ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL ಟೆಸ್ಟ್: ಒಂದೇ ಇನಿಂಗ್ಸ್‌ನಲ್ಲಿ ಮೂರು ಶತಕದ ಜೊತೆಯಾಟವಾಡಿದ ಜಡೇಜ

35 ವರ್ಷಗಳಷ್ಟು ಹಳೆಯ ದಾಖಲೆ ಮುರಿದ ಜಡೇಜ
Last Updated 6 ಮಾರ್ಚ್ 2022, 3:15 IST
ಅಕ್ಷರ ಗಾತ್ರ

ಮೊಹಾಲಿ:ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಒಂದನೇ ಇನಿಂಗ್ಸ್‌ನಲ್ಲಿ ಅಜೇಯ ಶತಕ ಸಿಡಿಸಿದ ಆಲ್‌ರೌಂಡರ್‌ ರವೀಂದ್ರ ಜಡೇಜ ಎರಡು ವಿಶಿಷ್ಟದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಇಲ್ಲಿನ ಪಂಜಾಬ್ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಟಾಸ್‌ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಜಡೇಜ ಬಾರಿಸಿದ ಶತಕ, ವಿಕೆಟ್‌ ಕೀಪರ್‌ ರಿಷಭ್‌ ಪಂತ್, ಹನುಮ ವಿಹಾರಿ ಮತ್ತು ಆರ್‌.ಅಶ್ವಿನ್ ಗಳಿಸಿದ ಅರ್ಧಶತಕಗಳ ಬಲದಿಂದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು 574ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಲಂಕಾ ಬಳಗ 24 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 59 ರನ್ ಕಲೆಹಾಕಿದೆ.

17 ರನ್‌ ಗಳಿಸಿದ್ದ ಲಹಿರು ತಿರುಮನ್ನೆ ಅವರನ್ನು ಆರ್‌.ಅಶ್ವಿನ್‌ ಎಲ್‌ಬಿ ಬಲೆಗೆ ಕೆಡವಿದ್ದಾರೆ. ನಾಯಕ ದಿಮುತ ಕರುಣಾರತ್ನೆ (28) ಮತ್ತು ಪಾಥುಮ್ ನಿಶಾಂಕ (2) ಕ್ರೀಸ್‌ನಲ್ಲಿದ್ದಾರೆ.

ಜಡೇಜ ದಾಖಲೆ
ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 5 ವಿಕೆಟ್‌ ಕಳೆದುಕೊಂಡು228 ರನ್ ಗಳಿಸಿದ್ದಾಗ ಕ್ರೀಸ್‌ಗೆ ಬಂದ ಜಡೇಜ, ಲಂಕಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಅವರು 228 ಎಸೆತಗಳನ್ನು ಎದುರಿಸಿ 17 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ ಅಜೇಯ 175 ರನ್‌ ಕಲೆಹಾಕಿದರು.

ಇಷ್ಟು ರನ್‌ ಕಲೆಹಾಕುವುದರೊಟ್ಟಿಗೆ ಅವರು ಕ್ರಮವಾಗಿ 6, 7, ಮತ್ತು 9ನೇ ವಿಕೆಟ್‌ ಜೊತೆಯಾಟಗಳಲ್ಲಿ ನೂರಕ್ಕಿಂತ ಹೆಚ್ಚು ರನ್ ಸೇರಿಸಿ ಭಾರತದ ಇನಿಂಗ್ಸ್‌ ಬೆಳೆಯುವಂತೆ ನೋಡಿಕೊಂಡರು.

ರಿಷಭ್‌ ಪಂತ್‌ ಜೊತೆಗೆ 6 ವಿಕೆಟ್‌ಗೆ 104ರನ್‌, ಅಶ್ವಿನ್‌ ಜೊತೆಗೆ 7ನೇ ವಿಕೆಟ್‌ಗೆ 130 ರನ್‌ ಸೇರಿಸಿದರು.

ಅಂತಿಮವಾಗಿ ನಾಯಕ ರೋಹಿತ್‌ ಅವರು ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮುನ್ನ ಕೆಳ ಕ್ರಮಾಂಕದ ಬ್ಯಾಟರ್‌ ಮೊಹಮ್ಮದ್ ಶಮಿ ಜೊತೆಗೆ 9ನೇ ವಿಕೆಟ್‌ ಜೊತೆಯಾಟದಲ್ಲಿ ಅಜೇಯ 103 ರನ್‌ ಕೂಡಿಸಿದರು.

ಭಾರತದ ಪರಇದಕ್ಕೂ ಮುನ್ನ1993ರಲ್ಲಿ ವಿನೋದ್ ಕಾಂಬ್ಳಿ ಜಿಂಬಾಬ್ವೆ ವಿರುದ್ಧ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ, 2004ರಲ್ಲಿ ರಾಹುಲ್‌ ದ್ರಾವಿಡ್‌ ಪಾಕಿಸ್ತಾನ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ, 2005ರಲ್ಲಿ ವೀರೇಂದ್ರ ಸೆಹ್ವಾಗ್‌ ಪಾಕ್ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮತ್ತು 2016ರಲ್ಲಿ ಕರುಣ್‌ ನಾಯರ್‌ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಮೂರು ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು.

ಕಪಿಲ್ ದಾಖಲೆ ಉಡೀಸ್
ಲಂಕಾ ವಿರುದ್ಧ 175 ರನ್‌ ಗಳಿಸಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ವೈಯಕ್ತಿಕಗರಿಷ್ಠ ಮೊತ್ತವನ್ನು ಉತ್ತಮ ಪಡಿಸಿಕೊಂಡ ಜಡೇಜ, ಕಪಿಲ್‌ ದೇವ್‌ ಅವರ ಹೆಸರಿನಲ್ಲಿದ್ದ 35 ವರ್ಷಗಳಷ್ಟು ಹಳೆಯ ದಾಖಲೆಯೊಂದನ್ನು ಮುರಿದುಹಾಕಿದರು.

ಭಾರತ ಪರ 7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಕ್ರಿಸ್‌ಗಿಳಿದ ಬ್ಯಾಟರ್‌ವೊಬ್ಬರು ಇದುವರೆಗೆ 165ಕ್ಕಿಂತ ಹೆಚ್ಚು ರನ್‌ ಗಳಿಸಿಯೇ ಇರಲಿಲ್ಲ.

1986ರಲ್ಲಿ ಕಪಿಲ್‌ ದೇವ್‌ ಅವರು ಶ್ರೀಲಂಕಾ ವಿರುದ್ಧವೇ 163 ರನ್‌ ಗಳಿಸಿದ್ದು ಇಲ್ಲಿಯವರೆಗೆ ದಾಖಲೆಯಾಗಿತ್ತು. ಇದೀಗ ಜಡೇಜ ಹೊಸ ದಾಖಲೆ ಬರೆದಿದ್ದಾರೆ. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 159 ರನ್‌ ಗಳಿಸಿದ್ದ ರಿಷಭ್ ಪಂತ್‌ ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT