ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ | ಸವಾಲಾದ ಶೆಲ್ಡನ್–ಅರ್ಪಿತ್; ಕರ್ನಾಟಕ ತಂಡಕ್ಕೆ ಇನಿಂಗ್ಸ್ ಹಿನ್ನಡೆ ಭೀತಿ

Last Updated 10 ಫೆಬ್ರುವರಿ 2023, 11:48 IST
ಅಕ್ಷರ ಗಾತ್ರ

ಬೆಂಗಳೂರು: ರಣಜಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ದ್ವಿಶತಕದ ಜೊತೆಯಾಟವಾಡಿದ ಸೌರಾಷ್ಟ್ರದ ಶೆಲ್ಡನ್‌ ಜಾಕ್ಸನ್‌ ಹಾಗೂ ಅರ್ಪಿತ್‌ ವಾಸವಾಡ ಜೋಡಿ, ಮೊದಲ ಇನಿಂಗ್ಸ್‌ ಮುನ್ನಡೆಯ ಲೆಕ್ಕಾಚಾರದಲ್ಲಿರುವ ಕರ್ನಾಟಕ ತಂಡಕ್ಕೆ ಸವಾಲಾದರು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡ 407 ರನ್‌ ಗಳಿಸಿ ಆಲೌಟ್‌ ಆಗಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಸೌರಾಷ್ಟ್ರ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡು 75 ರನ್‌ ಗಳಿಸಿತ್ತು. ಹಾರ್ವಿಕ್‌ ದೇಸಾಯಿ ಹಾಗೂ ಜಾಕ್ಸನ್‌ ಕ್ರೀಸ್‌ನಲ್ಲಿದ್ದರು.

22 ರನ್‌ ಗಳಿಸಿದ್ದ ದೇಸಾಯಿ ಮೂರನೇ ದಿನದಾಟದ 5ನೇ ಓವರ್‌ನ ಕೊನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಹೀಗಾಗಿ ಮಯಂಕ್ ಅಗರವಾಲ್‌ ನೇತೃತ್ವದ ಕರ್ನಾಟಕ ತಂಡ ಸುಲಭವಾಗಿ ಇನಿಂಗ್ಸ್‌ ಮುನ್ನಡೆ ಸಾಧಿಸುವ ಲೆಕ್ಕಚಾರದಲ್ಲಿತ್ತು. ಆದರೆ ಅನುಭವಿ ಜಾಕ್ಸನ್‌ ಮತ್ತು ನಾಯಕ ಅರ್ಪಿತ್‌ ಅದಕ್ಕೆ ಅವಕಾಶ ನೀಡಲಿಲ್ಲ.

ಈ ಜೋಡಿ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 232 ರನ್‌ ಕಲೆಹಾಕುವ ಮೂಲಕ ಕರ್ನಾಟಕ ತಂಡವನ್ನು ಕಾಡಿತು. ವಿಕೆಟ್‌ ಕೊಡದೆ ಬರೋಬ್ಬರಿ 53 ಓವರ್‌ ಆಡಿದ ಜಾಕ್ಸನ್‌ ಮತ್ತು ಅರ್ಪಿತ್‌ ಇಬ್ಬರೂ ಶತಕ ಸಿಡಿಸಿದರು. ಈ ಜೋಡಿಯನ್ನು ಸ್ಪಿನ್ನರ್ ಕೆ. ಗೌತಮ್‌ ಬೇರ್ಪಡಿಸಿದರು.

ಸೌರಾಷ್ಟ್ರ ಪಡೆಯನ್ನು ಇನಿಂಗ್ಸ್ ಮುನ್ನಡೆಯತ್ತ ಕೊಂಡೊಯ್ಯುತ್ತಿದ್ದ ಜಾಕ್ಸನ್‌, ಇನಿಂಗ್ಸ್‌ನ 98ನೇ ಓವರ್‌ನ ಕೊನೇ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇದರೊಂದಿಗೆ ಅಮೋಘ ಜೊತೆಯಾಟಕ್ಕೆ ತೆರೆ ಬಿದ್ದಿತು.

245 ಎಸೆತಗಳನ್ನು ಎದುರಿಸಿದ ಜಾಕ್ಸನ್‌ 23 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 160 ರನ್‌ ಗಳಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಅರ್ಪಿತ್‌ 219 ಎಸೆತಗಳಲ್ಲಿ 112 ರನ್‌ ಗಳಿಸಿ ಬ್ಯಾಟಿಂಗ್‌ ಮುಂದುವರಿಸಿದ್ದಾರೆ.

ಸದ್ಯ ಮೂರನೇ ದಿನದಾಟ ಅಂತ್ಯವಾಗಿದ್ದು, ಸೌರಾಷ್ಟ್ರ ತಂಡದ ಮೊತ್ತ 4 ವಿಕೆಟ್‌ಗೆ 364 ರನ್‌ ಆಗಿದೆ. ಇನಿಂಗ್ಸ್‌ ಮನ್ನಡೆ ಸಾಧಿಸಲು ಇನ್ನೂ 43 ರನ್‌ ಗಳಿಸಬೇಕಿದೆ. ಕರ್ನಾಟಕ 6 ವಿಕೆಟ್‌ ಕಬಳಿಸಬೇಕಿದೆ.

ಬಂಗಾಳದ ಹಿಡಿತದಲ್ಲಿ ಪಂದ್ಯ
ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬಂಗಾಳ ಹಾಗೂ ಮಧ್ಯಪ್ರದೇಶ ತಂಡಗಳು ಸೆಣಸಾಟ ನಡೆಸುತ್ತಿವೆ. ಮೊದಲ ಇನಿಂಗ್ಸ್‌ನಲ್ಲಿ 268 ರನ್‌ ಅಂತರದ ಬೃಹತ್‌ ಮುನ್ನಡೆ ಸಾಧಿಸಿರುವ ಬಂಗಾಳ ತಂಡ, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಮಧ್ಯಪ್ರದೇಶದ ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ 438 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮಧ್ಯಪ್ರದೇಶ ತಂಡ 170 ರನ್‌ ಗಳಿಗೆ ಸರ್ವಪತನ ಕಂಡಿದೆ.

ಬಂಗಾಳ ತಂಡ ಸದ್ಯ ಎರಡನೇ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 59 ರನ್ ಗಳಿಸಿದೆ. ಇದರೊಂದಿಗೆ ಮುನ್ನಡೆಯ ಅಂತರವನ್ನು 327 ರನ್‌ಗೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT