DC vs KKR Qualifier 2: ಫೈನಲ್ ಪ್ರವೇಶಕ್ಕೆ ರಿಷಭ್–ಮಾರ್ಗನ್ ಜಿದ್ದಾಜಿದ್ದಿ

ಶಾರ್ಜಾ: ಮೊದಲ ಪ್ರಶಸ್ತಿ ಜಯದತ್ತ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಡ್ಡಗಾಲು ಹಾಕುವ ಛಲದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಬಳಗವಿದೆ.
ಬುಧವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಸೋಮವಾರ ನಡೆದ ಎಲಿಮಿನೇಟರ್‌ನಲ್ಲಿ ಸುನೀಲ್ ನಾರಾಯಣ್ ಆಲ್‌ರೌಂಡ್ ಆಟದ ಬಲದಿಂದ ಕೋಲ್ಕತ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಿಸಿದೆ. ಅದರಿಂದಾಗಿ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ತಂಡದ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಉತ್ತಮ ಲಯದಲ್ಲಿದ್ದಾರೆ.
ಸ್ಪಿನ್ನರ್ ವರುಣ್ ಚಕ್ರವರ್ತಿ, ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮತ್ತು ಮಧ್ಯಮವೇಗಿ ಲಾಕಿ ಫರ್ಗ್ಯುಸನ್ ತಂಡಕ್ಕೆ ಜಯ ತಂದುಕೊಡುವ ಸಮರ್ಥರು.
ಆದರೆ, ಲೀಗ್ ಹಂತದಲ್ಲಿ ಅಗ್ರಸ್ಥಾನ ಗಳಿಸಿ ಪ್ಲೇ ಆಫ್ ಪ್ರವೇಶಿಸಿದ್ದ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋತಿತ್ತು.
ಟೂರ್ನಿಯಲ್ಲಿ ಅತ್ಯಂತ ಸಮತೋಲಿತ ತಂಡವಾಗಿರುವ ಡೆಲ್ಲಿ ಮಹೇಂದ್ರಸಿಂಗ್ ಧೋನಿಯ ತಂತ್ರಗಾರಿಕೆಯ ಮುಂದೆ ಶರಣಾಗಿತ್ತು. ಅಲ್ಲದೇ ಕೊನೆಯ ಓವರ್‌ನಲ್ಲಿ ಧೋನಿಯನ್ನು ಕಟ್ಟಿಹಾಕುವಲ್ಲಿ ತಂಡದ ಬೌಲರ್ ಟಾಮ್ ಕರನ್ ವಿಫಲರಾಗಿದ್ದರು. ತಂಡದಲ್ಲಿದ್ದ ಅನುಭವಿ ಕಗಿಸೊ ರಬಾಡ ಅವರನ್ನು ಸಮರ್ಥವಾಗಿ ದುಡಿಸಿಕೊಳ್ಳುವಲ್ಲಿ ರಿಷಭ್ ಎಡವಿದ್ದರು.
ಆ ಎಲ್ಲ ಲೋಪಗಳನ್ನೂ ತಿದ್ದಿಕೊಂಡರೆ, ಡೆಲ್ಲಿ ತಂಡವು ಎದುರಾಳಿ ಕೋಲ್ಕತ್ತಾಗೆ ಕಠಿಣ ಸವಾಲೊಡ್ಡಬಹುದು. ಈ ಪಂದ್ಯದಲ್ಲಿ ಜಯಿಸಿ ಫೈನಲ್‌ನಲ್ಲಿ ಮತ್ತೆ ಧೋನಿ ಬಳಗವನ್ನು ಎದುರಿಸಬಹುದು!
ತಂಡಗಳು: ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್, ರಿಪಲ್ ಪಟೇಲ್, ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್, ಎನ್ರಿಚ್ ನಾರ್ಕಿಯಾ, ಆವೇಶ್ ಖಾನ್, ಕಗಿಸೊ ರಬಾಡ, ಟಾಮ್ ಕರನ್, ಆರ್. ಅಶ್ವಿನ್, ಮಾರ್ಕಸ್ ಸ್ಟೋಯಿನಿಸ್, ಅಮಿತ್ ಮಿಶ್ರಾ.
ಕೋಲ್ಕತ್ತ ನೈಟ್ ರೈಡರ್ಸ್: ಏಯಾನ್ ಮಾರ್ಗನ್ (ನಾಯಕ), ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಲಾಕಿ ಫರ್ಗ್ಯುಸನ್, ಶಿವಂ ದುಬೆ, ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಆ್ಯಂಡ್ರೆ ರಸೆಲ್, ಶಕೀಬ್ ಅಲ್ ಹಸನ್, ಪ್ರಸಿದ್ಧ ಕೃಷ್ಣ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.