ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ: ಭಾರತ ಆಟಗಾರರ ತಾಲೀಮು

Published : 16 ಸೆಪ್ಟೆಂಬರ್ 2024, 16:16 IST
Last Updated : 16 ಸೆಪ್ಟೆಂಬರ್ 2024, 16:16 IST
ಫಾಲೋ ಮಾಡಿ
Comments

ಚೆನ್ನೈ: ಬಾಂಗ್ಲಾದೇಶ ಎದುರು ಭಾರತ ತಂಡವು ಗುರುವಾರದಿಂದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಪ್ರಯುಕ್ತ ರೋಹಿತ್‌ ಶರ್ಮಾ ನೇತೃತ್ವದ ಆತಿಥೇಯ ತಂಡದ 16 ಆಟಗಾರರು ಚೆಪಾಕ್‌ನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ತಾಲೀಮು ನಡೆಸಿದರು.

ಭಾರತ ತಂಡದ ಸದಸ್ಯರು ಕಳೆದ ವಾರ ಇಲ್ಲಿಗೆ ಬಂದಿದ್ದು, ಮೂರನೇ ಬಾರಿ ಅಭ್ಯಾಸದಲ್ಲಿ ಕಾಣಿಸಿಕೊಂಡರು. ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್‌ ಅಕ್ಕಪಕ್ಕದ ನೆಟ್ಸ್‌ನಲ್ಲಿ ಬೆವರು ಹರಿಸಿದರು. ಅವರಿಬ್ಬರೂ ವೇಗಿ ಜಸ್‌ಪ್ರೀತ್‌ ಬೂಮ್ರಾ ಮತ್ತು ತವರಿನ ಆಟಗಾರ ರವಿಚಂದ್ರನ್‌ ಅಶ್ವಿನ್‌ ಅವರ ಎಸೆತಗಳನ್ನು ಎದುರಿಸಿದರು.

ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾಗವಹಿಸಿದ ನಂತರ ಇಲ್ಲಿಗೆ ಬಂದ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಅವರೂ ನೆಟ್‌ ಅಭ್ಯಾಸದಲ್ಲಿ ಸಮಯ ಕಳೆದರು. ರೋಹಿತ್‌ ಶರ್ಮಾ ಅವರು ಬಾಂಗ್ಲಾದೇಶದ ನಿಧಾನಗತಿಯ ಬೌಲಿಂಗ್ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಕಸರತ್ತು ನಡೆಸಿದರು.

ರವೀಂದ್ರ ಜಡೇಜ, ರಿಷಭ್‌ ಪಂತ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರೂ ಸ್ಥಳೀಯ ಬೌಲರ್‌ಗಳ ದಾಳಿ ಮತ್ತು ಥ್ರೋಡೌನ್‌ ಎಸೆತಗಳನ್ನು ಎದುರಿಸಿದರು. ಮೊದಲ ಟೆಸ್ಟ್‌ ಪಂದ್ಯ ಆರಂಭಕ್ಕೆ ಮುನ್ನ ಇನ್ನೂ ಎರಡು ಅವಧಿಯಲ್ಲಿ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಲಿದ್ದಾರೆ.

ಭಾರತ ತಂಡದ 11 ಬಳಗದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬ ಕುತೂಹಲ ಮುಂದುವರಿದಿದೆ. ಮೂರು ಸ್ಪಿನ್ನರ್‌ ಮತ್ತು ಇಬ್ಬರು ವೇಗಿಗಳಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಸಿನ್ನರ್‌ಗಳಾದ ಅಶ್ವಿನ್‌, ಜಡೇಜ, ಕುಲದೀಪ್‌ ಯಾದವ್‌, ವೇಗಿಗಳಾದ ಬೂಮ್ರಾ ಮತ್ತು ಸಿರಾಜ್ ಅವರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಮೂರು ಮಾದರಿಗಳಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಅಕ್ಷರ್‌ ಪಟೇಲ್‌ ಹೊರಗುಳಿಯಬೇಕಾಗಬಹುದು.

ಬ್ಯಾಟರ್‌ ಮತ್ತು ವಿಕೆಟ್‌ ಕೀಪರ್‌ ಪಂತ್‌ ಅವರು ಸುಮಾರು ಎರಡು ವರ್ಷಗಳ ನಂತರ ಟೆಸ್ಟ್‌ ಆಡಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಸರಣಿಯಲ್ಲಿ ಗಮನ ಸೆಳೆದ ಬ್ಯಾಟರ್‌ ಧ್ರುವ ಜುರೇಲ್ ಬೆಂಚ್‌ನಲ್ಲಿ ಉಳಿಯುವ ಸಾಧ್ಯತೆಯಿದೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿರುವ ಬಾಂಗ್ಲಾದೇಶ ತಂಡವು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಭಾರತದ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ಛಲದಲ್ಲಿದೆ. ತಂಡದ ಆಟಗಾರರು ಭಾನುವಾರ ಚೆನ್ನೈಗೆ ಬಂದಿದ್ದಾರೆ. ಅವರೂ ಸೋಮವಾರ ಕ್ರೀಡಾಂಗಣದಲ್ಲಿ ಬೆವರು ಹರಿಸಿದರು.

ನೆಟ್‌ ಅಭ್ಯಾಸ ನಡೆಸಿದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ –ಪಿಟಿಐ ಚಿತ್ರ
ನೆಟ್‌ ಅಭ್ಯಾಸ ನಡೆಸಿದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT