ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಕಠಿಣ ಹಾದಿಯಲ್ಲಿ ಕರುಣ್ ಬಳಗ

ಸಾಧಾರಣ ಮೊತ್ತ ಗಳಿಸಿದ ಕರ್ನಾಟಕ; ಮುನ್ನಡೆಯ ವಿಶ್ವಾಸದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ
Last Updated 22 ಫೆಬ್ರುವರಿ 2020, 19:33 IST
ಅಕ್ಷರ ಗಾತ್ರ
ADVERTISEMENT
""

ಜಮ್ಮು: ಗಾಂಧಿ ಸ್ಮಾರಕ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಯಾವುದೇ ಅಡೆತಡೆ ಇಲ್ಲದೇ ಆಟ ನಡೆಯಿತು. ಕ್ವಾರ್ಟರ್‌ಫೈನಲ್ ಪಂದ್ಯದ ಮೂರನೇ ದಿನದಾಟದ ಕೊನೆಗೆ ಪ್ರವಾಸಿ ಕರ್ನಾಟಕ ತಂಡವು ಕಠಿಣ ಹಾದಿಗೆ ಬಂದು ನಿಂತಿದೆ.

ಪ್ರವಾಸಿ ಜಮ್ಮು–ಕಾಶ್ಮೀರ ತಂಡವು ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯುವ ಭರ್ತಿ ವಿಶ್ವಾಸದಲ್ಲಿದೆ. ಈ ಪಂದ್ಯದ ಮೊದಲ ಎರಡು ದಿನಗಳ ಪಂದ್ಯವು ಮಳೆಗೆ ಕೊಚ್ಚಿಹೋಗಿತ್ತು. ಆದ್ದರಿಂದ ಇನಿಂಗ್ಸ್ ಮುನ್ನಡೆ ಪಡೆಯುವುದೇ ತಂಡಗಳಿಗೆ ಪ್ರಮುಖವಾಗಲಿದೆ.

ಆದರೆ, ಮೂರನೇ ದಿನದಾಟದಲ್ಲಿ ಕರ್ನಾಟಕ ತಂಡವು 69.1 ಓವರ್‌ಗಳಲ್ಲಿ 206 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದ್ದು ಈ ಒತ್ತಡಕ್ಕೆ ಕಾರಣವಾಗಿದೆ. ಅಕೀಬ್ ನಬಿ (45ಕ್ಕೆ3), ಮಜ್ತಾಬಾ ಯೂಸುಫ್ (45ಕ್ಕೆ3) ಮತ್ತು ನಾಯಕ ಪರ್ವೇಜ್ ರಸೂಲ್ (36ಕ್ಕೆ3) ಅವರ ಬೌಲಿಂಗ್ ಅಮೋಘವಾಗಿತ್ತು. ಕರ್ನಾಟಕದ ಕೆ.ವಿ. ಸಿದ್ಧಾರ್ಥ್ (76; 189ಎ,9ಬೌಂ) ಮತ್ತು ಮನೀಷ್ ಪಾಂಡೆ (37; 26ಎಸೆತ, 7ಬೌಂ) ಅವರಿಬ್ಬರೂ ದಿಟ್ಟತನದಿಂದ ಆಡದೇ ಹೋಗಿದ್ದರೆ ತಂಡವು ಇನ್ನೂರರ ಗಡಿಯನ್ನೂ ದಾಟುತ್ತಿರಲಿಲ್ಲ.

ಇದಕ್ಕುತ್ತರವಾಗಿ ಆತಿಥೇಯ ತಂಡವು 34 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 88 ರನ್ ಗಳಿಸಿದೆ. ಮುನ್ನಡೆ ಪಡೆಯಲು 118 ರನ್‌ಗಳ ಅವಶ್ಯಕತೆ ಇದೆ.

ಈ ಮೊತ್ತವನ್ನು ರಸೂಲ್ ಬಳಗವು ಚುಕ್ತಾ ಮಾಡುವ ಮುನ್ನವೇ ಕರ್ನಾಟಕದ ಬೌಲರ್‌ಗಳು ಎಂಟು ವಿಕೆಟ್‌ಗಳನ್ನು ಕಬಳಿಸಬೇಕು. ಆಗ ಮಾತ್ರ ನಾಲ್ಕರ ಘಟ್ಟದ ಕನಸು ಅರಳುತ್ತದೆ.

ಸಿದ್ಧಾರ್ಥ್ ಹೋರಾಟ: ಪಂದ್ಯದ ಮೊದಲ ದಿನ 14 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಶನಿವಾರ ಬೆಳಿಗ್ಗೆ ಆಟ ಮುಂದುವರಿಸಿತು. ಕ್ರೀಸ್‌ನಲ್ಲಿದ್ದ ನಾಯಕ ಕರುಣ್ ನಾಯರ್ (4 ರನ್) ವೈಫಲ್ಯ ಅನುಭವಿಸಿದರು. ಇನ್ನೊಂದು ಬದಿಯಲ್ಲಿದ್ದ ಸಿದ್ಧಾರ್ಥ್ ಇನಿಂಗ್ಸ್ ಕಟ್ಟುವ ಹೊಣೆ ಹೊತ್ತರು. ಕ್ರೀಸ್‌ಗೆ ಬಂದ ಮನೀಷ್ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದರು. ಪ್ರೇಕ್ಷಕರನ್ನು ಮನರಂಜಿಸಿದರು.‌ ಈ ಜೋಡಿಯು ಹತ್ತು ಓವರ್‌ಗಳಲ್ಲಿ 61 ರನ್‌ ಸೇರಿಸಿತು. ಮುಜ್ತಾಬಾ ಯುಸೂಫ್ ಹಾಕಿದ 16ನೇ ಓವರ್‌ನಲ್ಲಿ ಮನೀಷ್ ಔಟ್ ಆಗುವುದರೊಂದಿಗೆ ರನ್‌ ಗಳಿಕೆಗೆ ಕಡಿವಾಣ ಬಿತ್ತು. ತಾಳ್ಮೆಯ ಆಟಕ್ಕೆ ಮೊರೆ ಹೋದ ಸಿದ್ಧಾರ್ಥ್ ಜೊತೆಗೂಡಿದ ಶ್ರೀನಿವಾಸ್ ಶರತ್ (26; 91ಎ) ಕೂಡ ಅವಸರ ಮಾಡಲಿಲ್ಲ.

5ನೇ ವಿಕೆಟ್ ಜೊತೆಯಾಟದಲ್ಲಿ 69 ರನ್ ಗಳಿಸಿದರು. ಚಹಾ ವಿರಾಮದ ವೇಳೆಗೆ ಶರತ್ ಔಟಾಗುವುದರೊಂದಿಗೆ ಕರ್ನಾಟಕದ ದೊಡ್ಡ ಮೊತ್ತದ ಕನಸು ಕಮರಿತು. ಕೆಳಕ್ರಮಾಂಕದಲ್ಲಿ ಜೆ ಸುಚಿತ್ (18) ಮತ್ತು ರೋನಿತ್ ಮೋರೆ (10) ಬಿಟ್ಟರೆ ಉಳಿದವರು ಯಾರೂ ಎರಡಂಕಿ ದಾಟಲಿಲ್ಲ. 66ನೇ ಓವರ್‌ನಲ್ಲಿ ಸಿದ್ಧಾರ್ಥ್ ಕೂಡ ಔಟಾದರು. ಈ ಋತುವಿನಲ್ಲಿ ಸಿದ್ಧಾರ್ಥ್ ಆಡುತ್ತಿರುವ ಐದನೇ ಪಂದ್ಯ ಇದಾಗಿದೆ. ಗಾಯದಿಂದ ಚೇತರಿಸಿಕೊಂಡು ಬಂದ ಮೇಲೆ ಗಳಿಸಿರುವ ಎರಡನೇ ಅರ್ಧಶತಕ ಇದು. ಶಿವಮೊಗ್ಗದಲ್ಲಿ ಮಧ್ಯಪ್ರದೇಶ ಎದುರಿನ ಪಂದ್ಯದಲ್ಲಿ ಅವರು 62 ರನ್ ಗಳಿಸಿದ್ದರು.

ಆತಿಥೇಯ ತಂಡಕ್ಕೆ ಶುಭಂ ಮತ್ತು ಸೂರ್ಯಾಂಶ್ ರೈನಾ ಉತ್ತಮ ಆರಂಭ ನೀಡಿದರು. ಹತ್ತನೇ ಓವರ್ ಬೌಲಿಂಗ್ ಮಾಡಿದ ಆಫ್‌ಸ್ಪಿನ್ನರ್ ಗೌತಮ್ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ರೈನಾ ಬಿದ್ದರು. 22ನೇ ಓವರ್‌ನಲ್ಲಿ ಸುಚಿತ್ ಹೆನನ್ ನಜೀರ್ ವಿಕೆಟ್ ಕಿತ್ತರು. ಇದರಿಂದಾಗಿ ನಾಲ್ಕನೇ ದಿನದಲ್ಲಿಯೂ ಸ್ಪಿನ್ನರ್‌ಗಳೇ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT