ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy: ಕರ್ನಾಟಕ 366ಕ್ಕೆ ಆಲೌಟ್; 2ನೇ ದಿನದಂತ್ಯಕ್ಕೆ ತಮಿಳುನಾಡು 129/7

ಹಾರ್ದಿಕ್ ಆಲ್‌ರೌಂಡ್ ಆಟ; ಶಶಿ ಸ್ಪಿನ್ ಮೋಡಿ
Published 10 ಫೆಬ್ರುವರಿ 2024, 9:11 IST
Last Updated 10 ಫೆಬ್ರುವರಿ 2024, 9:11 IST
ಅಕ್ಷರ ಗಾತ್ರ

ಚೆನ್ನೈ: ಆತಿಥೇಯ ತಮಿಳುನಾಡು ತಂಡದಲ್ಲಿ ಬಲಿಷ್ಠ  ಬ್ಯಾಟಿಂಗ್ ಪಡೆ ಇರುವುದು ದಿಟ. ಆದರೆ ಕರ್ನಾಟಕದ ಬೌಲರ್‌ಗಳ ಮುಂದೆ ಅವರ ಆಟ ನಡೆಯಲಿಲ್ಲ. 

ಹೌದು; ಚೆಪಾಕ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಬೌಲರ್‌ಗಳು ಪ್ರತಾಪ ಮೆರೆದರು. ಅದರಲ್ಲೂ ನವಪ್ರತಿಭೆ ಕೆ.ಶಶಿಕುಮಾರ್ (41ಕ್ಕೆ3) ಸ್ಪಿನ್ ಮೋಡಿಯು ರಂಗೇರಿತು. 17 ವರ್ಷದ ಹಾರ್ದಿಕ್ ರಾಜ್ (51; 96ಎ, 4X8 ಮತ್ತು 47ಕ್ಕೆ2)  ಆಲ್‌ರೌಂಡ್ ಆಟವೂ ಗಮನ ಸೆಳೆಯಿತು. ಇಬ್ಬರಿಗೂ ಇದು ಚೊಚ್ಚಲ ರಣಜಿ ಟೂರ್ನಿಯಾಗಿದೆ.

ಕರ್ನಾಟಕವು ಪ್ರಥಮ ಇನಿಂಗ್ಸ್‌ನಲ್ಲಿ 119.4 ಓವರ್‌ಗಳಲ್ಲಿ ಗಳಿಸಿದ್ದ 366 ರನ್‌ಗಳಿಗೆ ಉತ್ತರವಾಗಿ ಆತಿಥೇಯ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ 56 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 129 ರನ್‌ ಗಳಿಸಿತು. ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಬೇಕಾದರೆ ಇನ್ನೂ 237 ರನ್‌ ಗಳಿಸಬೇಕು. ಬಾಬಾ ಇಂದ್ರಜೀತ್ (ಬ್ಯಾಟಿಂಗ್ 35) ಮತ್ತು ಎಂ. ಮೊಹಮ್ಮದ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ. ಭಾನುವಾರ ಬೆಳಗಿನ ಅವಧಿಯಲ್ಲಿ ಬೇಗನೆ ಮೂರು ವಿಕೆಟ್‌ಗಳನ್ನು ಉರುಳಿಸುವಲ್ಲಿ ಕರ್ನಾಟಕ ಬೌಲರ್‌ಗಳು ಸಫಲರಾದರೆ ಮಯಂಕ್ ಉತ್ತಮ ಮುನ್ನಡೆ ಲಭಿಸುವುದು ಖಚಿತ.

ತಮಿಳುನಾಡು ತಂಡದ ಆರಂಭಿಕ ಬ್ಯಾಟರ್ ಜಗದೀಶನ್ (40; 56ಎ), ಪ್ರದೋಷ್ ಪಾಲ್ ಮತ್ತು ಮಧ್ಯಮಕ್ರಮಾಂಕದ ಬ್ಯಾಟರ್ ಭೂಪತಿ ಕುಮಾರ್ ಅವರ ವಿಕೆಟ್‌ಗಳನ್ನು ಶಶಿಕುಮಾರ್ ತಮ್ಮದಾಗಿಸಿಕೊಂಡರು. ಶಶಿಗೆ ಇದು ಎರಡನೇ ಪಂದ್ಯವಾಗಿದೆ.  ವೇಗಿ ವಿದ್ವತ್ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಅವರೂ ತಲಾ ಒಂದು ವಿಕೆಟ್ ಗಳಿಸಿ ಆತಿಥೇಯರಿಗೆ ಪೆಟ್ಟುಕೊಟ್ಟರು.

ಕರ್ನಾಟಕದ ಫೀಲ್ಡಿಂಗ್‌ನಲ್ಲಿ ಕೆಲವು ಲೋಪಗಳು ಇದ್ದವು. ಆದರೆ ನಂತರ ಸಾವರಿಸಿಕೊಂಡ ತಂಡವು ಎದುರಾಳಿಗಳಿಗೆ ಕಠಿಣ ಸವಾಲೊಡ್ಡಿತು. ಇದರಿಂದಾಗಿ ತಮಿಳುನಾಡು ತಂಡದ ಮೊತ್ತವು 100ರ ಗಡಿ ಮುಟ್ಟುವ ಮುನ್ನವೇ  ಐದು ವಿಕೆಟ್‌ಗಳು ಪತನಗೊಂಡವು.

ಹಾರ್ದಿಕ್ ಚೊಚ್ಚಲ ಅರ್ಧಶತಕ

ಬೆಂಗಳೂರಿನ ಹಾರ್ದಿಕ್ ರಾಜ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು.

ಮೊದಲ ದಿನದಾಟದಲ್ಲಿ 35 ರನ್‌ ಗಳಿಸಿದ್ದ ಅವರು ದೇವದತ್ತ ಪಡಿಕ್ಕಲ್ ಅವರೊಂದಿಗೆ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 54 ರನ್ ಸೇರಿಸಿ ಕ್ರೀಸ್‌ನಲ್ಲಿದ್ದರು.

216 ಎಸೆತಗಳಲ್ಲಿ  151 ರನ್ ಗಳಿಸಿದ್ದ  ದೇವದತ್ತ ಅವರು ಶನಿವಾರ ಬೆಳಿಗ್ಗೆ ತಮ್ಮ ಖಾತೆಗೆ ಒಂದೂ ರನ್ ಸೇರಿಸದೇ ಔಟಾದರು. ಆಗ ಇನಿಂಗ್ಸ್‌ ಕಟ್ಟುವ ಹೊಣೆಯನ್ನು ಹೊತ್ತುಕೊಂಡ ಹಾರ್ದಿಕ್ ಅವರಿಗೆ ಶರತ್ ಶ್ರೀನಿವಾಸ್‌ (45; 83ಎ) ಜೊತೆ ನೀಡಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ  41 ರನ್‌ ಸೇರಿಸಿದರು. ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದರು.

ಶಶಿಕುಮಾರ್ ಅವರು ಬ್ಯಾಟಿಂಗ್‌ನಲ್ಲಿಯೂ ಗಮನಸೆಳೆದರು. ಕೇವಲ 9 ರನ್ ಗಳಿಸಿದರೂ 58 ಎಸೆತಗಳನ್ನು ಎದುರಿಸಿದರು. ಒಂದು ಬೌಂಡರಿ ಬಾರಿಸಿದರು. 9ನೇ ವಿಕೆಟ್ ಜೊತೆಯಾಟದಲ್ಲಿ ಅವರು ಶರತ್ ಜೊತೆಗೆ 32 ರನ್ ಸೇರಿಸಲು ನೆರವಾದರು. ಶರತ್ ಅರ್ಧಶತಕದ ಸನಿಹ ಎಡವಿದರು.

ಒಂದೇ ದಿನ ಪತನವಾದ 13 ವಿಕೆಟ್‌ಗಳು ತಮಿಳುನಾಡಿನ ಅಜಿತ್ ರಾಮ್‌ಗೆ ನಾಲ್ಕು ವಿಕೆಟ್ ಹಾರ್ದಿಕ್ ರಾಜ್ ಚೊಚ್ಚಲ ಅರ್ಧಶತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT