ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಗೆದ್ದು ದಾಖಲೆ ನಿರ್ಮಿಸಿದ ಸೌರಾಷ್ಟ್ರ

ಹರ್ವಿಕ್‌ ದೇಸಾಯಿ ಚೊಚ್ಚಲ ಶತಕ: ಉತ್ತರ ಪ್ರದೇಶಕ್ಕೆ ನಿರಾಸೆ
Last Updated 19 ಜನವರಿ 2019, 16:02 IST
ಅಕ್ಷರ ಗಾತ್ರ

ಲಖನೌ:ಸೌರಾಷ್ಟ್ರ ತಂಡ ಶನಿವಾರ ಅಟಲ್‌ ಬಿಹಾರಿ ವಾಜಪೇಯಿ ಏಕಾನ ಮೈದಾನದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿತು.

ಜಯದೇವ್‌ ಉನದ್ಕತ್‌ ಮುಂದಾಳತ್ವದ ಈ ತಂಡ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗುರಿ ಬೆನ್ನಟ್ಟಿ ಗೆದ್ದ ಸಾಧನೆ ಮಾಡಿತು.

ಇಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರ ಪ್ರದೇಶ ನೀಡಿದ್ದ 372ರನ್‌ಗಳ ಗೆಲುವಿನ ಗುರಿಯನ್ನು ಜಯದೇವ್‌ ಬಳಗ 115.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಇದರೊಂದಿಗೆ ಅಸ್ಸಾಂ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿತು. 2008–09ನೇ ಋತುವಿನಲ್ಲಿ ನಡೆದಿದ್ದ ಸರ್ವಿಸಸ್‌ ಎದುರಿನ ಪಂದ್ಯದಲ್ಲಿ ಅಸ್ಸಾಂ 371ರನ್‌ಗಳ ಗುರಿ ಬೆನ್ನಟ್ಟಿ ಜಯಿಸಿತ್ತು.

ಹರ್ವಿಕ್‌ ದೇಸಾಯಿ (116; 259ಎ, 16ಬೌಂ) ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಳಿಸಿದ ಚೊಚ್ಚಲ ಶತಕ ಹಾಗೂ ಸ್ನೆಲ್‌ ಪಟೇಲ್‌ (72; 114ಎ; 9ಬೌಂ), ಚೇತೇಶ್ವರ ಪೂಜಾರ ಮತ್ತು ಶೆಲ್ಡನ್‌ ಜಾಕ್ಸನ್‌ ಅವರ ಜವಾಬ್ದಾರಿಯುತ ಆಟದಿಂದಾಗಿ ಸೌರಾಷ್ಟ್ರ ಜಯದ ಸಿಹಿ ಸವಿಯಿತು.

ಶುಕ್ರವಾರ ಎರಡು ವಿಕೆಟ್‌ ಕಳೆದುಕೊಂಡು 195ರನ್‌ ಗಳಿಸಿದ್ದ ಜಯದೇವ್‌ ಬಳಗ ಗೆಲುವಿಗಾಗಿ ಅಂತಿಮ ದಿನವಾದ ಶನಿವಾರ 177ರನ್‌ ಕಲೆಹಾಕಬೇಕಿತ್ತು.

74ನೇ ಓವರ್‌ನಲ್ಲಿ ಕಮಲೇಶ್‌ ಮಕ್ವಾನ (7), ಯಶ್‌ ದಯಾಳ್‌ಗೆ ವಿಕೆಟ್‌ ಒಪ್ಪಿಸಿದಾಗ ತಂಡದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು. ಈ ಹಂತದಲ್ಲಿ ಅಬ್ಬರಿಸಿದ ಹರ್ವಿಕ್‌, ವೇಗವಾಗಿ ತಂಡದ ಖಾತೆಗೆ 33 ರನ್‌ ಸೇರ್ಪಡೆ ಮಾಡಿ ಗೆಲುವಿನ ಕನಸಿಗೆ ಬಲ ತುಂಬಿದರು. ಶತಕ ಪೂರೈಸಿದ ಬಳಿಕ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು 90ನೇ ಓವರ್‌ನ ಐದನೇ ಎಸೆತದಲ್ಲಿ ಸೌರಭ್‌ ಕುಮಾರ್‌ಗೆ ವಿಕೆಟ್‌ ನೀಡಿದರು.

ಆಗ ಸೌರಾಷ್ಟ್ರದ ಜಯಕ್ಕೆ 136ರನ್‌ಗಳ ಅಗತ್ಯವಿತ್ತು. ಅನುಭವಿ ಬ್ಯಾಟ್ಸ್‌ಮನ್‌ ಪೂಜಾರ (ಔಟಾಗದೆ 67; 110ಎ, 9ಬೌಂ) ಮತ್ತು ಜಾಕ್ಸನ್‌ (ಔಟಾಗದೆ 73; 109ಎ, 11ಬೌಂ, 1ಸಿ) ದಿಟ್ಟ ಆಟ ಆಡಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಸೆಮಿಗೆ ವಿದರ್ಭ: ನಾಗಪುರದಲ್ಲಿ ನಡೆದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ವಿದರ್ಭ ತಂಡ ಇನಿಂಗ್ಸ್‌ ಮತ್ತು 115ರನ್‌ಗಳಿಂದ ಉತ್ತರಾಖಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಉತ್ತರ ಪ್ರದೇಶ: ಮೊದಲ ಇನಿಂಗ್ಸ್‌; 103.3 ಓವರ್‌ಗಳಲ್ಲಿ 385 ಮತ್ತು 72.1 ಓವರ್‌ಗಳಲ್ಲಿ 194.

ಸೌರಾಷ್ಟ್ರ: ಪ್ರಥಮ ಇನಿಂಗ್ಸ್‌; 66.4 ಓವರ್‌ಗಳಲ್ಲಿ 208 ಮತ್ತು 115.1 ಓವರ್‌ಗಳಲ್ಲಿ 4 ವಿಕೆಟ್‌ಗೆ 372 (ಹರ್ವಿಕ್‌ ದೇಸಾಯಿ 116, ಶೆಲ್ಡನ್‌ ಜಾಕ್ಸನ್‌ ಔಟಾಗದೆ 73, ಸ್ನೆಲ್‌ ಪಟೇಲ್‌ 72, ಚೇತೇಶ್ವರ ಪೂಜಾರ ಔಟಾಗದೆ 67; ಆಕಾಶ್‌ದೀಪ್‌ ನಾಥ್‌ 17ಕ್ಕೆ1). ಫಲಿತಾಂಶ: ಸೌರಾಷ್ಟ್ರಕ್ಕೆ 6 ವಿಕೆಟ್‌ ಗೆಲುವು.

‍ಪಂದ್ಯಶ್ರೇಷ್ಠ: ಹರ್ವಿಕ್‌ ದೇಸಾಯಿ.

ಉತ್ತರಾಖಂಡ: ಮೊದಲ ಇನಿಂಗ್ಸ್‌; 108.4 ಓವರ್‌ಗಳಲ್ಲಿ 355 ಮತ್ತು 65.1 ಓವರ್‌ಗಳಲ್ಲಿ 159 (ಕರಣ್‌ವೀರ್‌ ಕೌಶಲ್‌ 76, ಅವನೀಶ್‌ ಸುಧಾ 28; ಉಮೇಶ್‌ ಯಾದವ್‌ 23ಕ್ಕೆ5, ಆದಿತ್ಯ ಸರ್ವಟೆ 55ಕ್ಕೆ5).

ವಿದರ್ಭ: ಮೊದಲ ಇನಿಂಗ್ಸ್‌; 184 ಓವರ್‌ಗಳಲ್ಲಿ 629.

ಫಲಿತಾಂಶ: ವಿದರ್ಭ ತಂಡಕ್ಕೆ ಇನಿಂಗ್ಸ್‌ ಮತ್ತು 115ರನ್‌ ಗೆಲುವು. ಪಂದ್ಯ ಶ್ರೇಷ್ಠ: ಉಮೇಶ್‌ ಯಾದವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT