ಚೆನ್ನೈ: ಮೊಣಕಾಲಿನ ನೋವಿನಿಂದಾಗಿ ಕರ್ನಾಟಕದ ಸಮಿತ್ ದ್ರಾವಿಡ್, ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 19 ವರ್ಷದೊಳಗಿನವರ ಮೊದಲ ‘ಅನಧಿಕೃತ’ ಟೆಸ್ಟ್ ಕ್ರಿಕೆಟ್ ಪಂದ್ಯ ಕಳೆದುಕೊಂಡರು. ಅವರು ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಸಾಧ್ಯತೆಯೂ ಕ್ಷೀಣವಾಗಿದೆ.
ಮೊದಲ ಪಂದ್ಯ ಸೋಮವಾರ ಇಲ್ಲಿ ಆರಂಭವಾಗಿದೆ. ಸಮಿತ್, ಪುದುಚೇರಿಯಲ್ಲಿ ನಡೆದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆಯಿತ್ತು. ಆದರೆ ಅವರು ಯಾವುದೇ ಪಂದ್ಯದಲ್ಲಿ ಆಡಲಿಲ್ಲ. ಭಾರತ ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತ್ತು.
‘ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಅವರು ಸದ್ಯ ಅವರು ಎನ್‌ಸಿಎನಲ್ಲಿದ್ದಾರೆ’ ಎಂದು ಮುಖ್ಯ ಕೋಚ್ ಹೃಷಿಕೇಶ್ ಕಾನಿಟ್ಕರ್ ತಿಳಿಸಿರುವುದಾಗಿ ಇಎಸ್‌ಪಿಎಲ್ ಕ್ರಿಕ್‌ಇನ್ಫೊ ವರದಿ ಮಾಡಿದೆ. ಇದು ಅವರಿಗೆ 19 ವರ್ಷದೊಳಗಿನವರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಕೊನೆಯ ಅವಕಾಶವಾಗಿದೆ. ಅಕ್ಟೋಬರ್ 11ರಂದು ಅವರು 19 ವರ್ಷಕ್ಕೆ ಕಾಲಿಡಲಿದ್ದಾರೆ.
ಸಮಿತ್ ಅವರು ಭಾರತ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ.