ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಕತ್‌ ಶತಕದ ಮಿಂಚು; ಪಂದ್ಯ ಡ್ರಾ

ರಣಜಿ: ಕೊನೆಯ ದಿನದಾಟದ ‘ಶಾಸ್ತ್ರ’ ಮುಗಿಸಿದ ಉತ್ತರ ಪ್ರದೇಶ, ಇನಿಂಗ್ಸ್‌ ಮುನ್ನಡೆ ಪಡೆದ ಕರ್ನಾಟಕಕ್ಕೆ 3 ಅಂಕ
Last Updated 20 ಡಿಸೆಂಬರ್ 2019, 19:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜನಗರದ ಸುಂದರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಕೊನೆಯ ದಿನದಾಟದ ‘ಶಾಸ್ತ್ರ’ ಮುಗಿಸಿತು. ಪಂದ್ಯ ಡ್ರಾ ಆದ ಕಾರಣ ಇನಿಂಗ್ಸ್‌ ಮುನ್ನಡೆ ಗಳಿಸಿದ್ದ ಕರ್ನಾಟಕ ತಂಡಕ್ಕೆ ಮೂರು ಅಂಕಗಳು ಲಭಿಸಿದವು.

ಶುಕ್ರವಾರ ಮುಕ್ತಾಯವಾದ ನಾಲ್ಕು ದಿನಗಳ ಪಂದ್ಯದಲ್ಲಿ ಉತ್ತರ ಪ್ರದೇಶ ದ್ವಿತೀಯ ಇನಿಂಗ್ಸ್‌ನಲ್ಲಿ 69.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 204 ರನ್‌ ಕಲೆಹಾಕಿತು. ಆರಂಭ ಆಟಗಾರ ಅಲ್ಮಾಸ್ ಶೌಕತ್‌ (ಔಟಾಗದೆ 103, 297 ನಿಮಿಷ, 210 ಎಸೆತ, 14 ಬೌಂಡರಿ, ಒಂದು ಸಿಕ್ಸರ್‌) ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸುತ್ತಿದ್ದಂತೆ ಉಭಯ ತಂಡಗಳ ನಾಯಕರು ಪಂದ್ಯ ‘ಡ್ರಾ’ಕ್ಕೆ ಸಮ್ಮತಿಸಿದರು.

ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 281 ರನ್‌ ಗಳಿಸಿತ್ತು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 321 ರನ್ ಗಳಿಸಿ 40 ರನ್ ಮುನ್ನಡೆ ಸಾಧಿಸಿತ್ತು. ಪಿಚ್‌ ಸ್ಪರ್ಧಾತ್ಮಕವಾಗಿದ್ದರಿಂದ ಮೂರನೇ ದಿನದಾಟದಲ್ಲಿಯೇ ಫಲಿತಾಂಶ ಏನೆಂಬುದು ಖಚಿತವಾಗಿತ್ತು. ಆದ್ದರಿಂದ ಕೊನೆಯ ದಿನದಾಟ ಪೂರ್ತಿ ನಡೆಯಲಿಲ್ಲ.

ಎರಡನೇ ದಿನದಾಟದ ಮೊದಲ ಅವಧಿಯಲ್ಲಿ ಉತ್ತರ ಪ್ರದೇಶ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೊನೆಯ ದಿನವೂ ಬೇಗನೆ ವಿಕೆಟ್‌ ಉರುಳಿಸಿ ಗೆಲುವಿಗಾಗಿ ಪ್ರಯತ್ನಿಸಬೇಕು ಎನ್ನುವ ರಾಜ್ಯ ತಂಡದ ಲೆಕ್ಕಾಚಾರ ಕೈಗೂಡಲು ಎದುರಾಳಿ ತಂಡ ಅವಕಾಶ ಕೊಡಲಿಲ್ಲ. ಮಾಧವ ಕೌಶಿಕ್‌ (45) ಮತ್ತು ಅಕ್ಷದೀಪ್‌ ನಾಥ್‌ (38) ಶೌಕತ್‌ ಆಟಕ್ಕೆ ಉತ್ತಮ ಬೆಂಬಲ
ನೀಡಿದರು.

ವಿಕೆಟ್‌ ಉರುಳಿಸಲು, ರಾಜ್ಯ ತಂಡದ ನಾಯಕ ಕರುಣ್‌ ನಾಯರ್‌ ಮೇಲಿಂದ ಮೇಲೆಬೌಲಿಂಗ್‌ ಬದಲಾವಣೆ ಮಾಡಿದರು. ಬೌಲರ್‌ಗಳು ದಿಕ್ಕು (ಎಂಡ್‌ಗಳನ್ನು) ಬದಲಿಸಿದರೂ ಪ್ರಯೋಜನವಾಗಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದಿದ್ದ ಅಭಿಮನ್ಯು ಮಿಥುನ್‌ ಅವರಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಒಂದೂ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಜಗದೀಶ ಸುಚಿತ್‌, ಶ್ರೇಯಸ್ ಗೋಪಾಲ್‌ ಬೌಲ್‌ ಮಾಡಿದರೂ ಬೇಗನೆ ವಿಕೆಟ್ ಪಡೆಯಲು
ಆಗಲಿಲ್ಲ.

ಆದ್ದರಿಂದ ಉಭಯ ತಂಡಗಳ ಆಟಗಾರರು ಭೋಜನ ವಿರಾಮದ ಬಳಿಕ ಕೊನೆಯ ದಿನದಾಟದ ಕೆಲ ಹೊತ್ತಿನ ‘ಶಾಸ್ತ್ರ’ ಪೂರ್ಣ
ಗೊಳಿಸಿದರು. ಆದ್ದರಿಂದ ರಾಜ್ಯ ತಂಡದ ಗೆಲುವಿನ ‘ದ್ವಿಶತಕ’ದ ಆಸೆ ಇಲ್ಲಿ ಈಡೇರಲಿಲ್ಲ.

ಕರ್ನಾಟಕ ರಣಜಿಯಲ್ಲಿ ಇದುವರೆಗೂ 199 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಹುಬ್ಬಳ್ಳಿಯಲ್ಲಿ ಸತತ ಮೂರನೇ ಡ್ರಾ

ಹುಬ್ಬಳ್ಳಿಯಲ್ಲಿ ಡ್ರಾ ಆದ ಸತತ ಮೂರನೇ ರಣಜಿ ಪಂದ್ಯವಿದು. 2015–16ರಲ್ಲಿ ಕರ್ನಾಟಕ–ದೆಹಲಿ ಮತ್ತು 2016–17ರಲ್ಲಿ ಗುಜರಾತ್–ಮುಂಬೈ ತಂಡಗಳ ನಡುವಿನ ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿದ್ದರು. ವಾಣಿಜ್ಯನಗರಿಯಲ್ಲಿ ಒಟ್ಟಾರೆಯಾಗಿ ಡ್ರಾ ಆದ ಐದನೇ ಪಂದ್ಯವಿದು. 1976–77ರಲ್ಲಿ ಕರ್ನಾಟಕ–ಅಸ್ಸಾಂ ಮತ್ತು 2012–13ರಲ್ಲಿ ಕರ್ನಾಟಕ–ಹರಿಯಾಣ ತಂಡಗಳ ನಡುವಿನ ಪಂದ್ಯಗಳು ಡ್ರಾ ಆಗಿದ್ದವು.


ಕರ್ನಾಟಕದ ಖಾತೆಯಲ್ಲಿ ಒಂಬತ್ತು ಅಂಕ

ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ತಂಡವನ್ನು ಮಣಿಸಿ ಆರು ಅಂಕ ಮತ್ತು ಇಲ್ಲಿ ಉತ್ತರ ಪ್ರದೇಶ ವಿರುದ್ಧ ಡ್ರಾ ಮಾಡಿಕೊಂಡು ಮೂರು ಅಂಕಗಳನ್ನು ಸಂಪಾದಿಸಿತು. ರಾಜ್ಯ ತಂಡದ ಖಾತೆಯಲ್ಲಿ ಒಟ್ಟು ಒಂಬತ್ತು ಅಂಕಗಳಿವೆ.

ರೈಲ್ವೇಸ್‌ ಹಾಗೂ ಕರ್ನಾಟಕದ ಎದುರಿನ ಪಂದ್ಯಗಳಲ್ಲಿ ಇನಿಂಗ್ಸ್‌ ಹಿನ್ನಡೆ ಅನುಭವಿಸಿರುವ ಉತ್ತರ ಪ್ರದೇಶ ತಂಡದ ಖಾತೆಯಲ್ಲಿ ಎರಡು ಅಂಕಗಳು ಇವೆ.

ಸ್ಕೋರ್ ವಿವರ

ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ 281 (111.2 ಓವರ್‌ಗಳು)

ಕರ್ನಾಟಕ ಪ್ರಥಮ ಇನಿಂಗ್ಸ್ 321 (135.5 ಓವರ್‌ಗಳು)

ಉತ್ತರ ಪ್ರದೇಶ ದ್ವಿತೀಯ ಇನಿಂಗ್ಸ್‌ 3 ವಿಕೆಟ್‌ಗೆ 204 (69.1 ಓವರ್‌ಗಳು)

(ಗುರುವಾರದ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 29)

ಅಲ್ಮಾಸ್‌ ಶೌಕತ್‌ ಔಟಾಗದೆ 103

ಮಾಧವ ಕೌಶಿಕ್‌ ಸಿ ದೇವದತ್ತ ಪಡಿಕ್ಕಲ್‌ ಬಿ ಡೇವಿಡ್ ಮಥಯಾಸ್‌ 45

ಅಕ್ಷದೀಪ್‌ ನಾಥ್‌ ಎಲ್‌ಬಿಡಬ್ಲ್ಯು ಬಿ ಶ್ರೇಯಸ್‌ ಗೋಪಾಲ್‌ 38

ಮೊಹಮ್ಮದ್ ಸೈಫ್‌ ಔಟಾಗದೆ 8

ಇತರೆ: (ನೋ ಬಾಲ್‌–5, ಬೈ–4, ಲೆಗ್‌ ಬೈ–1) 10

ವಿಕೆಟ್‌ ಪತನ: 2–82 (ಮಾಧವ; 30.2), 3–159 (ಅಕ್ಷದೀಪ್; 53.5).

ಬೌಲಿಂಗ್‌: ಅಭಿಮನ್ಯು ಮಿಥುನ್‌ 9–5–10–0, ರೋನಿತ್‌ ಮೋರೆ 11.3–3–52–1, ಡೇವಿಡ್ ಮಥಾಯಸ್‌ 10–4–27–1, ಜಗದೀಶ ಸುಚಿತ್‌ 20–4–48–0, ಶ್ರೇಯಸ್ ಗೋಪಾಲ್‌ 18.1–4–61–1, ಕರುಣ್ ನಾಯರ್ 0.3–0–1–0.

ಫಲಿತಾಂಶ: ಪಂದ್ಯ ಡ್ರಾ.

ಕರ್ನಾಟಕ–3 ಅಂಕ, ಉತ್ತರ ಪ್ರದೇಶ –1 ಅಂಕ

ಪಂದ್ಯ ಶ್ರೇಷ್ಠ: ಅಭಿಮನ್ಯು ಮಿಥುನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT