ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024: ಹೋಳಿ ದಿನ ಬೆಂಗಳೂರಿಗೆ ಗೆಲುವಿನ ರಂಗು

ಗ್ಲೆನ್‌ ಮ್ಯಾಕ್ಸ್‌ವೆಲ್, ಸಿರಾಜ್‌ಗೆ ಎರಡು ವಿಕೆಟ್: ಶಶಾಂಕ್ ಸಿಂಗ್, ಜಿತೇಶ್ ಮಿಂಚು
Published 25 ಮಾರ್ಚ್ 2024, 14:02 IST
Last Updated 25 ಮಾರ್ಚ್ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು:ಸೋಮವಾರ ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ಸಿಹಿ ಹೋಳಿಗೆ ಉಣಬಡಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (77; 49ಎ, 4X11, 6X2) ಅರ್ಧಶತಕ ಮತ್ತು ಫಿನಿಷರ್ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ದಿನೇಶ್ ಕಾರ್ತಿಕ್ (ಅಜೇಯ 28; 10ಎ) ಅವರಿಂದಾಗಿ ಬೆಂಗಳೂರು ತಂಡವು 4 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್‌ ಎದುರು ಗೆದ್ದಿತು. ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ ತಂಡವು ಇಲ್ಲಿ ಜಯಿಸಿತು. ಇಂಪ್ಯಾಕ್ಟ್ ಪ್ಲೇಯರ್ ಮಹಿಪಾಲ್ ಲೊಮ್ರೊರ್ ಅವರೂ 8 ಎಸೆತಗಳಲ್ಲಿ 17 ರನ್‌ ಗಳಿಸಿದರು.

177 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ 19.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 178 ರನ್ ಗಳಿಸಿತು. ಇದಕ್ಕೆ ಪ್ರಮುಖವಾಗಿ ಕಾರಣವಾಗಿದ್ದು ಕೊಹ್ಲಿ ಅವರಿಗೆ ಪಂಜಾಬ್ ಫೀಲ್ಡರ್‌ಗಳು ನೀಡಿದ ಎರಡು ಜೀವದಾನಗಳು. ಮೊದಲ ಓವರ್‌ನಲ್ಲಿ ಫೀಲ್ಡರ್ ಜಾನಿ ಬೆಸ್ಟೊ ಸುಲಭ ಕ್ಯಾಚ್ ಕೈಚೆಲ್ಲಿದರು. ಆರನೇ ಓವರ್‌ನಲ್ಲಿ ಫೀಲ್ಡರ್ ಚಾಹರ್ ಅವರು ಕ್ಯಾಚ್ ಪಡೆಯಲು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ. ಇದರಿಂದಾಗಿ ವಿರಾಟ್ ತಮ್ಮ ಅಭಿಮಾನಿಗಳಿಗೆ ಬ್ಯಾಟಿಂಗ್ ರಸದೌತಣ ನೀಡಿದರು.

ಆದರೆ 16ನೇ ಓವರ್‌ನಲ್ಲಿ ವಿರಾಟ್ ವಿಕೆಟ್ ಗಳಿಸುವಲ್ಲಿ ಹರ್ಷಲ್ ಪಟೇಲ್ ಸಫಲರಾದರು. ಆಗ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಆತಂಕಕ್ಕೆ ಜಾರಿದ್ದರು. ಎರಡು ಎಸೆತಗಳ ನಂತರ ಅನುಜ್ ರಾವತ್ (11; 14ಎ) ಕೂಡ ಔಟಾದರು.

ಆಗ ತಂಡದ ಗೆಲುವಿಗೆ 22 ಎಸೆತಗಳಲ್ಲಿ 47 ರನ್‌ಗಳ ಅಗತ್ಯವಿತ್ತು. ಆದರೆ, ಪಂಜಾಬ್ ಬೌಲರ್‌ಗಳ ಉತ್ಸಾಹಕ್ಕೆ ದಿನೇಶ್ ಮತ್ತು ಲೊಮ್ರೊರ್ ತಣ್ಣೀರೆರಚಿದರು. ಅದರಲ್ಲಿಯೂ ಕೊನೆಯ ಎರಡು ಓವರ್‌ಗಳಲ್ಲಿ 24 ರನ್‌ಗಳು ಬೇಕಿದ್ದ ಸಂದರ್ಭವು ಕುತೂಹಲ ಕೆರಳಿಸಿತು. ದಿನೇಶ್ ಅಬ್ಬರಿಸಿದರು. ಹರ್ಷಲ್ ಹಾಕಿದ 19ನೇ ಓವರ್‌ನಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್‌ ಹೊಡದರು. ಇದೊಂದೇ ಓವರ್‌ನಲ್ಲಿ ಒಟ್ಟು 14 ರನ್ ತಂಡದ ಖಾತೆ ಸೇರಿದವು. ಆರ್ಷದೀಪ್ ಹಾಕಿದ ಕೊನೆಯ ಓವರ್‌ನ ಮೊದಲ ಎಸೆತವನ್ನೇ ಪುಲ್‌ ಮಾಡಿದ ದಿನೇಶ್ ಹೊಡೆತಕ್ಕೆ ಸಿಕ್ಸರ್ ದಾಖಲಿಸಿದರು. ಇನ್ನೊಂದು ಎಸೆತವನ್ನು ಬೌಂಡರಿಗೆ ಕಳಿಸಿ ಜಯದ ಸಂಭ್ರಮ ಆಚರಿಸಿದರು.

ಶಿಖರ್ ಬ್ಯಾಟಿಂಗ್: ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್‌ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಸಿರಾಜ್‌ ಅವರು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಜಾನಿ ಬೇಸ್ಟೊ ಅವರ ವಿಕೆಟ್ ಕಬಳಿಸಿದರು. ಈ ಹಂತದಲ್ಲಿ ನಾಯಕ ಶಿಖರ್ ಧವನ್ (45; 37ಎ, 4X5, 6X1) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ ಪ್ರಭಸಿಮ್ರನ್ ಸಿಂಗ್ ಅವರೊಂದಿಗೆ 55 ರನ್‌ ಸೇರಿಸಿದರು. ಮ್ಯಾಕ್ಸ್‌ವೆಲ್ ಹಾಕಿದ 13ನೇ ಓವರ್‌ನಲ್ಲಿ ಶಿಖರ್ ಔಟಾದರು. ಮ್ಯಾಕ್ಸ್‌ವೆಲ್ (3–0–29–2) ಅವರ ಕೈಚಳಕದಿಂದಾಗಿ ಪಂಜಾಬ್ ತಂಡವು 98 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದ ಸ್ಯಾಮ್ ಕರನ್ ಮತ್ತು ಜಿತೇಶ್ ಶರ್ಮಾ ಐದನೇ ವಿಕೆಟ್ ಜೊತೆಯಾಟದಲ್ಲಿ 52 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಕೊನೆಯ ಎಂಟು ಓವರ್‌ಗಳಲ್ಲಿ 78 ರನ್‌ ಸೂರೆ ಮಾಡಲು ಸಾಧ್ಯವಾಯಿತು. ಆರ್‌ಸಿಬಿ ಬೌಲರ್‌ಗಳು ಕೊನೆಯ ಹಂತದ ಓವರ್‌ಗಳಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಲಿಲ್ಲ.

ವಿರಾಟ್ ಟಿ20 ಕ್ರಿಕೆಟ್‌ನಲ್ಲಿ 50ಕ್ಕಿಂತ ಹೆಚ್ಚು ಸ್ಕೋರ್‌ಗಳ ಶತಕ ದಾಖಲಿಸಿದರು. ರೋಹಿತ್ ಶರ್ಮಾ (81)ಹಾಗೂ ಶಿಖರ್ ಧವನ್ (71) ನಂತರದ ಸ್ಥಾನಗಳಲಿದ್ದಾರೆ. ವಿರಾಟ್, ಟಿ20 ಕ್ರಿಕೆಟ್‌ನಲ್ಲಿ ಒಟ್ಟು 173 ಕ್ಯಾಚ್ ಗಳಿಸಿದರು.

ಪಿಚ್‌ಗೆ ನುಗ್ಗಿದ ಕೊಹ್ಲಿ ಅಭಿಮಾನಿ

ಗುರಿ ಬೆನ್ನಟ್ಟಿದ ಆರ್‌ಸಿಬಿಯ ಇನಿಂಗ್ಸ್ ಆರಂಭವಾಗುವ ಹೊತ್ತಿನಲ್ಲಿ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬ ಪಿಚ್‌ಗೆ ನುಗ್ಗಿದ ಘಟನೆ ನಡೆಯಿತು.

ಕ್ರೀಸ್‌ಗೆ ಬಂದು ಗಾರ್ಡ್‌ ತೆಗೆದುಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ ಅವರ ಬಳಿ ಸಾಗಿದ ಅಭಿಮಾನಿ ಕಾಲು ಮುಟ್ಟಿ ನಮಸ್ಕರಿಸಿದ. ಭದ್ರತಾ ಸಿಬ್ಬಂದಿಯು ಧಾವಿಸಿ  ಆ ಯುವಕನನ್ನು ಹೊರಗೆ ಕರೆದುಕೊಂಡು ಹೋದರು.

ಸ್ಕೋರ್ ಕಾರ್ಡ್

ಪಂಜಾಬ್ ಕಿಂಗ್ಸ್: 6ಕ್ಕೆ176 (20 ಓವರುಗಳಲ್ಲಿ)

ಶಿಖರ್ ಸಿ ಕೊಹ್ಲಿ ಬಿ ಮ್ಯಾಕ್‌ವೆಲ್‌ 45 (37ಎ, 4x5, 6x1)

ಬೇಸ್ಟೊ ಸಿ ಕೊಹ್ಲಿ ಬಿ ಸಿರಾಜ್ 8 (6ಎ, 4x2)

ಪ್ರಭಸಿಮ್ರನ್ ಸಿ ರಾವರ್ ಬಿ ಮ್ಯಾಕ್ಸ್‌ವೆಲ್ 25 (17ಎ, 4x2, 6x2)

ಲಿವಿಂಗ್‌ಸ್ಟೋನ್ ಸಿ ರಾವತ್ ಬಿ ಜೋಸೆಫ್ 17 (13ಎ, 4x1, 6x1)

ಕರನ್ ಸಿ ರಾವತ್ ಬಿ ದಯಾಳ್ 23 (17ಎ, 4x3)

ಜಿತೇಶ್ ಸಿ ರಾವತ್ ಬಿ ಸಿರಾಜ್ 27 (20ಎ, 4x1, 6x2)

ಶಶಾಂಕ್ ಔಟಾಗದೇ 21 (8ಎ, 4x1, 6x2)

ಹರ್‌ಪ್ರೀತ್ ಔಟಾಗದೇ 2 (2ಎ)

ಇತರೆ:8(ಬೈ1, ಲೆಗ್‌ಬೈ1, ವೈಡ್‌ 6)

ವಿಕೆಟ್ ಪತನ: 1–17 (ಜಾನಿ ಬೇಸ್ಟೊ, 2.3), 2–72 (ಪ್ರಭಸಿಮ್ರನ್ ಸಿಂಗ್, 8.5), 3–98 (ಲಿಯಾಮ್ ಲಿವಿಂಗ್‌ಸ್ಟೋನ್‌, 11.6), 4–98 (ಶಿಖರ್‌ ಧವನ್, 12.1), 5–150 (ಸ್ಯಾಮ್ ಕರನ್, 17.5), 6–154 (ಜಿತೇಶ್, 18.4).

ಬೌಲಿಂಗ್‌: ಮೊಹಮ್ಮದ್ ಸಿರಾಜ್ 4–0–26–2; ಯಶ್ ದಯಾಳ್ 4–0–23–1; ಅಲ್ಝರಿ ಜೋಸೆಫ್‌ 4–0–43–1; ಕ್ಯಾಮರಾನ್ ಗ್ರೀನ್ 2–0–19–0; ಮಯಂಕ್ ದಾಗರ್ 3–0–34–0; ಗ್ಲೆನ್‌ ಮ್ಯಾಕ್ಸ್‌ಬೆಲ್‌ 3–0–29–2.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 6ಕ್ಕೆ 178 (19.2 ಓವರ್‌)

ವಿರಾಟ್‌ ಸಿ ಹರ್‌ಪ್ರೀತ್ ಬಿ ಹರ್ಷಲ್ 77 (49ಎ, 4X11, 6X2)

ಫಫ್‌ ಸಿ ಕರನ್‌ ಬಿ ರಬಾಡ 3 (7ಎ)

ಗ್ರೀನ್‌ ಸಿ ಶರ್ಮಾ ಬಿ ರಬಾಡ 3 (5ಎ)

ರಜತ್‌ ಬಿ ಹರಪ್ರೀತ್‌ 18 (18ಎ, 4x1, 6x1)

ಮ್ಯಾಕ್ಸ್‌ವೆಲ್‌ ಬಿ ಹರ್‌ಪ್ರೀತ್‌ 3 (5ಎ)

ಅನುಜ್‌ ಬಿ ಸ್ಯಾಮ್ ಕರನ್ 11 (14ಎ, 4X1)

ದಿನೇಶ್ ಔಟಾಗದೇ 28 (10ಎ)

ಮಹಿಪಾಲ್ ಔಟಾಗದೇ 17 (8ಎ)

ಇತರೆ: 18 (ಬೈ2, ಲೆಗ್‌ಬೈ 9, ವೈಡ್‌7)

ವಿಕೆಟ್ ಪತನ: 1-26 (ಫಫ್ ಡು ಪ್ಲೆಸ್‌; 2.4), 2-43 (ಕ್ಯಾಮರಾನ್ ಗ್ರೀನ್; 4.4), 3-86 (ರಜತ್ ಪಾಟೀದಾರ್; 10.3), 4-103 (ಗ್ಲೆನ್ ಮ್ಯಾಕ್ಸ್‌ವೆಲ್; 12.1), 5–130 (ವಿರಾಟ್ ಕೊಹ್ಲಿ, 15.6), 6–130 (ಅನುಜ್ ರಾವತ್, 16.2)

ಬೌಲಿಂಗ್‌: ಸ್ಯಾಮ್‌ ಕರನ್‌ 3–0–30–1, ಆರ್ಷದೀಪ್‌ ಸಿಂಗ್‌ 3.2–40–0, ಕಗಿಸೊ ರಬಾಡ 4–0–23–2, ಹರಪ್ರೀತ್‌ ಬ್ರಾರ್‌ 4–0–13–2, ಹರ್ಷಲ್‌ ಪಟೇಲ್‌ 4–0–45–1, ರಾಹುಲ್‌ ಚಾಹರ್‌ 1–0–16–0

ಪಂದ್ಯದ ಆಟಗಾರ: ವಿರಾಟ್ ಕೊಹ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT