‘ಹ್ಯಾಟ್ರಿಕ್‌’ ವಿಕೆಟ್‌ ಪಡೆದಿದ್ದು ಗೊತ್ತಿರಲಿಲ್ಲ

ಶನಿವಾರ, ಏಪ್ರಿಲ್ 20, 2019
29 °C
ಕಿಂಗ್ಸ್‌ ಇಲೆವನ್‌ ತಂಡದ ಸ್ಯಾಮ್ ಕರನ್‌ ಅಭಿಮತ

‘ಹ್ಯಾಟ್ರಿಕ್‌’ ವಿಕೆಟ್‌ ಪಡೆದಿದ್ದು ಗೊತ್ತಿರಲಿಲ್ಲ

Published:
Updated:
Prajavani

ಮೊಹಾಲಿ (ಪಿಟಿಐ): ‘ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಪಡೆದಿದ್ದೇನೆ ಎಂಬುದು ಆರಂಭದಲ್ಲಿ ಗೊತ್ತಿರಲಿಲ್ಲ. ಈ ಸಾಧನೆ ಅನಿರೀಕ್ಷಿತ. ಇದರಿಂದ ತುಂಬಾ ಖುಷಿಯಾಗಿದೆ’ ಎಂದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಹೇಳಿದ್ದಾರೆ.

20ರ ಹರೆಯದ ಕರನ್‌, ಐ‍‍ಪಿಎಲ್‌ನಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಗಳಿಸಿದ ಅತಿ ಕಿರಿಯ ಬೌಲರ್‌ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಸೋಮವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಈ ಮೂಲಕ ರೋಹಿತ್‌ ಶರ್ಮಾ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದರು.

2009ರ ಲೀಗ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ತಂಡದಲ್ಲಿ ಆಡಿದ್ದ ರೋಹಿತ್‌, ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಪಡೆದಿದ್ದರು. ಆಗ ಅವರ ವಯಸ್ಸು 22 ವರ್ಷ.

ಸ್ಯಾಮ್ ಅಮೋಘ ಬೌಲಿಂಗ್‌ ನೆರವಿನಿಂದ ರವಿಚಂದ್ರನ್‌ ಅಶ್ವಿನ್‌ ನೇತೃತ್ವದ ಕಿಂಗ್ಸ್‌ ಇಲೆವನ್‌ 14ರನ್‌ಗಳಿಂದ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತ್ತು.

ಕಿಂಗ್ಸ್‌ ಇಲೆವನ್‌ ಫ್ರಾಂಚೈಸ್‌ ಈ ಬಾರಿಯ ಆಟಗಾರರ ಹರಾಜಿನಲ್ಲಿ ₹7.2 ಕೋಟಿ ನೀಡಿ ಕರನ್‌ ಅವರನ್ನು ಖರೀದಿಸಿತ್ತು. ಇಂಗ್ಲೆಂಡ್‌ನ ಎಡಗೈ ಮಧ್ಯಮ ವೇಗಿ, ಈ ಸಲದ ಲೀಗ್‌ನಲ್ಲಿ ಮೊದಲ ‘ಹ್ಯಾಟ್ರಿಕ್‌’ ವಿಕೆಟ್‌ ಪಡೆದು ಗಮನ ಸೆಳೆದಿದ್ದಾರೆ.

‘ನಾವು ಪಂದ್ಯ ಗೆದ್ದ ನಂತರ ಸಹ ಆಟಗಾರನೊಬ್ಬ ಹತ್ತಿರ ಬಂದು ನೀನು ‘ಹ್ಯಾಟ್ರಿಕ್‌’ ವಿಕೆಟ್‌ ಪಡೆದಿದ್ದೀಯ ಎಂದು ತಿಳಿಸಿದ. ಅಲ್ಲಿಯವರೆಗೂ ಈ ಸಾಧನೆ ಮಾಡಿದ್ದೇನೆ ಎಂಬ ಅರಿವು ನನಗಿರಲಿಲ್ಲ’ ಎಂದು ಪಂದ್ಯದ ನಂತರ ಕರನ್‌ ಪ್ರತಿಕ್ರಿಯಿಸಿದ್ದಾರೆ.

ಕರನ್‌, ಕ್ರಿಕೆಟ್‌ ಕುಟುಂಬದ ಕುಡಿ. ಅವರ ಅಪ್ಪ ಕೆವಿನ್‌ ಕರನ್‌ ಈ ಹಿಂದೆ ಜಿಂಬಾಬ್ವೆ ತಂಡದಲ್ಲಿ ಆಡಿದ್ದರು. ಅವರ ಸಹೋದರ ಟಾಮ್‌ ಕರನ್‌ ಇಂಗ್ಲೆಂಡ್‌ ತಂಡದ ಸದಸ್ಯನಾಗಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್ ಬೆನ್ನು ನೋವಿನ ಕಾರಣ ಡೆಲ್ಲಿ ಎದುರಿನ ಪಂದ್ಯದಿಂದ ಹಿಂದೆ ಸರಿದಿದ್ದರು. ಹೀಗಾಗಿ ಸ್ಯಾಮ್‌ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿತ್ತು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅವರು 10 ಎಸೆತಗಳಲ್ಲಿ 20ರನ್‌ ಸಿಡಿಸಿದ್ದರು. ಇದರಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು.

ಸ್ಯಾಮ್‌ ಅವರು 18ನೇ ಓವರ್‌ನ ಕೊನೆಯ ಎಸೆತದಲ್ಲಿ ಡೆಲ್ಲಿ ತಂಡದ ಹರ್ಷಲ್‌ ಪಟೇಲ್‌ ವಿಕೆಟ್‌ ಉರುಳಿಸಿದ್ದರು. 20ನೇ ಓವರ್‌ ಬೌಲಿಂಗ್‌ ಮಾಡಿದ ಅವರು ಆರಂಭದ ಎರಡು ಎಸೆತಗಳಲ್ಲಿ ಕಗಿಸೊ ರಬಾಡ ಮತ್ತು ಸಂದೀಪ್‌ ಲಮಿಚಾನೆ ವಿಕೆಟ್‌ ಕೆಡವಿದ್ದರು.

‘ರಬಾಡ ಅವರ ಸಾಮರ್ಥ್ಯ ಏನೆಂಬುದು ಚೆನ್ನಾಗಿ ಗೊತ್ತಿತ್ತು. ‘ಇನ್‌ಸ್ವಿಂಗ್‌ ಯಾರ್ಕರ್‌’ ಹಾಕಿ ಅವರನ್ನು ಬೌಲ್ಡ್‌ ಮಾಡುವ ಯೋಜನೆ ನನ್ನದಾಗಿತ್ತು. ಅದು ಫಲಿಸಿತು’ ಎಂದರು.

‘ಸ್ಥಳೀಯ ಆಟಗಾರರು ಹೇಗೆ ಆಡುತ್ತಾರೆ ಎಂಬುದು ಗೊತ್ತಿರಲಿಲ್ಲ. ಈ ಬಗ್ಗೆ ನಾಯಕ ಅಶ್ವಿನ್‌ ಅಮೂಲ್ಯ ಸಲಹೆಗಳನ್ನು ನೀಡಿದರು. ಯಾರಿಗೆ ಹೇಗೆ ಬೌಲಿಂಗ್‌ ಮಾಡಬೇಕು ಎಂಬುದನ್ನು ಹೇಳಿಕೊಟ್ಟರು. ಅವರ ಅಣತಿಯಂತೆ ಎಸೆತಗಳನ್ನು ಹಾಕಿದೆ’ ಎಂದು ಕರನ್‌ ನುಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !