ಬುಧವಾರ, ಅಕ್ಟೋಬರ್ 28, 2020
18 °C

ತಾರಸಿ ಮೇಲೆ ನೆಟ್ಸ್‌; ವರ್ಚುವಲ್ ಪಂದ್ಯದಲ್ಲಿ ಪವರ್ ಹಿಟ್ಸ್

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರದ ನಾಲಾಂಚಿರದಲ್ಲಿರುವ ಮನೆ. ತಾರಸಿ ಮೇಲೆ ನೆಟ್ಸ್‌. ವಾರದ ಆರು ದಿನ ಏಳು ತಾಸುಗಳ ಕಠಿಣ ಅಭ್ಯಾಸ. ಒಂದು ದಿನ ವಿಶ್ರಾಂತಿ. ವರ್ಚುವಲ್ ಮಾದರಿಯಲ್ಲಿ ಎದುರಾಳಿ ತಂಡದ ವಿರುದ್ಧ ಪಂದ್ಯ; ಪ್ರಮುಖ ಬೌಲರ್‌ಗಳ ಎಸೆತಗಳ ಪ್ರಯೋಗ ಮಾಡಿ ಪವರ್ ಹಿಟ್ಟಿಂಗ್ ಅಭ್ಯಾಸ...

ಐ‍ಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಇನಿಂಗ್ಸ್‌ಗೆ ಬಲ ತುಂಬಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್, ಕೊರೊನಾ ಕಾಲದ ವಿಷಮ ಸ್ಥಿತಿಯನ್ನು ಸಾಧನೆಗೆ ಬಳಸಿಕೊಂಡ ಬಗೆ ಇದು.

ದೀಪಕ್ ಚಾಹರ್, ಸ್ಯಾಮ್ ಕರನ್, ಲುಂಗಿ ಗಿಡಿ ಮುಂತಾದ ಬೌಲರ್‌ಗಳನ್ನು ಗ್ಯಾಲರಿಗೆ ಅಟ್ಟಿದ ಸಂಜು ಸ್ಯಾಮ್ಸನ್ ವಿಕೆಟ್‌ ಕೀಪಿಂಗ್ ಸಂದರ್ಭದಲ್ಲೂ ಅಸಾಮಾನ್ಯ ಸಾಮರ್ಥ್ಯ ತೋರಿದ್ದಾರೆ. ಇದೆಲ್ಲದರ ಹಿಂದೆ ಪರಿಶ್ರಮದ, ಅರ್ಪಣಾಭಾವದ ಕಥೆ ಇದೆ. ಅವರ ವಿಶಿಷ್ಟ ರೀತಿಯ ಅಭ್ಯಾಸಕ್ಕೆ ನೆರವಾದವರು ಕೇರಳ ತಂಡದ ಮಾಜಿ ನಾಯಕ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ರೈಫಿ ವಿನ್ಸಂಟ್ ಗೋಮಜ್. 

ಲಾಕ್‌ಡೌನ್ ಸಂದರ್ಭದಲ್ಲಿ ಐಪಿಎಲ್‌ಗೆಂದೇ ಸಂಜು ಅಭ್ಯಾಸ ಆರಂಭಿಸಿದ್ದರು. ಆದರೆ ಹೊರಗೆಲ್ಲೂ ಹೋಗಲು ಸಾಧ್ಯವಿಲ್ಲದೇ ಇದ್ದ ಕಾಲ ಅದು. ಆಗ ಸಂಜು ಮತ್ತು ಗೋಮಜ್‌ಗೆ ಹೊಳೆದ ಉಪಾಯ, ಟೆರೇಸ್ ಮೇಲೆ ನೆಟ್ಸ್ ನಿರ್ಮಿಸುವುದು. ಗೋಮಜ್ ಅವರ ಮನೆ ಮೇಲೆಯೇ ಇದನ್ನು ಕಾರ್ಯಗತ ಮಾಡಿದರು. ಲಾಕ್‌ಡೌನ್ ಸ್ವಲ್ಪ ಸಡಿಲಿಕೆ ಆದ ನಂತರ ಸಂಜು ಅವರ ಫ್ಲ್ಯಾಟ್‌ಗೆ  ನೆಟ್ಸ್ ಸ್ಥಳಾಂತರವಾಯಿತು. 

ತಿಂಗಳುಗಳ ಕಾಲ ನಡೆದ ಈ ರೀತಿಯ ಅಭ್ಯಾಸದಲ್ಲಿ ಹೆಚ್ಚು ಉಪಯೋಗವಾದದ್ದು ವರ್ಚುವಲ್ ಪಂದ್ಯಗಳು. ಕಾಲ್ಪನಿಕವಾಗಿ ಎದುರಾಳಿ ತಂಡಗಳನ್ನು, ಅವುಗಳ ಬೌಲರ್‌ ಮತ್ತು ಫೀಲ್ಡರ್‌ಗಳನ್ನು ಸೃಷ್ಟಿಸಿ ನಿಜವಾದ ಪಂದ್ಯದಷ್ಟೇ ಗಂಭೀರವಾಗಿ ಬ್ಯಾಟಿಂಗ್ ಮಾಡಿದರು. ಐಪಿಎಲ್ ನಡೆಯುವ ಸಾಧ್ಯತೆಗಳು ಇಲ್ಲ ಎಂಬ ವದಂತಿ ಹಬ್ಬಿದಾಗ ಕೆಂಪು ಚೆಂಡಿನಲ್ಲಿ ರಣಜಿ ಮಾದರಿಯ ಪಂದ್ಯಗಳ ‘ಮಾಯಾಲೋಕ’ ಸೃಷ್ಟಿಯಾಯಿತು. 

ಆರು ಕೆಜಿ ತೂಕ ಇಳಿಸಿದ ‘ವೆಜ್’

ಕಠಿಣ ಅಭ್ಯಾಸದ ಹಿನ್ನೆಲೆಯಲ್ಲಿ ಆಯಾಸವಾಗದಂತೆ ಎಚ್ಚರ ವಹಿಸಲು ತೂಕ ಇಳಿಸಬೇಕಾಯಿತು. ಇದಕ್ಕಾಗಿ ನಿರ್ದಿಷ್ಟ ಆಹಾರ ತಯಾರಿಸಿಕೊಡಲು ಬಾಣಸಿಗರು ಸಜ್ಜಾದರು. ಎರಡು ತಿಂಗಳು ಸಂಜು ಮಾಂಸಾಹಾರದಿಂದ ದೂರ ಉಳಿದರು. ಆರು ಕಿಲೋ ತೂಕ ಇಳಿಸಲು ಇದು ನೆರವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು