ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬ್ಳೆ, ದ್ರಾವಿಡ್‌ಗಿಂತ ತಡವಾಗಿ ಸಚಿನ್‌ಗೆ ಹಾಲ್‌ ಆಫ್‌ ಫೇಮ್‌ ಗೌರವ;ಏನು ಕಾರಣ?

ಕ್ರಿಕೆಟ್‌ ದಿಗ್ಗಜರು
Last Updated 19 ಜುಲೈ 2019, 12:07 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಕ್ರಿಕೆಟ್‌ ರಂಗದಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆ ಹೊಂದಿರುವ ಲಿಟಲ್‌ ಮಾಸ್ಟರ್‌, ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಶುಕ್ರವಾರ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಹಲವು ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿರುವ, ಅಭಿಮಾನಿಗಳ ಪಾಲಿನ ಕ್ರಿಕೆಟ್‌ ದೇವರಾಗಿರುವ ಸಚಿನ್‌ಗೆ ಈ ಗೌರವ ಸಂದಲು ತಡವಾಗಿದ್ದು ಏಕೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಹಾಲ್‌ ಆಫ್‌ ಫೇಮ್‌ ಗೌರವ ಪಡೆದಿರುವಭಾರತದ ಕ್ರಿಕೆಟಿಗರ ಪೈಕಿ ಸಚಿನ್‌ ಆರನೆಯವರು. 2015ರಲ್ಲಿ ಅನಿಲ್‌ ಕುಂಬ್ಳೆ ಹಾಗೂ 2018ರಲ್ಲಿ ರಾಹುಲ್‌ ದ್ರಾವಿಡ್‌ ಈ ಗೌರವ ಪಡೆದಿದ್ದರು.34,357 ರನ್‌, 100 ಅಂತರರಾಷ್ಟ್ರೀಯ ಶತಕ ದಾಖಲೆ ಹೊಂದಿರುವ ಸಚಿನ್‌ 2011ರ ವಿಶ್ವಕಪ್‌ ಗೆಲುವಿನ ತಂಡದ ಭಾಗವಾಗಿದ್ದರು. ಆದರೆ, ಅವರಿಗೂ ಮುನ್ನ ದ್ರಾವಿಡ್‌ಗೆ ಈ ಗೌರವ ಸಂದಿತ್ತು.

ಇದಕ್ಕೆ ಐಸಿಸಿ ನಿಯಮಗಳೇ ಕಾರಣ. ಐಸಿಸಿ ಹಾಲ್‌ ಆಫ್‌ ಫೇಮ್‌ ಸಾಲಿಗೆ ಆಯ್ಕೆಯಾಗುವ ಕ್ರಿಕೆಟಿಗ ವೃತ್ತಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಕನಿಷ್ಠ 5 ವರ್ಷ ಕಳೆದಿರಬೇಕು. ಉತ್ತಮ ಸಾಧನೆಗಳ ದಾಖಲೆ ಹೊಂದಿರುವ ದ್ರಾವಿಡ್‌ 2012ರಲ್ಲಿ ನಿವೃತ್ತಿ ಪಡೆದಿದ್ದರೆ, ಸಚಿನ್‌ ನಿವೃತ್ತರಾಗಿದ್ದು 2013ರಲ್ಲಿ. ಸಚಿನ್ ಅವರಿಗೂ ಮುನ್ನ ದ್ರಾವಿಡ್‌ ಕ್ರಿಕೆಟ್‌ ದಿಗ್ಗಜರ ಕ್ಲಬ್‌ಗೆ ಸೇರ್ಪಡೆಯಾಗಲು ಇದೂ ಸಹ ಪ್ರಮುಖ ಕಾರಣ. ಕುಂಬ್ಳೆ 2008ರಲ್ಲೇ ನಿವೃತ್ತಿ ಪಡೆದರು.

ಆಯ್ಕೆ ಹೇಗೆ?

ಐಸಿಸಿ ನಿಯಮಗಳ ಪ್ರಕಾರ, ಒಬ್ಬ ಬ್ಯಾಟ್ಸ್‌ಮನ್‌ ಈ ಗೌರವಕ್ಕೆ ಪಾತ್ರರಾಗಬೇಕಾದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ 8,000 ರನ್‌ ಕಲೆಹಾಕಿರಬೇಕು.ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಕನಿಷ್ಠ 20 ಶತಕ ಗಳಿಸಿರಬೇಕು. ಬೌಲರ್‌, ಕನಿಷ್ಠ 200 ವಿಕೆಟ್‌ಗಳನ್ನು ಕಬಳಿಸಿರಬೇಕು. ಸ್ಟ್ರೈಕ್‌ ರೇಟ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 50 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 30 ಇರಬೇಕು.

ಭಾರತದ ಬಿಷನ್‌ ಸಿಂಗ್‌ ಬೇಡಿ (2009), ಕಪಿಲ್‌ ದೇವ್‌ (2009), ಸುನಿಲ್‌ ಗವಾಸ್ಕರ್‌ (2009), ಅನಿಲ್‌ ಕುಂಬ್ಳೆ (2015) ಹಾಗೂ ರಾಹುಲ್‌ ದ್ರಾವಿಡ್‌ (2018) ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT