವಿರುದ್ಧ ಗೆದ್ದು ಪೂರ್ಣ ಅಂಕ ಗಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು. ಆದರೆ ಒಟ್ಟಾರೆ ತಂಡದ ಪ್ರದರ್ಶನ ತೃಪ್ತಿ ತಂದಿದೆ’ ಎಂದು ಕರ್ನಾಟಕ ತಂಡದ ನಾಯಕ ಮಯಂಕ್ ಅಗರ್‌ವಾಲ್ ಹೇಳಿದರು. ‘ವೇಗಿಗಳು ಸ್ಪಿನ್ನರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. 17 ವರ್ಷದ ಹಾರ್ದಿಕ್‌ ರಾಜ್ ತಂಡದ ಅಗತ್ಯ ಅರಿತು ಬ್ಯಾಟಿಂಗ್ ಮಾಡಿದರು. ವೈಶಾಖ ವಿಜಯಕುಮಾರ್ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದು ನೆರವಾಯಿತು. ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ’ ಎಂದರು. ‘ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ಎದುರಾಳಿ ತಂಡ ಯಾವುದು ಎಂಬುದು ಮುಖ್ಯವಲ್ಲ. ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT