ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುಪ್ಲೆಸಿ–ರಜತ್ ಶತಕದ ಜೊತೆಯಾಟ: 'ಗ್ರೀನ್’ ಪಂದ್ಯದಲ್ಲಿ ಆರ್‌ಸಿಬಿ ವಿನ್

ಸನ್‌ರೈಸರ್ಸ್‌ ವಿರುದ್ಧ 5 ವಿಕೆಟ್ ಗಳಿಸಿದ ಹಸರಂಗ
Last Updated 8 ಮೇ 2022, 14:39 IST
ಅಕ್ಷರ ಗಾತ್ರ

ಮುಂಬೈ: ಪರಿಸರ ಕಾಳಜಿಯೊಂದಿಗೆ ಹಸಿರು ಉಡುಗೆ ತೊಟ್ಟು ಅಂಗಣಕ್ಕೆ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಗಳಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಫಫ್ ಡುಪ್ಲೆಸಿ ಬಳಗ ಮುಂದಿಟ್ಟ 193 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್‌ 19.2 ಓವರ್‌ಗಳಲ್ಲಿ 125 ರನ್ ಗಳಿಸಿ ಆಲೌಟಾಯಿತು. 67 ರನ್‌ಗಳ ಸೋಲೊಪ್ಪಿಕೊಂಡಿತು. ಐದು ವಿಕೆಟ್ ಗಳಿಸಿದ ವಾಣಿಂದು ಹಸರಂಗ ಆರ್‌ಸಿಬಿಯ ಸುಲಭ ಜಯಕ್ಕೆ ಕಾರಣರಾದರು.

ತಂಡ ಖಾತೆ ತೆರೆಯುವ ಮೊದಲೇ ಕೇನ್ ವಿಲಿಯಮ್ಸನ್ ರನ್ ಔಟಾಗಿ ಮರಳಿದರು. ಸ್ಕೋರ್‌ಬೋರ್ಡ್‌ನಲ್ಲಿ ಒಂದು ರನ್ ದಾಖಲಾಗುತ್ತಿದ್ದಂತೆ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಔಟಾದರು. ನಂತರ ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು. ಅವರಿಗೆ ಏಡನ್ ಮರ್ಕರಮ್ ಮತ್ತು ನಿಕೋಲಸ್ ಪೂರನ್ ಸ್ವಲ್ಪ ಸಹಕಾರ ನೀಡಿದರು. ಕೊನೆಯ ಆರು ಮಂದಿ ಎರಡಂಕಿ ಮೊತ್ತ ದಾಟದೆ ಮರಳಿದರು.

ಆಸರೆಯಾದ ಡುಪ್ಲೆಸಿ–ರಜತ್

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡಕ್ಕೆ ಬೆಂಗಳೂರು ಹುಡುಗ ಜಗದೀಶ ಸುಚಿತ್ ಮೊದಲ ಎಸೆತದಲ್ಲೇ ಆಘಾತ ನೀಡಿದರು. ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದು ಸಂಭ್ರಮಿಸಿದರು. ಆದರೆ ಫಫ್ ಡುಪ್ಲೆಸಿ ಮತ್ತು ರಜತ್ ಪಾಟೀದಾರ್ ತಂಡಕ್ಕೆ ಆಸರೆಯಾದರು.

ಎರಡನೇ ವಿಕೆಟ್‌ಗೆ ಇಬ್ಬರೂ 105 ರನ್‌ಗಳನ್ನು ಸೇರಿಸಿದರು. ಮೋಹಕ ಅರ್ಧಶತಕ ಸಿಡಿಸಿದ ಡುಪ್ಲೆಸಿ ಔಟಾಗದೇ ಉಳಿದರು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ರಜತ್ 38 ಎಸೆತಗಳಲ್ಲಿ 48 ರನ್ ಗಳಿಸಿದರು. ಗುಡ್ ಲೆಂಗ್ತ್ ಎಸೆತವನ್ನು ಪುಲ್ ಮಾಡಿದ ಪಾಟೀದಾರ್ ಅವರ ಬ್ಯಾಟಿನ ಒಳ ಅಂಚಿಗೆ ಸವರಿದ ಚೆಂಡು ತ್ರಿಪಾಠಿ ಕೈಸೇರಿತು.

ನಂತರವೂ ಡುಪ್ಲೆಸಿ ಬ್ಯಾಟಿಂಗ್ ವೈಭವ ಮುಂದುವರಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಸಿಡಿಸಿದರು. ಅಂತಿಮ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿದ ಅವರು ಕೇವಲ ಎಂಟು ಎಸೆತಗಳಲ್ಲಿ 30 ರನ್ ಗಳಿಸಿ ತಂಡ ಭಾರಿ ಮೊತ್ತ ಗಳಿಸಲು ನೆರವಾದರು.

ಕೊಹ್ಲಿ ಮೂರನೇ ಗೋಲ್ಡನ್ ಡಕ್‌

ಟೂರ್ನಿಯ 15ನೇ ಆವೃತ್ತಿಯಲ್ಲಿ ಮೂರನೇ ಬಾರಿ ಗೋಲ್ಡನ್ ಡಕ್‌ಗೆ (ಮೊದಲ ಎಸೆತದಲ್ಲೇ ಔಟ್) ಒಳಗಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಭಾನುವಾರ ಭಾರಿ ಟ್ರೋಲ್ ಆಗಿದ್ದಾರೆ.

ನಸ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದ ಮೊದಲ ಎಸೆತದಲ್ಲೇ ಕೊಹ್ಲಿ ಎಡಗೈ ಸ್ಪಿನ್ನರ್ ಜಗದೀಶ ಸುಚಿತ್ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಲೆಗ್‌ಸ್ಟಂಪ್ ಮೇಲಿದ್ದ ಚೆಂಡನ್ನು ಬೌಂಡರಿಗೆ ಅಟ್ಟಲು ಕೊಹ್ಲಿ ಪ್ರಯತ್ನಿಸಿದರು. ಆದರೆ ಚೆಂಡು ಗಾಳಿಯಲ್ಲಿ ತೇಲಿತು. ಶಾರ್ಟ್ ಮಿಡ್‌ವಿಕೆಟ್‌ನಲ್ಲಿದ್ದ ವಿಲಿಯಮ್ಸನ್‌ ಸುಲಭ್ಯ ಕ್ಯಾಚ್ ಪಡೆದರು.

ಇದಾಗಿ ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ತಾಣಗಳಲ್ಲಿ ಮೀಮ್‌ಗಳು ಹರಿದಾಡಿದವು. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಒಟ್ಟಾರೆ 9 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇದರಲ್ಲಿ ಆರು ಬಾರಿ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿದ್ದಾರೆ.

ನಿಟ್ಟುಸಿರು ಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್

ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಆಟಗಾರನಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಭಾನುವಾರ ಆತಂಕ ಉಂಟಾಗಿತ್ತು. ಆದರೆ

‘ಪರೀಕ್ಷೆಯಲ್ಲಿ ನೆಟ್ ಬಲರ್ ಒಬ್ಬರ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಎಲ್ಲ ಆಟಗಾರರನ್ನು ಹೋಟೆಲ್ ಕೊಠಡಿಯಲ್ಲೇ ಇರಲು ಸೂಚಿಸಲಾಗಿದೆ’ ಎಂದು ತಂಡದ ಮೂಲಗಳು ತಿಳಿಸಿದ್ದವು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯ ನಡೆಯುವ ಬಗ್ಗೆ ಸಂದೇಹ ಉಂಟಾಗಿತ್ತು. ನಂತರ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಂಜೆ ನೆಗೆಟಿವ್ ವರದಿ ಬಂದ ಕಾರಣ ಆತಂಕ ದೂರವಾಯಿತು. ಈ ನಡುವೆ ಜ್ವರದಿಂದ ಬಳಲುತ್ತಿರುವ ಪೃಥ್ವಿ ಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಆರ್‌ಟಿ ಪಿಸಿಆರ್ ವರದಿ ನೆಗೆಟಿವ್ ಬಂದಿದೆ ಎಂದು ತಂಡದ ಪ್ರಕಟಣೆ ತಿಳಿಸಿದೆ.

ವರ್ಷ;ಎದುರಾಳಿ;ಸ್ಥಳ

2008;ಮುಂಬೈ;ಬೆಂಗಳೂರು
2014;ಪಂಜಾಬ್;ಬೆಂಗಳೂರು
2017;ಕೋಲ್ಕತ್ತ;ಕೋಲ್ಕತ್ತ
2022;ಲಖನೌ;ಮುಂಬೈ
2022;ಹೈದರಾಬಾದ್;ಮುಂಬೈ
2022;ಹೈದರಾಬಾದ್;ಮುಂಬೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT