ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್ | ‘ಸಮರ್ಥ’ ಆಟಕ್ಕೆ ತಪ್ಪಿದ ಸೋಲು: ಕರ್ನಾಟಕಕ್ಕೆ ಒಂದು ಪಾಯಿಂಟ್

ಜಯದೇವ್ ಬಳಗದ ಕೈತಪ್ಪಿದ ಜಯ; ದೇವದತ್ತ ತಾಳ್ಮೆಯ ಬ್ಯಾಟಿಂಗ್
Last Updated 15 ಜನವರಿ 2020, 6:43 IST
ಅಕ್ಷರ ಗಾತ್ರ

ರಾಜ್‌ಕೋಟ್: ಜಯದೇವ್ ಉನದ್ಕತ್ ಬಳಗದ ಕೈಗಳಿಂದ ಜಯದ ಅವಕಾಶವನ್ನು ಕಿತ್ತುಕೊಳ್ಳುವಲ್ಲಿಆರ್. ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಯಶಸ್ವಿಯಾದರು.

ಇದರಿಂದಾಗಿ ಮಂಗಳವಾರ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 336 ರನ್‌ಗಳ ಭರ್ಜರಿ ಮುನ್ನಡೆ ಗಳಿಸಿದ್ದ ಸೌರಾಷ್ಟ್ರ ಕೇವಲ ಮೂರು ಪಾಯಿಂಟ್ಸ್‌ ಪಡೆಯಿತು. ಒಂದು ಪಾಯಿಂಟ್ ಪಡೆದ ಕರ್ನಾಟಕ ಸಮಾಧಾನದ ನಿಟ್ಟುಸಿರುಬಿಟ್ಟಿತು.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಸಮರ್ಥ್ ಎರಡನೇಇನಿಂಗ್ಸ್‌ನಲ್ಲಿಯೂ ತಾಳ್ಮೆಯ ಬ್ಯಾಟಿಂಗ್ ಮಾಡಿ (74; 159ಎಸೆತ, 10ಬೌಂಡರಿ) ತಂಡದ ಸೋಲು ತಪ್ಪಿಸಿದರು. ಪ್ರವಾಸಿ ಬಳಗ 89 ಓವರ್‌ಗಳಲ್ಲಿ 4ಕ್ಕೆ 220 ರನ್‌ ಗಳಿಸಿ, ದಿನದಾಟವನ್ನು ಪೂರೈಸಿತು.

ಚೇತೇಶ್ವರ್ ಪೂಜಾರ ದ್ವಿಶತಕ ಮತ್ತು ಶೆಲ್ಡನ್ ಜಾಕ್ಸನ್ ಶತಕದ ಬಲ ದಿಂದ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್‌ನಲ್ಲಿ 7ಕ್ಕೆ 581 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಕರ್ನಾಟಕವು 79 ಓವರ್‌ಗಳಲ್ಲಿ 171 ರನ್ ಗಳಿಸಿ ಆಲೌಟ್ ಆಗಿತ್ತು. ಇದರಿಂದಾಗಿ ಫಾಲೋಆನ್‌ ಹೇರಿದ್ದ ಆತಿಥೇಯ ತಂಡವು ಕೊನೆಯ ದಿನದಾಟದಲ್ಲಿ ಗೆದ್ದು ಏಳು ಪಾಯಿಂಟ್ಸ್‌ ಜೀಬಿಗಿಳಿಸಿಕೊಳ್ಳುವ ಛಲದಲ್ಲಿತ್ತು.

ಅನುಭವಿಗಳಾದ ಮಯಂಕ್ ಅಗರವಾಲ್, ಕರುಣ್ ನಾಯರ್, ಮನೀಷ್ ಪಾಂಡೆ, ಕೆ.ಎಲ್. ರಾಹುಲ್, ಕೃಷ್ಣಪ್ಪ ಗೌತಮ್ ಅವರಿಲ್ಲದ ತಂಡದಲ್ಲಿ ಯುವ ಆಟಗಾರರು ಸ್ಥಾನ ಪಡೆದಿದ್ದರು. ಅದರಲ್ಲೂ ಅಂತಿಮ ಹನ್ನೊಂದರಲ್ಲಿ ಅನುಭವಿ ಬೌಲರ್ ಅಭಿಮನ್ಯು ಮಿಥುನ್ ಮತ್ತು ಯುವಪ್ರತಿಭೆ ವಿ. ಕೌಶಿಕ್ ಅವರನ್ನೂ ಕಣಕ್ಕಿಳಿಸಿರಲಿಲ್ಲ. ಹಂಗಾಮಿ ನಾಯಕ ಶ್ರೇಯಸ್ ಗೋಪಾಲ್ ಅವರ ಈ ನಿರ್ಧಾರವು ಮೊದಲೆರಡು ದಿನಗಳಲ್ಲಿ ದುಬಾರಿಯಾಗಿತ್ತು.

ಆರಂಭಿಕ ಜೊತೆಯಾಟದ ಬಲ: ಬೌಲರ್‌ಗಳಿಗೆ ಮೇಲುಗೈ ಸಾಧಿಸಲು ಬೆಳಿಗ್ಗೆಯ ಅವಧಿಯು ಮಹತ್ವದ್ದಾಗಿತ್ತು.

ಆದರೆ ಈ ಅವಧಿಯನ್ನು ಆರಂಭಿಕ ಜೋಡಿ ಆರ್. ಸಮರ್ಥ್ ಮತ್ತು ಬೆಳಗಾವಿಯ ಹುಡುಗ ರೋಹನ್ ಕದಂ (42;132ಎ, 5ಬೌಂ) ಆವರಿಸಿ ಕೊಂಡರು. 43 ಓವರ್‌ಗಳನ್ನು ಆಡಿದ ಇವರಿಬ್ಬರೂ ಸೇರಿಸಿದ್ದು 96 ರನ್‌ಗಳನ್ನು ಮಾತ್ರ. ಕಮಲೇಶ್ ಮಕ್ವಾನಾ ಎಸೆತವನ್ನು ಆಡುವ ಪ್ರಯತ್ನದಲ್ಲಿ ರೋಹನ್ ಎಡವಿದರು. ಹರ್ವಿಕ್ ದೇಸಾಯಿಗೆ ಕ್ಯಾಚಿತ್ತರು.

ಆದರೆ, ಈ ಹಂತದಲ್ಲಿ ಸಮರ್ಥ್ ಜೊತೆಗೆ ಸೇರಿದಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಬೌಲರ್‌ಗಳನ್ನು ಕಾಡಿದರು. ಹೆಚ್ಚು ರನ್‌ಗಳನ್ನು ಗಳಿಸಲಿಲ್ಲ. ಆದರೆ, ಹೆಚ್ಚು ಎಸೆತಗಳನ್ನು ಆಡಿ ಸಮಯ ದೂಡಿದರು.

ಈ ಜೋಡಿಯು ಹತ್ತು ಓವರ್ ಆಡಿ 24 ರನ್‌ ಮಾತ್ರ ಸೇರಿಸಿತು. ಅದರಲ್ಲಿ ಸಮರ್ಥ್ ಪಾಲು 22 ರನ್‌ಗಳಾಗಿದ್ದವು. ದೇವದತ್ತ ಪಡಿಕ್ಕಲ್ ಕೇವಲ ಎರಡು ರನ್ ಗಳಿಸಿದ್ದರು.

ಚಹಾ ವಿರಾಮಕ್ಕೂ ಸ್ವಲ್ಪ ಹೊತ್ತು ಮುನ್ನ ಸಮರ್ಥ್ ವಿಕೆಟ್ ಉರುಳಿಸಿದ ಜಯದೇವ್ ಕುಣಿದಾಡಿದರು. ಕ್ರೀಸ್‌ಗೆ ಬಂದ ಕೆ.ವಿ. ಸಿದ್ಧಾರ್ಥ್ 19 ರನ್‌ ಗಳಿಸಿದರೂ, ದೇವದತ್ತ ಖಾತೆಯಲ್ಲಿ ರನ್‌ಗಳು ಏರಿರಲಿಲ್ಲ. 64ನೇ ಓವರ್‌ನಲ್ಲಿ ಸಿದ್ಧಾರ್ಥ್ ಅವರನ್ನು ಧರ್ಮೇಂದ್ರಸಿಂಹ ಜಡೇಜ ಔಟ್ ಮಾಡಿದರು.

ಚಹಾ ವೇಳೆಗೆ ಪವನ್ ದೇಶಪಾಂಡೆ ಕೂಡ ಪೆವಿಲಿಯನ್ ಸೇರಿದ್ದರು. ಆ ಸಮಯಕ್ಕೆ 100 ಎಸೆತಗಳಲ್ಲಿ 24 ರನ್ ಗಳಿಸಿದ್ದ ದೇವದತ್ತ ಇನ್ನೂಕ್ರೀಸ್‌ನಲ್ಲಿದ್ದರು. ವಿರಾಮದ ನಂತರ ಯಾವುದೇ ವಿಕೆಟ್ ಪತನವಾಗಲಿಲ್ಲ. ದೇವದತ್ತ ಅರ್ಧಶತಕ ಪೂರೈಸಿದರು. ಶ್ರೇಯಸ್ ಗೋಪಾಲ್ ಗಟ್ಟಿಯಾಗಿ ಕಾಲೂರಿದರು. ಕಡ್ಡಾಯ ಓವರ್‌ಗಳ ನಂತರ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಮುಂದಿನ ಪಂದ್ಯ: ಜನವರಿ 27–30
ಎದುರಾಳಿ: ರೈಲ್ವೆಸ್
ಸ್ಥಳ: ಕರ್ನೈಲ್‌ ಸಿಂಗ್ ಕ್ರೀಡಾಂಗಣ, ದೆಹಲಿ.

ಸಂಕ್ಷಿಪ್ತ ಸ್ಕೋರು
ರಾಜ್‌ಕೋಟ್
ಸೌರಾಷ್ಟ್ರಮೊದಲ ಇನಿಂಗ್ಸ್‌:
7ಕ್ಕೆ581 ಡಿಕ್ಲೆರ್ಡ್
ಕರ್ನಾಟಕ ಮೊದಲ ಇನಿಂಗ್ಸ್‌: 171 ಫಾಲೋಆನ್,ಎರಡನೇ ಇನಿಂಗ್ಸ್‌: 4ಕ್ಕೆ220 (ರೋಹನ್ ಕದಂ 42, ಆರ್. ಸಮರ್ಥ್ 74, ದೇವದತ್ತ ಪಡಿಕ್ಕಲ್ ಔಟಾಗದೆ 53, ಕೆ.ವಿ. ಸಿದ್ಧಾರ್ಥ್ 19, ಶ್ರೇಯಸ್ ಗೋಪಾಲ್ ಔಟಾಗದೆ 13, ಧರ್ಮೇಂದ್ರಸಿಂಹ ಜಡೇಜ 97ಕ್ಕೆ2, ಜಯದೇವ್ ಉನದ್ಕತ್ 53ಕ್ಕೆ1).

ಲಾಹ್ಲಿ
ಹರಿಯಾಣ ಮೊದಲ ಇನಿಂಗ್ಸ್:
90, ಒಡಿಶಾ 160,ಎರಡನೇ ಇನಿಂಗ್ಸ್:248
ಒಡಿಶಾ ಮೊದಲ ಇನಿಂಗ್ಸ್: 58.1 ಓವರ್‌ಗಳಲ್ಲಿ 9ಕ್ಕೆ182 (ಸುಜಿತ್ ಲಂಕಾ 28, ಗೋವಿಂದ್ ಪೋದ್ದಾರ್ 30, ರಾಜೇಶ್ ಧೂಪರ್ 32, ರಾಜೇಶ್ ಮೋಹಾಂತಿ 21, ಅಜಿತ್ ಚಾಹಲ್ 80ಕ್ಕೆ7)
ಫಲಿತಾಂಶ: ಒಡಿಶಾ ತಂಡಕ್ಕೆ 1ವಿಕೆಟ್ ಜಯ ಮತ್ತು 6 ಪಾಯಿಂಟ್ಸ್.

ಪಾಲಂ,ದೆಹಲಿ
ಜಮ್ಮು–ಕಾಶ್ಮೀರ ಮೊದಲ ಇನಿಂಗ್ಸ್
: 360, ಎರಡನೇ ಇನಿಂಗ್ಸ್‌:5ಕ್ಕೆ201 ಡಿಕ್ಲೆರ್ಡ್
ಸರ್ವಿಸಸ್ ಮೊದಲ ಇನಿಂಗ್ಸ್: 242, ಎರಡನೇ ಇನಿಂಗ್ಸ್‌: 72.2 ಓವರ್‌ಗಳಲ್ಲಿ 146 (ಎ.ಪಿ. ಶರ್ಮಾ 54, ಮೊಹಮ್ಮದ್ ಮುದಸ್ಸೀರ್ 45ಕ್ಕೆ3, ಪರ್ವೇಜ್ ರಸೂಲ್ 23ಕ್ಕೆ3, ಅಕೀಬ್ ನಬಿ 23ಕ್ಕೆ2, ಉಮರ್ ನಜೀರ್ 38ಕ್ಕೆ2)
ಫಲಿತಾಂಶ: ಜಮ್ಮು–ಕಾಶ್ಮೀರ ತಂಡಕ್ಕೆ 173 ರನ್‌ಗಳ ಜಯ. 6 ಪಾಯಿಂಟ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT