ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB vs MI: ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್

ಮುಂಬೈ ಎದುರು ಆರ್‌ಸಿಬಿ ಗೌರವಾರ್ಹ ಮೊತ್ತ; ಲಯಕ್ಕೆ ಮರಳಿದ ಡುಪ್ಲೆಸಿ, ರಜತ್ , ಬೂಮ್ರಾಗೆ ಐದು ವಿಕೆಟ್
Published 11 ಏಪ್ರಿಲ್ 2024, 16:19 IST
Last Updated 11 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ಮುಂಬೈ:  ವಾಂಕೆಡೆ ಕ್ರೀಡಾಂಗಣದಲ್ಲಿ ಗುರುವಾರ ವಿರಾಟ್ ಕೊಹ್ಲಿ ಕೇವಲ ಮೂರು ರನ್ ಗಳಿಸಿ ಔಟಾದರು. ಆದರೆ  ಮೂವರು ತಲಾ ಅರ್ಧಶತಕ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದೊಡ್ಡ ಮೊತ್ತ ಗಳಿಸಲು ಕಾರಣರಾದರು.  

ಆತಿಥೇಯ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು  ಆರಂಭದಲ್ಲಿಯೇ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿ ಕೊಟ್ಟ ಆಘಾತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕುಸಿಯುವ ಆತಂಕ ಎದುರಾಗಿತ್ತು.  ಆದರೆ ಸರಿಯಾದ ಸಮಯಕ್ಕೆ ಲಯಕ್ಕೆ ಮರಳಿದ ನಾಯಕ ಫಫ್ ಡುಪ್ಲೆಸಿ  (61 ರನ್) ಮತ್ತು ರಜತ್ ಪಾಟೀದಾರ್ (50 ರನ್)  ತಂಡಕ್ಕೆ ಬಲು ತುಂಬಿದರು. ಅವರು ಹಾಕಿದ ಅಡಿಪಾಯದ ಮೇಲೆ ದಿನೇಶ್ ಕಾರ್ತಿಕ್ (ಔಟಾಗದೆ 53) ದೊಡ್ಡ ಮೊತ್ತದ ಮಹಲು ಕಟ್ಟಿದರು. 

ಬೆಂಗಳೂರು ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 196 ರನ್ ಗಳಿಸಿತು. ಬೂಮ್ರಾ ಐದು ವಿಕೆಟ್‌ ಗಳಿಸಿದರು. 

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬೂಮ್ರಾ ಹಾಕಿದ ಒಳ್ಳೆಯ ಲೆಂಗ್ತ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಬ್ಯಾಟ್ ಅಂಚಿಗೆ ತಾಗಿದ ಚೆಂಡು ವಿಕೆಟ್‌ಕೀಪರ್ ಇಶಾನ್ ಕಿಶನ್ ಕೈಸೇರಿತು. ಮುಂಬೈ ತಂಡದ ಆಟಗಾರರು ಸಂತಸದಿಂದ ಕುಣಿದಾಡಿದರು. 

ಟೂರ್ನಿಯಲ್ಲಿ 300ಕ್ಕೂ ಹೆಚ್ಚು ರನ್‌ ಗಳಿಸಿರುವ ಕೊಹ್ಲಿ ಔಟಾದರೆ ಆರ್‌ಸಿಬಿ ಅಲ್ಪಮೊತ್ತಕ್ಕೆ ಕುಸಿಯುವ ಸಾಧ್ಯತೆ ಇತ್ತು. ನಂತರದ ಓವರ್‌ನಲ್ಲಿ ವಿಲ್ ಜ್ಯಾಕ್ಸ್‌ (8 ರನ್) ಕೂಡ ಔಟಾದರು. ಪದಾರ್ಪಣೆ ಪಂದ್ಯದಲ್ಲಿ ಪರಿಣಾಮ ಬೀರಲು ವಿಲ್ ಅವರಿಗೆ ಆಕಾಶ್ ಮದ್ವಾಲ್ ಅಡ್ಡಿಯಾದರು.  

ಈ ಹಂತದಲ್ಲಿ ಫಫ್ ಜೊತೆಗೂಡಿದ ರಜತ್ ಚೆಂದದ ಜೊತೆಯಾಟವಾಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 82 ರನ್‌ ಸೇರಿಸಿದರು. ಇಬ್ಬರೂ ಟೂರ್ನಿಯಲ್ಲಿ ತಮ್ಮ ಮೊದಲ ಅರ್ಧಶತಕ ದಾಖಲಿಸಿದ್ದು ವಿಶೇಷ.  ಇದರಿಂದಾಗಿ ತಂಡದ ಮೊತ್ತವು 12ನೇ ಓವರ್‌ನಲ್ಲಿ ಶತಕದ ಗಡಿ ದಾಟಿತು.  ರಜತ್ ವಿಕೆಟ್ ಗಳಿಸಿದ ಗೆರಾಲ್ಡ್ ಕೋಝಿ ಜೊತೆಯಾಟ ಮುರಿದರು. 

ಮುಂಬೈ ತಂಡದಲ್ಲಿರುವ ಕನ್ನಡಿಗ, ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖಾತೆ ತೆರೆಯಲು ಬಿಡಲಿಲ್ಲ. ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. 

ಕ್ರೀಸ್‌ಗೆ ಬಂದ ದಿನೇಶ್ ಕಾರ್ತಿಕ್ ಅವರು ಫಫ್ ಜೊತೆಗೆ ಚೆಂಡನ್ನು ಬೌಂಡರಿಗೆರೆ ದಾಟಿಸುವಲ್ಲಿ ಮಗ್ನರಾದರು. 17ನೇ ಓವರ್‌ನಲ್ಲಿ ಬೂಮ್ರಾ ಅವರು ಫಫ್ ಮತ್ತು ಮಹಿಪಾಲ್ ಲೊಮ್ರೊರ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. 

ಆದರೆ ದಿನೇಶ್ ಆಟಕ್ಕೆ ಮಾತ್ರ ಇದರಿಂದ ಯಾವುದೇ ವ್ಯತ್ಯಾಸವಾಗಲಿಲ್ಲ. 230.43ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ನಾಲ್ಕು ಸಿಕ್ಸರ್ ಮತ್ತು ಐದು ಬೌಂಡರಿ ಸಿಡಿಸಿದರು. ಒಂದು ಕಡೆ ಬೂಮ್ರಾ ದಾಳಿಗೆ ವಿಕೆಟ್‌ಗಳು ಉರುಳಿದವು. ಇತ್ತ ದಿನೇಶ್ ಆಟವೂ ರಂಗೇರಿತು. ಅದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಿತು. 

ಟೂರ್ನಿಯಲ್ಲಿ ಇದೇ ಮೊದಲ ಸಲ ಕೊಹ್ಲಿ ವೈಫಲ್ಯ ಅನುಭವಿಸಿದರೂ ತಂಡವು ಉತ್ತಮ ಮೊತ್ತ ಕಲೆಹಾಕಲು ಸಾಧ್ಯವಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT